
ಮುಂಬೈ (ನ.18) ಮುಕೇಶ್ ಅಂಬಾನಿ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಮೂಲಕ ಭಾರಿ ಪೈಪೋಟಿ ನೀಡುತ್ತಿದ್ದಾರೆ. ಇದರ ನಡುವೆ ಭಾರತದಲ್ಲಿ ಇಂಟರ್ನೆಟ್ ಸೇವೆ ಸೇರಿದಂತೆ ಇತರ ಸೇವೆಗೆ ಅಮೆರಿಕ ಎಲಾನ್ ಮಸ್ಕ್ ಮಾಲೀಕತ್ವದ ಸ್ಟಾರ್ ಲಿಂಕ್ ಭಾರಿ ಪ್ರಯತ್ನ ಮಾಡುತ್ತಿದೆ. ಇದರಿಂದ ಅಂಬಾನಿ ಆತಂಕಗೊಂಡಿದ್ದು ಸುಳ್ಳಲ್ಲ. ಇದೀಗ ಮುಕೇಶ್ ಅಂಬಾನಿ ಪ್ಲಾನ್‌ಗೆ ಎಲಾನ್ ಮಸ್ಕ್ ಬೆಚ್ಚಿ ಬಿದ್ದಿದ್ದಾರೆ. ರಿಲಯನ್ಸ್ ಜಿಯೋ ಇದೀಗ ಬರೋಬ್ಬರಿ 1600 ಸ್ಯಾಟಲೈಟ್ ನೆಟವರ್ಕ್ ನಿರ್ಮಾಣಕ್ಕೆ ಮುಂದಾಗಿದೆ. ಈ ಮೂಲಕ ಭಾರತ ಮಾತ್ರವಲ್ಲ ಇತರ ದೇಶಗಳಿಗೂ ಜಿಯೋ ಇಂಟರ್ನೆಟ್ ಸೌಲಭ್ಯ ವಿಸ್ತರಣೆ ಮಾಡಲು ಮುಂದಾಗಿದೆ.
ಜಿಯೋ ಪ್ಲಾಟ್‌ಫಾರ್ಮ್ ಲಿಮಿಟೆಡ್ ಇತ್ತೀಟೆಗೆ ಷೇರುಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಇದೀಗ ಬಾಹ್ಯಾಕಾಶದಲ್ಲಿ ಸಂಚಲನಕ್ಕೆ ಸಜ್ಜಾಗಿದೆ. ಲೋ ಅರ್ಥ್ ಆರ್ಬಿಟ್ ಸ್ಯಾಟಲೈಟ್ ನೆಟ್‌ವರ್ಕ್ ಸ್ಥಾಪಿಸಲು ರಿಲಯನ್ಸ್ ಜಿಯೋ ಮುಂದಾಗಿದೆ. ಲಕ್ಷ ಕೋಟಿ ರೂಪಾಯಿ ಯೋಜನೆಗೆ ರಿಲಯನ್ಸ್ ಜಿಯೋ ಈಗಾಗಲೇ ಭಾರತದ ಉಪಗ್ರಹ ತಯಾರಕರು, ಸ್ಟಾರ್ಟ್ಅಪ್ ಸಂಸ್ಥೆ, ಕೈಗಾರಿಕಾ ವಲಯ ಸೇರಿದಂತೆ ಪ್ರಮುಖರ ಜೊತೆ ಮಾತುಕತೆ ನಡೆಸುತ್ತಿದೆ. ಆರಂಭಿಕ ಹಂತದ ಮಾತುಕತೆ ಯಶಸ್ವಿಯಾಗಿದ್ದು ಶೀಘ್ರದಲ್ಲೇ ಹೊಸ ಘೋಷಣೆಗಳು ಹೊರಬೀಳಲಿದೆ.
ಭಾರತ ಸದ್ಯ 10 ರಿಂದ 15 ಉಪಗ್ರಹ ನಿರ್ಮಾಣ ಮಾಡುತ್ತಿದೆ. ಆದರೆ ರಿಲಯನ್ಸ್ 1600 ಉಪಗ್ರಹ ಹಾರಿಸಲು ಸಜ್ಜಾಗಿದೆ. ಇದಕ್ಕಾಗಿ ಭಾರತದಲ್ಲೇ ವಾರ್ಷಿಕ 200 ಸ್ಯಾಟಲೈಟ್ ಉತ್ಪಾದನೆ ಗುರಿ ಇಟ್ಟುಕೊಂಡಿದೆ. ಇನ್ನು 400 ಸ್ಯಾಟಲೈಟ್‌ನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲು ಮುಂದಾಗಿದೆ. ಇದರಿಂದ ತ್ವರಿತಗತಿಯಲ್ಲಿ ರಿಲಯನ್ಸ್ ಯೋಜನೆಯ ಸ್ಯಾಟಲೈಟ್ ಸಿದ್ದವಾಗಲಿದೆ. 2027ರ ಸೆಪ್ಟೆಂಬರ್‌ನಲ್ಲಿ ಪರೀಕ್ಷಾರ್ಥ ಮಿಷನ್ ನಡೆಯಲಿದೆ. 2028ರಲ್ಲಿ ಕಮರ್ಷಿಯಲ್ ಸೇವೆ ಆರಂಭಿಸಲು ರಿಲಯನ್ಸ್ ಜಿಯೋ ಪ್ಲಾನ್ ಮಾಡಿಕೊಂಡಿದೆ.
ರಿಲಯನ್ಸ್ ಸ್ಯಾಟಲೈಟ್ ನೆಟ್‌ವರ್ಕ್ ಅತ್ಯಂತ ಮಹತ್ವಕಾಂಕ್ಷೆ ಯೋಜನೆಯಾಗಿದೆ. ಈಗಾಗಲೇ ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ಅಮೆರಿಕ ಸೇರಿದಂತೆ ಕೆಲ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತಕ್ಕೂ ಕಾಲಿಡಲು ಪ್ರಯತ್ನಿಸುತ್ತಿದೆ. ಆದರೆ ಸ್ಟಾರ್ ಲಿಂಕ್‌ಗೆ ಪ್ರತಿಸ್ಪರ್ಧಿಯಾಗಿ ಭಾರತದಲ್ಲಿ ಸ್ಯಾಟಲೈಟ್ ನೆಟ್‌ವರ್ಕ್‌ನ್ನು ಜಿಯೋ ನೀಡಲು ಮುಂದಾಗಿದೆ. ಇದರ ಜೊತೆಗೆ ವಿದೇಶಗಳಿಗೂ ಸೇವೆ ವಿಸ್ತರಿಸಲು ಜಿಯೋ ಮುಂದಾಗಿದೆ. ಇದೇ ವೇಳೆ ಚೀನಾದ ಯಾವುದೇ ಕಂಪನಿಗಳನ್ನು ಈ ಯೋಜನೆಯಲ್ಲಿ ಪರಿಗಣಿಸದಿರಲು ನಿರ್ಧರಿಸಿದೆ. ಪ್ರಮುಖವಾಗಿ ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸ್ಯಾಟಲೈಟ್ ಇಂಟರ್ನೆಟ್ ಮೂಲಕ ಭಾರತದ ಪ್ರತಿ ಗ್ರಾಮ, ಪ್ರತಿ ಹಳ್ಳಿಗೂ ಇಂಟರ್ನೆಟ್ ತಲುಪಲಿದೆ. ಅತ್ಯಂತ ಹೈಸ್ಪೀಡ್ ಇಂಟರ್ನೆಟ್ ಸಿಗಲಿದೆ. ಇಷ್ಟೇ ಅಲ್ಲ ಭಾರತದ ಗಡಿಗಳಲ್ಲಿ ಈ ಸ್ಯಾಟಲೈಟ್ ಕಣ್ಗಾವಲು ದೇಶದ ಭದ್ರತಾ ವ್ಯವಸ್ಥೆಗೂ ನೆರವಾಗಲಿದೆ. ಪ್ರಮುಖವಾಗಿ ಸ್ವದೇಶಿ ನಿಯಂತ್ರಣದ ಸ್ಯಾಟಲೈಟ್ ಭಾರತದ ಸುರಕ್ಷತೆಯಲ್ಲೂ ಪ್ರಮುಖ ಪಾತ್ರ ನಿರ್ವಹಿಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ