ಬಿಜೆಪಿಗೆ ಶಾಕ್ ಕೊಟ್ಟ ಮಮತಾ: ರಾಯ್ ಮರಳಿ ಟಿಎಂಸಿಗೆ!

By Kannadaprabha NewsFirst Published Jun 12, 2021, 8:12 AM IST
Highlights

* 4 ವರ್ಷಗಳ ಹಿಂದೆ ಪಕ್ಷ ತೊರೆದಿದ್ದ ಹಿರಿಯ ನಾಯಕನಿಗೆ ಮತ್ತೆ ಮಣೆ

* ಬಿಜೆಪಿಗೆ ದೀದಿ ಶಾಕ್‌: ರಾಯ್‌ ಮರಳಿ ಟಿಎಂಸಿಗೆ

* ಪಕ್ಷ ತೊರೆದವರ ಆಹ್ವಾನಿಸುವ ಮೂಲಕ ಬಿಜೆಪಿಗೆ ಪರೋಕ್ಷ ಎಚ್ಚರಿಕೆ

ಕೋಲ್ಕತಾ(ಜೂ.12): 4 ವರ್ಷಗಳ ಹಿಂದೆ ಟಿಎಂಸಿಗೆ ವಿದಾಯ ಹೇಳಿ ಬಿಜೆಪಿ ಸೇರಿದ್ದ ಮುಕುಲ್‌ ರಾಯ್‌, ಶುಕ್ರವಾರ ಮರಳಿ ತೃಣಮೂಲ ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ. ಇಂಥದ್ದೊಂದು ಘರ್‌ವಾಪಸಿಗೆ ಅನುಮತಿ ನೀಡುವ ಮೂಲಕ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ, ಬಂಗಾಳದಲ್ಲಿ ಬೇರೂರಲು ಯತ್ನಿಸುತ್ತಿರುವ ಬಿಜೆಪಿಗೆ ಭರ್ಜರಿ ಏಟು ನೀಡಿದ್ದಾರೆ. ಶುಕ್ರವಾರ ಇಲ್ಲಿ ದಿಢೀರ್‌ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಕುಲ್‌ರಾಯ್‌ ಮತ್ತು ಅವರ ಪುತ್ರ ಸುಬ್ರಾನ್ಷು ರಾಯ್‌ ಅವರನ್ನು ಸ್ವತಃ ದೀದಿ ಪಕ್ಷಕ್ಕೆ ಆಹ್ವಾನಿಸಿದರು.

ನಾರದ ಸ್ಟಿಂಗ್‌ ಕೇಸಲ್ಲಿ ಮುಕುಲ್‌ ಹೆಸರು ಕೇಳಿಬರುತ್ತಲೇ ಅವರನ್ನು ಟಿಎಂಸಿಯಲ್ಲಿ ನಿಧಾನವಾಗಿ ಕಡೆಗಣಿಸಲು ಆರಂಭಿಸಲಾಗಿತ್ತು. ಇದರ ಸುಳಿವು ಪಡೆದ ಮುಕುಲ್‌ 2017ರಲ್ಲಿ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಬಳಿಕ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿಯೂ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಟಿಎಂಸಿ ಪಾಳಯದಿಂದ ಹಾರಿದ ಸುವೆಂದು ಅಧಿಕಾರಿಗೆ ಬಿಜೆಪಿಯಲ್ಲಿ ಹೆಚ್ಚಿನ ಮನ್ನಣೆ ನೀಡಿದ್ದು, ವಿಧಾನಸಭಾ ಚುನಾವಣೆಯಲ್ಲೂ ಅವರನ್ನೇ ಹೆಚ್ಚಾಗಿ ಬಿಜೆಪಿ ಕೇಂದ್ರ ನಾಯಕರು ಅವಲಂಬಿಸಿದ್ದರು. ಇದರ ಸುಳಿವು ಪಡೆದ ಮಮತಾ ಕೂಡಾ ಚುನಾವಣಾ ರಾರ‍ಯಲಿಗಳಲ್ಲಿ ಮುಕುಲ್‌ ಬಗ್ಗೆ ಹೆಚ್ಚಿನ ಟೀಕೆ ಮಾಡದೇ ಸುಮ್ಮನಾಗಿದ್ದರು. ಇದೀಗ ಸಮಯ ನೋಡಿ ರಾಯ್‌ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿಗೆ ಶಾಕ್‌ ನೀಡಿದ್ದಾರೆ.

ಇನ್ನಷ್ಟು ನಾಯಕರು ಟಿಎಂಸಿಗೆ

ಇದೇ ವೇಳೆ ಮುಂದಿನ ದಿನಗಳಲ್ಲಿ ಇನ್ನಷ್ಟುಜನರು ಪಕ್ಷಕ್ಕೆ ಮರಳಲಿದ್ದಾರೆ. ನಿಮಗೆ ಗೊತ್ತಿರಬೇಕಿಲ್ಲ ಓಲ್ಡ್‌ ಈಸ್‌ ಆಲ್ವೇಸ್‌ ಗೋಲ್ಡ್‌ ಎನ್ನುವ ಮೂಲಕ ಬಿಜೆಪಿ ಸೇರಿರುವ ನಾಯಕರು ಟಿಎಂಸಿಗೆ ಮರಳುವ ಸುಳಿವನ್ನು ಮಮತಾ ನೀಡಿದ್ದಾರೆ.

ಮುಕುಲ್‌ಗೆ ಬಿಜೆಪಿಯಲ್ಲಿ ಕಿರುಕುಳ: ಮಮತಾ

ಮುಕುಲ್‌ ಮನೆಗೆ ಮರಳಿದ್ದಾರೆ. ಅವರೆಂದೂ ಇತರರಂತೆ ದ್ರೋಹಿಗಳಾಗಿರಲಿಲ್ಲ. ಬಿಜೆಪಿಯಲ್ಲಿದ್ದ ವೇಳೆ ಮುಕುಲ್‌ಗೆ ಬೆದರಿಕೆ ಹಾಕಲಾಗುತ್ತಿತ್ತು. ಹೀಗಾಗಿಯೇ ಅವರ ಆರೋಗ್ಯ ಹದಗೆಟ್ಟಿತ್ತು. ಮುಕುಲ್‌ ಪಕ್ಷಕ್ಕೆ ಮರಳಿದ್ದು, ಬಿಜೆಪಿಯು ಯಾರನ್ನೂ ಶಾಂತಿಯಿಂದ ಇರಲು ಬಿಡುವುದಿಲ್ಲ, ಎಲ್ಲರ ಮೇಲೂ ಒತ್ತಡ ಹೇರುತ್ತದೆ ಎಂಬುದನ್ನು ಸಾಬೀತುಪಡಿಸಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ವಿಪಕ್ಷಗಳನ್ನು ಗುರಿ ಮಾಡುತ್ತಿದೆ.

ಬಿಜೆಪಿಯಲ್ಲಿ ಯಾರು ಇರಲಾರರು: ರಾಯ್‌

ಮತ್ತೆ ಹಳೆಯ ಸ್ನೇಹಿತರನ್ನು ನೋಡಿ ಖುಷಿಯಾಗುತ್ತಿದೆ. ನಾನು ಬಿಜೆಪಿಗೆ ತೆರಳಿದ ಮೇಲೆ ಅಲ್ಲಿ ಇರಲಾಗಲಿಲ್ಲ. ಇನ್ನೆಂದೂ ನಾನು ಬಿಜೆಪಿಗೆ ಹೋಗಲಾರೆ. ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ಯಾರೂ ಉಳಿಯಲಾರರು. ಮಮತಾ ಒಬ್ಬರೇ ಬಂಗಾಳ ಮತ್ತು ಭಾರತ ಎರಡಕ್ಕೂ ಇರುವ ಏಕೈಕ ನಾಯಕಿ. ನನಗೆ ಮಮತಾ ಬ್ಯಾನರ್ಜಿ ಅವರೊಂದಿಗೆ ಎಂದಿಗೂ ಭಿನ್ನಾಭಿಪ್ರಾಯ ಇರಲಿಲ್ಲ.

click me!