ಪ್ರಕರಣದಿಂದ ಖುಲಾಸೆಯಾಗಿದ್ದರೂ 7 ವರ್ಷ ಜೈಲಲ್ಲೇ ಕಳೆದ ವ್ಯಕ್ತಿ, 30 ಲಕ್ಷ ಪರಿಹಾರ ನೀಡಿದ ಸುಪ್ರೀಂ ಕೋರ್ಟ್‌

Published : Nov 18, 2026, 05:28 PM IST
supreme court

ಸಾರಾಂಶ

ಕೊ* ಪ್ರಕರಣವೊಂದರಲ್ಲಿ ಹೈಕೋರ್ಟ್‌ನಿಂದ ಖುಲಾಸೆಯಾಗಿದ್ದರೂ, ಆದೇಶದ ಪ್ರತಿ ಜೈಲು ಅಧಿಕಾರಿಗಳಿಗೆ ತಲುಪದ ಕಾರಣ 7 ವರ್ಷಗಳ ಕಾಲ ಅನಗತ್ಯವಾಗಿ ಜೈಲುವಾಸ ಅನುಭವಿಸಿದ ಛತ್ತೀಸ್‌ಗಢದ ದೇವಿಲಾಲ್ ಗೊಂಡ್ ಅವರಿಗೆ ₹30 ಲಕ್ಷ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ಛತ್ತೀಸ್‌ಗಢ ಸರ್ಕಾರಕ್ಕೆ ಆದೇಶಿಸಿದೆ.

ನವದೆಹಲಿ (ನ.18): ಕೊ** ಪ್ರಕರಣವೊಂದರಲ್ಲಿ ಹೈಕೋರ್ಟ್‌ನಿಂದ ಖುಲಾಸೆಯಾದ (Acquitted) ನಂತರವೂ ಏಳು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದ ಛತ್ತೀಸ್‌ಗಢದ ವ್ಯಕ್ತಿಯೊಬ್ಬರಿಗೆ ₹30 ಲಕ್ಷ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ (Supreme Court) ಸೋಮವಾರ ಆದೇಶ ನೀಡಿದೆ. ಈ ಘಟನೆಯನ್ನು 'ಸಾಂಸ್ಥಿಕ ನಿರಾಸಕ್ತಿ' (Institutional apathy) ಎಂದು ಕರೆದಿರುವ ಸರ್ವೋಚ್ಚ ನ್ಯಾಯಾಲಯ, 'ವ್ಯವಸ್ಥೆ ನಿಧಾನವಾಗಿಲ್ಲ, ಬದಲಾಗಿ ಸಂಪೂರ್ಣ ಮುರಿದುಹೋಗಿದೆ' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ವರದಿಗಳ ಪ್ರಕಾರ, ದೇವಿಲಾಲ್ ಗೊಂಡ್ (Devilal Gond) ಎಂಬುವವರು ಕೊ** ಪ್ರಕರಣದ ವಿಚಾರಣೆ ಎದುರಿಸುತ್ತಿದ್ದಾಗ ಏಳು ವರ್ಷಗಳ ಕಾಲ ಜೈಲಿನಲ್ಲಿದ್ದರು. ಆದರೆ, ಹೈಕೋರ್ಟ್ ಅವರನ್ನು ನಿರ್ದೋಷಿ ಎಂದು ಖುಲಾಸೆಗೊಳಿಸಿದ ನಂತರವೂ ಅವರ ಸಂಕಷ್ಟ ಕೊನೆಗೊಳ್ಳಲಿಲ್ಲ. ಹೈಕೋರ್ಟ್‌ನ ಖುಲಾಸೆ ಆದೇಶವು ಅವರಿಗಾಗಲಿ ಅಥವಾ ಜೈಲು ಅಧಿಕಾರಿಗಳಿಗಾಗಲಿ ತಲುಪದ ಕಾರಣ, ಅವರು ಮತ್ತೆ ಏಳು ವರ್ಷಗಳ ಕಾಲ ಅನಗತ್ಯವಾಗಿ ಜೈಲುವಾಸ ಅನುಭವಿಸುವಂತಾಯಿತು.

ಅಮೂಲ್ಯ ಯೌವನ ಕಳೆದುಕೊಂಡ ಯುವಕ: ನ್ಯಾಯಪೀಠ ತೀವ್ರ ಕಳವಳ

ನ್ಯಾಯಮೂರ್ತಿಗಳಾದ ಅಗಸ್ಟೀನ್ ಜಾರ್ಜ್ ಮಸಿಹ್ (Augustine George Masih) ಮತ್ತು ಸಂಜೀವ್ ಸಚ್‌ದೇವ (Sanjeev Sachdeva) ಅವರನ್ನೊಳಗೊಂಡ ನ್ಯಾಯಪೀಠವು, ಅಕ್ರಮ ಅಥವಾ ತಪ್ಪು ಸೆರೆವಾಸಕ್ಕೆ (Wrongful incarceration) ಒಳಗಾದ ವ್ಯಕ್ತಿಗಳಿಗೆ ಪರಿಹಾರ ನೀಡಲು ಶಾಸನಬದ್ಧ ವ್ಯವಸ್ಥೆ ಇಲ್ಲದಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು ಹಾಗೂ ಗೊಂಡ್ ಅವರಿಗೆ ಪರಿಹಾರ ಪಾವತಿಸುವಂತೆ ಛತ್ತೀಸ್‌ಗಢ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಖುಲಾಸೆ ಆದೇಶವು ಜೈಲು ಅಧಿಕಾರಿಗಳಿಗೆ ತಲುಪಲು ವಿಫಲವಾದ 'ಸಂವಹನ ಲೋಪ'ವೇ (Communication lapse) ಅವರ ನಿರಂತರ ಜೈಲುವಾಸಕ್ಕೆ ಕಾರಣ ಎಂದು ನ್ಯಾಯಾಲಯ ಹೇಳಿದೆ. ಸಕಾಲದಲ್ಲಿ ಅವರ ಬಿಡುಗಡೆಯನ್ನು ಖಚಿತಪಡಿಸುವಲ್ಲಿ ಕ್ರಿಮಿನಲ್ ನ್ಯಾಯ ವ್ಯವಸ್ಥೆ ವಿಫಲವಾಗಿದೆ ಎಂದು ಪೀಠ ಬಣ್ಣಿಸಿದೆ.

ಗೊಂಡ್ ಅವರು ಖುಲಾಸೆಯಾದಾಗ ಅವರಿಗೆ ಸುಮಾರು 28 ವರ್ಷ ವಯಸ್ಸಾಗಿತ್ತು, ಆದರೆ ಅವರು ಬಿಡುಗಡೆಯಾಗುವ ವೇಳೆಗೆ 35 ವರ್ಷ ವಯಸ್ಸಾಗಿತ್ತು ಎಂಬುದನ್ನು ನ್ಯಾಯಪೀಠ ಗಮನಿಸಿತು. ಆ ಏಳು ವರ್ಷಗಳಲ್ಲಿ ಅವರು ತಮ್ಮ ಸ್ವಾತಂತ್ರ್ಯ, ಜೀವನೋಪಾಯ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯ ಅವಕಾಶಗಳನ್ನು ಕಳೆದುಕೊಂಡರು; ಜೊತೆಗೆ ದೀರ್ಘಕಾಲದ ಸೆರೆವಾಸದ ದೈಹಿಕ ಮತ್ತು ಮಾನಸಿಕ ಪರಿಣಾಮಗಳನ್ನು ಅನುಭವಿಸಿದರು.

ಪ್ರಕರಣದ ಹಿನ್ನೆಲೆ ಏನು? 2012ರಿಂದ 2025ರವರೆಗಿನ ಪಯಣ

ಕೊ* ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೇವಿಲಾಲ್ ಗೊಂಡ್ ಅವರನ್ನು ಡಿಸೆಂಬರ್ 2012ರಲ್ಲಿ ಬಂಧಿಸಲಾಗಿತ್ತು. ಆಗಸ್ಟ್ 2013ರಲ್ಲಿ ಸೆಷನ್ಸ್ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302ರ (ಕೊಲೆ) ಅಡಿಯಲ್ಲಿ ಅವರನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, 2018ರಲ್ಲಿ ಹೈಕೋರ್ಟ್ ಅವರ ಶಿಕ್ಷೆಯನ್ನು ರದ್ದುಗೊಳಿಸಿ ಖುಲಾಸೆಗೊಳಿಸಿತ್ತು. ಆದೇಶ ತಲುಪದ ಕಾರಣ 7 ವರ್ಷ ಜೈಲಿನಲ್ಲೇ ಇದ್ದ ಗೊಂಡ್ ಅವರು ಕೊನೆಗೂ ಮೇ 2025ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು.

ಜೈಲು ಅಧಿಕಾರಿಗಳು ಮತ್ತು ಕಾನೂನು ನೆರವು (Legal aid) ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯೇ ಈ ದೀರ್ಘಕಾಲದ ಸೆರೆವಾಸಕ್ಕೆ ಕಾರಣ ಎಂದು ಛತ್ತೀಸ್‌ಗಢ ಸರ್ಕಾರ ಹೇಳಿದೆ. 2018ರಲ್ಲಿ ಮೇಲ್ಮನವಿಯ ಸ್ಥಿತಿಗತಿ ಕುರಿತು ಮಾಹಿತಿ ಕೋರಿ ಜೈಲು ಅಧೀಕ್ಷಕರು ಬರೆದಿದ್ದ ಪತ್ರಗಳಿಗೆ ಯಾವುದೇ ಉತ್ತರ ಬಂದಿರಲಿಲ್ಲ ಎಂದು ಸರ್ಕಾರ ತಿಳಿಸಿದೆ.

21ನೇ ವಿಧಿಯ ಉಲ್ಲಂಘನೆ & ಆನ್‌ಲೈನ್ ವ್ಯವಸ್ಥೆಗೆ ಸುಪ್ರೀಂ ಕೋರ್ಟ್ ಕರೆ

"ಸಂವಿಧಾನದ 21ನೇ ವಿಧಿಯು (Article 21) ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸುತ್ತದೆ. ಕಾನೂನಿನ ಸರಿಯಾದ ಪ್ರಕ್ರಿಯೆಯನ್ನು ಹೊರತುಪಡಿಸಿ ಅದನ್ನು ಕಸಿದುಕೊಳ್ಳುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದ್ದು, ಇದಕ್ಕೆ ರಾಜ್ಯ ಸರ್ಕಾರವೇ ಸಂಪೂರ್ಣ ಹೊಣೆಯಾಗಿರುತ್ತದೆ" ಎಂದು ಸುಪ್ರೀಂ ಕೋರ್ಟ್ ಪೀಠ ಸ್ಪಷ್ಟಪಡಿಸಿದೆ. ಸಂವಿಧಾನದ 32 ಮತ್ತು 226ನೇ ವಿಧಿಗಳ ಅಡಿಯಲ್ಲಿ ಸಾರ್ವಜನಿಕ ಕಾನೂನು ಪ್ರಕ್ರಿಯೆಗಳಲ್ಲಿ ಹಣಕಾಸಿನ ಪರಿಹಾರವನ್ನು ನೀಡುವುದು ಇಂತಹ ಉಲ್ಲಂಘನೆಗಳಿಗೆ ಪರಿಣಾಮಕಾರಿ ಪರಿಹಾರವಾಗಿದೆ; ಇದು ಸಂತ್ರಸ್ತರಿಗೆ ಸಾಂತ್ವನ ನೀಡುವುದರ ಜೊತೆಗೆ ಸಾಂಸ್ಥಿಕ ನಿರಾಸಕ್ತಿಯ ವಿರುದ್ಧ ಎಚ್ಚರಿಕೆಯ ಗಂಟೆಯಾಗಿ ಕೆಲಸ ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ. ಇಂತಹ ಲೋಪಗಳು ಮರುಕಳಿಸದಂತೆ ತಡೆಯಲು 'ಆನ್‌ಲೈನ್ ಕ್ರಿಮಿನಲ್ ಜಸ್ಟೀಸ್ ಇಕೋಸಿಸ್ಟಮ್' (Online Criminal Justice Ecosystem) ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ಹೈಕೋರ್ಟ್‌ಗಳಿಗೆ ಮನವಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ, ಅಮಿತ್​ ಶಾ ಗಡಿಪಾರಾಗೋದನ್ನು ತಡೆದವರೇ ಕಾಂಗ್ರೆಸ್ಸಿಗರು: ವೀರಪ್ಪ ಮೊಯ್ಲಿ ಗಂಭೀರ ಆರೋಪ
ವಂದೇ ಭಾರತ್‌ ರೈಲಿನ ಮೇಲೆ ಕಲ್ಲು ತೂರಿದ ಕಲ್ಲು ಭಯೋತ್ಪಾದಕರು, ಸಿ-4 ಕೋಚ್‌ನ ಗ್ಲಾಸ್‌ ಪೀಸ್‌ ಪೀಸ್‌