ಆಫ್ರಿಕಾದಿಂದ ತರಲಾಗಿದ್ದ ಚೀತಾಗಳ ಪೈಕಿ ಮಾರ್ಚ್‌ನಲ್ಲಿ ಒಂದು ಹಾಗೂ ಈ ಭಾನುವಾರ ಇನ್ನೊಂದು ಮೃತಪಟ್ಟಿವೆ. ಒಂದು ಚೀತಾ ನಾಲ್ಕು ಮರಿಗಳನ್ನು ಹಾಕಿದೆ.
ಭೋಪಾಲ್ (ಏಪ್ರಿಲ್ 25, 2023): ಜಗತ್ತಿನ ಅತ್ಯಂತ ವೇಗದ ಪ್ರಾಣಿಯೆಂದು ಹೆಸರಾದ ಚೀತಾಗಳ ಸಂತತಿಯನ್ನು ಭಾರತದಲ್ಲಿ ಮತ್ತೆ ಅಭಿವೃದ್ಧಿಪಡಿಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಏಳು ತಿಂಗಳ ಹಿಂದಷ್ಟೇ ಆಫ್ರಿಕಾದಿಂದ ತರಲಾಗಿದ್ದ ಚೀತಾಗಳಿಗೆ ಈಗ ಜಾಗದ ಸಮಸ್ಯೆ ಎದುರಾಗಿದೆ. ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದ ಎರಡು ಕಂತುಗಳಲ್ಲಿ ತರಲಾಗಿದ್ದ ಒಟ್ಟು 20 ಚೀತಾಗಳ ಪೈಕಿ ಎರಡು ಚೀತಾಗಳು ಮೃತಪಟ್ಟ ಬೆನ್ನಲ್ಲೇ ಮಧ್ಯಪ್ರದೇಶ ಅರಣ್ಯ ಇಲಾಖೆಯು ಜಾಗ ಹಾಗೂ ಸಿಬ್ಬಂದಿ ಕೊರತೆಯ ಸಮಸ್ಯೆ ಮುಂದೊಡ್ಡಿ ಚೀತಾಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.
1 ಚೀತಾ ನೋಡಿಕೊಳ್ಳಲು 9 ಜನ:
ಆಫ್ರಿಕಾದಿಂದ ತರಲಾಗಿದ್ದ ಚೀತಾಗಳ ಪೈಕಿ ಮಾರ್ಚ್‌ನಲ್ಲಿ ಒಂದು ಹಾಗೂ ಈ ಭಾನುವಾರ ಇನ್ನೊಂದು ಮೃತಪಟ್ಟಿವೆ. ಒಂದು ಚೀತಾ ನಾಲ್ಕು ಮರಿಗಳನ್ನು ಹಾಕಿದೆ. ಚೀತಾಗಳನ್ನು ಮಧ್ಯಪ್ರದೇಶದ 748 ಚದರ ಕಿ.ಮೀ. ವಿಸ್ತೀರ್ಣದ ಕುನೋ ನ್ಯಾಷನಲ್ ಪಾರ್ಕ್‌ನಲ್ಲಿ ಬಿಡುವ ನಿರ್ಧಾರ ಕೈಗೊಂಡಿದ್ದಾಗಲೇ ಕೆಲ ವನ್ಯಜೀವಿ ತಜ್ಞರು ಅಷ್ಟು ಜಾಗ ಸಾಲದು ಎಂದಿದ್ದರು. ಈಗ ಮಧ್ಯ ಪ್ರದೇಶ ಅರಣ್ಯ ಇಲಾಖೆಯು ಜಾಗದ ಸಮಸ್ಯೆಯ ಜೊತೆಗೆ ಸಿಬ್ಬಂದಿಯ ಕೊರತೆಯೂ ಇದೆ. ಒಂದು ಚೀತಾವನ್ನು ನೋಡಿಕೊಳ್ಳಲು 9 ಜನರು ಬೇಕು. ಅಷ್ಟು ಸಿಬ್ಬಂದಿ ನಮ್ಮಲ್ಲಿಲ್ಲ. ಹೀಗಾಗಿ ಚೀತಾಗಳಿಗೆ ಬೇರೆ ಜಾಗ ತೋರಿಸಬೇಕು ಎಂದು ‘ಚೀತಾ ಯೋಜನೆ’ ಉಸ್ತುವಾರಿ ಹೊತ್ತಿರುವ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರಕ್ಕೆ ಪತ್ರ ಬರೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನು ಓದಿ: ಆಫ್ರಿಕಾದಿಂದ ತಂದಿದ್ದ ಮತ್ತೊಂದು ಚೀತಾ ಸಾವು: ತಿಂಗಳಲ್ಲೇ ಎರಡನೇ ಚೀತಾ ಸಾವಿನ ಕಹಿಸುದ್ದಿ
1 ಚೀತಾಕ್ಕೆ 100 ಚ. ಕಿಮೀ ವಿಸ್ತೀರ್ಣದ ಅರಣ್ಯ ಬೇಕು:
ಕೆಲ ಚೀತಾಗಳು ಕುನೋ ಅರಣ್ಯದಲ್ಲಿ ಜಾಗ ಸಾಲದೆ ಪದೇಪದೇ ಬೇರೆ ಅರಣ್ಯಕ್ಕೆ ಹೋಗುತ್ತಿರುವುದು ಇತ್ತೀಚೆಗೆ ವರದಿಯಾಗಿತ್ತು. ಒಂದು ಚೀತಾಕ್ಕೆ ಸಂಚರಿಸಲು ಸರಾಸರಿ 100 ಚ.ಕಿ.ಮೀ. ಅರಣ್ಯ ಬೇಕಾಗುತ್ತದೆ. ಇನ್ನು, ಕುನೋ ರಾಷ್ಟ್ರೀಯ ಉದ್ಯಾನವನ್ನೇ ಚೀತಾಗಳಿಗೆ ಯೋಗ್ಯವಾಗಿ ಮಧ್ಯಪ್ರದೇಶದ ಗಾಂಧಿ ಸಾಗರ್ ಅಥವಾ ನೌರಾದೇಹಿ ಅರಣ್ಯದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಆರಂಭಿಸಿದರೆ ಅದಕ್ಕೆ ಕ್ರಮವಾಗಿ ಎರಡು ಹಾಗೂ ಮೂರು ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೆ ಚೀತಾಗಳನ್ನು ಉಳಿಸಿಕೊಳ್ಳುವುದು ಹೇಗೆಂಬ ಚಿಂತೆ ಅಧಿಕಾರಿಗಳಿಗೆ ಎದುರಾಗಿದೆ. ಹೀಗಾಗಿ ಬೇರೆ ಅರಣ್ಯವನ್ನು ಸೂಚಿಸುವಂತೆ ಕೋರಿದ್ದಾರೆ ಎನ್ನಲಾಗಿದೆ.
ಮೊದಲ ಕಂತಿನಲ್ಲಿ ನಮೀಬಿಯಾದಿಂದ ತಂದಿದ್ದ 8 ಚೀತಾಗಳನ್ನು ಈಗಾಗಲೇ ಮುಕ್ತ ಕಾಡಿಗೆ ಬಿಡಲಾಗಿದೆ. ಎರಡನೇ ಕಂತಿನಲ್ಲಿ ದಕ್ಷಿಣ ಆಫ್ರಿಕಾದಿಂದ ತಂದ 12 ಚೀತಾಗಳನ್ನು ಇನ್ನೂ ಪೂರ್ಣ ಪ್ರಮಾಣದ ಕಾಡಿಗೆ ಬಿಟ್ಟಿಲ್ಲ. ಮೃತಪಟ್ಟ ಎರಡು ಚೀತಾಗಳ ಪೈಕಿ ಒಂದು ನಮೀಬಿಯಾ, ಇನ್ನೊಂದು ದಕ್ಷಿಣ ಆಫ್ರಿಕಾದ್ದಾಗಿದೆ.
ಇದನ್ನೂ ಓದಿ: ಕಾಡು ಬಿಟ್ಟು ನಾಡಿಗೆ ನುಗ್ಗಿದ ನಮೀಬಿಯಾ ಚೀತಾ: ಕುನೋ ಅಭಯಾರಣ್ಯಕ್ಕೆ ಕಳಿಸಲು ಕಾರ್ಯಾಚರಣೆ