2ಕ್ಕಿಂತ ಹೆಚ್ಚು ಮಕ್ಕಳಿರುವ ಸಂಸದ, ಶಾಸಕರನ್ನು ಅನರ್ಹಗೊಳಿಸಿ: ಅಜಿತ್ ಪವಾರ್

Published : Apr 25, 2023, 01:38 PM IST
2ಕ್ಕಿಂತ ಹೆಚ್ಚು ಮಕ್ಕಳಿರುವ ಸಂಸದ, ಶಾಸಕರನ್ನು ಅನರ್ಹಗೊಳಿಸಿ: ಅಜಿತ್ ಪವಾರ್

ಸಾರಾಂಶ

ಭಾರತ ಜನಸಂಖ್ಯೆಯಲ್ಲಿ ಚೀನಾ ದಾಟಿ ಅಗ್ರಸ್ಥಾನ ಪಡೆದುಕೊಂಡಿದೆ. ಇದಕ್ಕೆಲ್ಲಾ ನಾವೇ ಕಾರಣ ಎಂದು ಎನ್‌ಸಿಪಿ ನಾಯಕ ಅಜಿತ್ ಪವಾರ್ ಹೇಳಿದ್ದಾರೆ. 

ಪುಣೆ (ಏಪ್ರಿಲ್ 25, 2023): ಎರಡಕ್ಕಿಂತ ಹೆಚ್ಚಿನ ಮಕ್ಕಳಿದ್ದರೆ ಅವರಿಗೆ ಯಾವುದೇ ಸೌಲಭ್ಯ, ರಿಯಾಯಿತಿ ನೀಡಬಾರದು. ಒಂದು ವೇಳೆ ರಾಜಕಾರಣಿಯಾಗಿದ್ದರೆ ಅವರಿಗೆ ಚುನಾವಣೆ ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಹೇಳಿದ್ದಾರೆ. 

ಮಹಾರಾಷ್ಟ್ರದ ಬಾರಾಮತಿಯಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಅವರು, ಭಾರತ ಜನಸಂಖ್ಯೆಯಲ್ಲಿ ಚೀನಾ ದಾಟಿ ಅಗ್ರಸ್ಥಾನ ಪಡೆದುಕೊಂಡಿದೆ. ಇದಕ್ಕೆಲ್ಲಾ ನಾವೇ ಕಾರಣ. ಅದಕ್ಕಾಗಿ ಎಲ್ಲರೂ ಒಂದು ಬೇಕು, ಇನ್ನೊಂದು ಸಾಕು ಎನ್ನುವ ನೀತಿ ಅಳವಡಿಸಿಕೊಳ್ಳಬೇಕು. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆವವರಿಗೆ ಯಾವುದೇ ಸರ್ಕಾರಿ ಸೌಲಭ್ಯ ಕೊಡಬಾರದು. ರಾಜಕಾರಣಿಗಳಿಗೆ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಅವರನ್ನು ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ: ‘ಮಹಾ’ ಬಿಜೆಪಿಗೆ ಅಜಿತ್ ಪವಾರ್‌ ಹಾಗೂ 40 ಶಾಸಕರ ಬೆಂಬಲ? ಎನ್‌ಸಿಪಿ ನಾಯಕನ ಪ್ರತಿಕ್ರಿಯೆ ಹೀಗಿದೆ..

ನಮಗೆ ಸ್ವಾತಂತ್ರ್ಯ ಬಂದಾಗ ನಮ್ಮ ಜನಸಂಖ್ಯೆ 35 ಕೋಟಿ ಇದ್ದು, ಈಗ 142 ಕೋಟಿ ತಲುಪಿದೆ, ಅದಕ್ಕೆ ನಾವೆಲ್ಲರೂ ಜವಾಬ್ದಾರರು ಎಂದು ನನ್ನ ತಾತ ಹೇಳುತ್ತಿದ್ದರು. ಇನ್ನು, ಎಲ್ಲ ರಾಜಕೀಯ ಪಕ್ಷಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎರಡು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಪ್ರತಿಪಾದಿಸಿದ್ದೆ ಎಂದೂ ಅಜಿತ್ ಪವಾರ್ ಹೇಳಿದ್ದಾರೆ.

ನಮ್ಮ ದೇಶ, ರಾಜ್ಯ, ಜಿಲ್ಲೆ, ಪ್ರದೇಶಗಳ ಅಭ್ಯುದಯಕ್ಕಾಗಿ ಎಲ್ಲರೂ ಒಂದೋ ಎರಡೋ ಮಕ್ಕಳನ್ನು ಹೆತ್ತ ನಂತರ ನಿಲ್ಲಿಸಬೇಕು. ಇನ್ನು ಮುಂದೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಯಾವುದೇ ರಿಯಾಯಿತಿ ನೀಡಬಾರದು ಎಂದೂ ಅಜಿತ್ ಪವಾರ್ ಹೇಳಿದರು.

ಇದನ್ನೂ ಓದಿ: ಜನ ಮೋದಿ ವರ್ಚಸ್ಸಿಗೆ ವೋಟ್‌ ಹಾಕಿದ್ದಾರೇ ಹೊರತು ಪದವಿ ನೋಡಲ್ಲ: ನಮೋ ಪರ ಬ್ಯಾಟ್‌ ಬೀಸಿದ ಎನ್‌ಸಿಪಿ ನಾಯಕ

ವಿಲಾಸರಾವ್ ದೇಶಮುಖ್ ಅವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ಪಂಚಾಯಿತಿ, ಜಿಲ್ಲಾ ಪರಿಷತ್ ಮತ್ತು ತಾಲೂಕು ಪಂಚಾಯಿತಿಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಯಾಗಿರುವ ಅಭ್ಯರ್ಥಿಗಳು ಮೂರು ಮಕ್ಕಳಿದ್ದರೆ ಅನರ್ಹರು ಎಂಬ ನಿರ್ಧಾರವನ್ನು ತೆಗೆದುಕೊಳ್ಳುವಾಗ ನಾವು ಆತಂಕಗೊಂಡಿದ್ದೆವು ಎಂದು ಅಜಿತ್ ಪವಾರ್ ನೆನಪಿಸಿಕೊಂಡಿದ್ದಾರೆ.

ಅಲ್ಲದೆ, ಸಂಸದರು ಮತ್ತು ಶಾಸಕರ ವಿಚಾರದಲ್ಲಿ ಇದೇ ರೀತಿಯ ನಿರ್ಧಾರವನ್ನು ಏಕೆ ತೆಗೆದುಕೊಂಡಿಲ್ಲ ಎಂದು ಜನರು ಕೇಳುತ್ತಾರೆ. ಅದು ನಮ್ಮ ಕೈಯಲ್ಲಿಲ್ಲ ಎಂದು ನಾನು ಅವರಿಗೆ ಹೇಳುತ್ತೇನೆ. ಅದು ಕೇಂದ್ರ ಸರ್ಕಾರದ ಕೈಯಲ್ಲಿದೆ ಮತ್ತು ಕೇಂದ್ರವು ಅದನ್ನು ಮಾಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದೂ ಅವರು ಹೇಳಿದರು. ಯಾವುದೇ ರಿಯಾಯಿತಿಗಳನ್ನು ನೀಡದಿದ್ದರೆ ಜನರು ಈ ವಿಷಯದ ಬಗ್ಗೆ ಹೆಚ್ಚು ಅರಿವು ಹೊಂದುತ್ತಾರೆ ಮತ್ತು ಪ್ರಜ್ಞಾಪೂರ್ವಕರಾಗುತ್ತಾರೆ ಎಂದೂ ಎನ್‌ಸಿಪಿ ನಾಯಕ ಅಜಿತ್ ಪವಾರ್ ಹೇಳಿದ್ದಾರೆ.

ಇದನ್ನೂ ಓದಿ: ಅದಾನಿ ಬೆಂಬಲಕ್ಕೆ ಪವಾರ್‌: ಹಿಂಡನ್‌ಬರ್ಗ್‌ ವರದಿಗೆ ಎನ್‌ಸಿಪಿ ನಾಯಕ ಕಿಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!