ಬಹುಕೋಟಿ ಕೌಶಲ್ಯಾಭಿವೃದ್ಧಿ ಹಗರಣದ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ತಮ್ಮನ್ನು ಗೃಹಬಂಧನದಲ್ಲಿರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಜಯವಾಡ ಸ್ಥಳೀಯ ನ್ಯಾಯಾಲಯ ವಜಾ ಮಾಡಿದೆ.
ವಿಜಯವಾಡ: ಬಹುಕೋಟಿ ಕೌಶಲ್ಯಾಭಿವೃದ್ಧಿ ಹಗರಣದ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ತಮ್ಮನ್ನು ಗೃಹಬಂಧನದಲ್ಲಿರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಜಯವಾಡ ಸ್ಥಳೀಯ ನ್ಯಾಯಾಲಯ ವಜಾ ಮಾಡಿದೆ. ಹೀಗಾಗಿ ನ್ಯಾಯಾಲಯದ ಆದೇಶ ಪ್ರಶ್ನಿಸಿ, ನಾಯ್ಡು ಇಂದು ಆಂಧ್ರಪ್ರದೇಶ ಹೈಕೋರ್ಟ್ ಮೊರೆ ಹೋಗಲಿದ್ದಾರೆ. ನಾಯ್ಡು ಅವರು ಎಸ್‌ಪಿಜಿ ಭದ್ರತೆ ಪಡೆಯುತ್ತಿದ್ದು ಗೃಹ ಬಂಧನದಲ್ಲಿ ಅದು ಸಾಧ್ಯವಿಲ್ಲ. ಹೀಗಾಗಿ ಜೈಲಲ್ಲೇ ಅವರು ಹೆಚ್ಚು ಸುರಕ್ಷಿತ ಎಂದು ಹೇಳಿದ ಕೋರ್ಟು, ಅರ್ಜಿ ವಜಾ ಮಾಡಿದೆ. ನಾಯ್ಡು ಅವರು ಈಗ ರಾಜಮಹೇಂದ್ರಿ ಜೈಲಿನಲ್ಲಿದ್ದಾರೆ.
ಚಂದ್ರಬಾಬು ನಾಯ್ಡು ಅವರಿಗೆ ಬೆದರಿಕೆಗಳನ್ನು ಉಲ್ಲೇಖಿಸಿ ಅವರ ಪರ ವಕೀಲರಾದ ಜಯಕರ್ ಮಟ್ಟಾ ಅವರು ಗೃಹಬಂಧನ ಕೋರಿ ಅರ್ಜಿ ಸಲ್ಲಿಸಿದ್ದರು. ಬಹುಕೋಟಿ ಕೌಶಲ್ಯಾಭಿವೃದ್ಧಿ ನಿಗಮದ ಹಗರಣದ ಆರೋಪದಲ್ಲಿ ನಾಯ್ಡು ಅವರನ್ನು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸದ್ಯ ರಾಜಮಹೇಂದ್ರವರ್ಮ ಕೇಂದ್ರೀಯ ಕಾರಾಗೃಹದಲ್ಲಿ ನಾಯ್ಡು ಇದ್ದಾರೆ.
ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬಂಧನ
ಏನಿದು ಪ್ರಕರಣ?
2014ರಲ್ಲಿ ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿ ಆಗಿದ್ದಾಗ ಸೀಮನ್ಸ್ ಮತ್ತು ಡಿಸೈನ್ ಟೆಕ್ ಕಂಪನಿಗಳ ತಾಂತ್ರಿಕ ಸಹಯೋಗದಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಆಂಧ್ರದ ವಿವಿಧೆಡೆ ಸ್ಥಾಪಿಸುವ ನಿರ್ಣಯ ಕೈಗೊಂಡಿದ್ದರು. ಇದು 3,300 ಕೋಟಿ ರು. ಯೋಜನೆ ಆಗಿತ್ತು. ಇದರಲ್ಲಿ ಶೇ.90ರಷ್ಟು ಹಣವನ್ನು ಸೀಮನ್ಸ್ ಹಾಕಬೇಕಿತ್ತು.
ಬಾಕಿ ಶೇ.10ರಷ್ಟು ತನ್ನ ಪಾಲಿನ ಹಣವಾದ 371 ಕೋಟಿ ರು.ಗಳನ್ನು ಸರ್ಕಾರ ನೀಡಿತ್ತು. ಆದರೆ ಸೀಮನ್ಸ್ ತನ್ನ ಪಾಲಿನ ಹಣವನ್ನೇ ಹಾಕಲಿಲ್ಲ. ಆದರೂ ಸರ್ಕಾರವು ತನ್ನ ಪಾಲಿನ 371 ಕೋಟಿ ರು.ನಲ್ಲಿ ಕೆಲವೇ ಕೆಲವು ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಿತು. ಮಿಕ್ಕ ಕೇಂದ್ರಗಳನ್ನು ಸ್ಥಾಪಿಸದೇ ಕೇವಲ ಲೆಕ್ಕಪತ್ರದಲ್ಲಿ ಸ್ಥಾಪಿಸಲಾಗಿದೆ ಎಂದು ತೋರಿಸಿ ಹಣವನ್ನು ನಕಲಿ ಕಂಪನಿಗಳಿಗೆ ವರ್ಗಾಯಿಸಿ ದುರುಪಯೋಗ ಮಾಡಿಕೊಂಡಿತ್ತು ಎನ್ನಲಾಗಿತ್ತು. ಚಂದ್ರಬಾಬು ನಾಯ್ಡು, ಅಂದಿನ ಟಿಡಿಪಿ ಅಧ್ಯಕ್ಷ ಟಿ. ಅಚ್ಚಂನಾಯ್ಡು ಮತ್ತು ಇತರ ಕೆಲವರು ಇದರ ಫಲಾನುಭವಿಗಳು ಎಂಬ ಆರೋಪ ಕೇಳಿ ಬಂದಿತ್ತು.
ಏಕರೂಪ ಸಂಹಿತೆ ವಿರುದ್ಧ ನಾಗಾಲ್ಯಾಂಡ್ ಅಸೆಂಬ್ಲಿ ನಿರ್ಣಯ
ಕೊಹಿಮಾ: ಪ್ರಾಸ್ತಾವಿತ ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ವಿರೋಧಿಸಿ, ಅದು ರಾಜ್ಯದಲ್ಲಿ ಜಾರಿಯಾಗದಂತೆ ನಾಗಾಲ್ಯಾಂಡ್ ವಿಧಾನಸಭೆ ಮಂಗಳವಾರ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ. ನಾಗಾಲ್ಯಾಂಡ್ ಶಾಸಕಾಂಗ ಸಭೆಯ 14ನೇ ಸದನದಂದು ಯುಸಿಸಿಯ ಉದ್ದೇಶಿತ ಜಾರಿಯಿಂದ ರಾಜ್ಯವನ್ನು ಮುಕ್ತಗೊಳಿಸುವುದು ಅಥವಾ ರಾಜ್ಯದಲ್ಲಿ ಯುಸಿಸಿ ಜಾರಿಯಾಗದಂತೆ ಮುಖ್ಯಮಂತ್ರಿ ನೆಫಿಯು ರಿಯೊ ನಿರ್ಣಯ ಮಂಡಿಸಿದರು.
ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ 14 ದಿನ ನ್ಯಾಯಾಂಗ ಬಂಧನ, ಆಂಧ್ರದಲ್ಲೇ ರಾಜಕೀಯ ಸಂಚಲನ!
ಈ ವೇಳೆ ಅವರು "ಯುಸಿಸಿಯು ಸಾಂಪ್ರಾದಾಯಿಕ ಕಾನೂನುಗಳು, ಸಾಮಾಜಿಕ ಆಚರಣೆಗಳು ಮತ್ತು ನಾಗಾ ಜನರ ಧಾರ್ಮಿಕ ಆಚರಣೆಗಳಿಗೆ ಬೆದರಿಕೆಯನ್ನುಂಟು ಮಾಡುತ್ತದೆ ಎಂದು ನಾಗಾಲ್ಯಾಂಡ್ ಸರ್ಕಾರ ಮತ್ತು ನಾಗಾ ಜನರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ವೈಯಕ್ತಿಕ ವಿಷಯಗಳ ಮೇಲೆ ಒಂದೇ ಕಾನೂನು ರಚಿಸುವುದು ಯುಸಿಸಿಯ ಸ್ಪಷ್ಟ ಉದ್ದೇಶವಾಗಿದೆ" ಎಂದರು. ಎಲ್ಲಾ ನಾಗರಿಕ ನಿಯಮಗಳನ್ನು ಎಲ್ಲಾ ಧರ್ಮದವರಿಗೆ ಒಂದೇ ತೆರನಾಗಿ ರೂಪಿಸುವುದು ಯುಸಿಸಿ ಉದ್ದೇಶವಾಗಿದೆ.
ಆಗಸ್ಟ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.6.83ಕ್ಕೆ ಇಳಿಕೆ
ನವದೆಹಲಿ: ದೇಶದಲ್ಲಿ ಆಹಾರ ಪದಾರ್ಥಗಳ ಮೇಲಿನ ಬೆಲೆ ಇಳಿಸುವಿಕೆಯಿಂದಾಗಿ ದೇಶದಲ್ಲಿ ಆಗಸ್ಟ್ ತಿಂಗಳ ಚಿಲ್ಲರೆ ಹಣದುಬ್ಬರವು ಶೇ.6.83ಕ್ಕೆ ಇಳಿಕೆಯಾಗಿದೆ. ಗ್ರಾಹಕ ಬೆಲೆ ಸೂಚ್ಯಂಕವು (ಸಿಪಿಐ) ಜುಲೈ ತಿಂಗಳಿನಲ್ಲಿ ಶೇ.7.44ರಷ್ಟಿತ್ತು. ಕಳೆದ ವರ್ಷ ಆಗಸ್ಟ್‌ನಲ್ಲಿ ಶೇ.7ರಷ್ಟಿತ್ತು. ಕೇಂದ್ರ ಸರ್ಕಾರ ಆಹಾರ ಪದಾರ್ಥಗಳ ಮೇಲಿನ ಬೆಲೆ ಕಡಿತಗೊಳಿಸಲು ಕ್ರಮ ಕೈಗೊಂಡ ಪರಿಣಾಮ ಆಹಾರ ಹಣದುಬ್ಬರವು ಜುಲೈ ತಿಂಗಳಿನ ಶೇ.11.54 ನಿಂದ ಶೇ.9.94ಕ್ಕೆ ಇಳಿಕೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ 2023-24ನೇ ಸಾಲಿನ ಗ್ರಾಹಕ ಬೆಲೆ ಸೂಚ್ಯಂಕದ ಹಣದುಬ್ಬರವನ್ನು ಶೇ.5.4ರಷ್ಟು ಇರಲಿದೆ ಎಂದು ಅಂದಾಜಿಸಿದೆ.