
ಇಂದೋರ್(ಜೂ.11) ಕಾಂಗ್ರೆಸ್ ಹೈಕಮಾಂಡ್ ಇದೀಗ ಪಕ್ಷ ವಿರೋಧಿ ನಡೆ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈ ಮೂಲಕ ಪಕ್ಷದ ಚೌಕಟ್ಟು ಮೀರುವಂತೆ ಸಂದೇಶ ಸಾರಿದೆ. ಇದೀಗ ಮಧ್ಯ ಪ್ರದೇಶ ಕಾಂಗ್ರೆಸ್‌ನಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ,ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ಸಹೋದರ ಹಾಗೂ ಶಾಸಕ ಲಕ್ಷ್ಮಣ್ ಸಿಂಗ್ ಪಕ್ಷದಿಂದ ಹೊರಬಿದ್ದಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಲಕ್ಷ್ಮಣ್ ಸಿಂಗ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ.
6 ವರ್ಷಗಳ ಕಾಲ ಉಚ್ಚಾಟನೆ
ಶಾಸಕ ಲಕ್ಷ್ಮಣ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ. ಕಾಂಗ್ರೆಸ್ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ತಾರಿಖ್ ಅನ್ವರ್ ಈ ಆದೇಶ ಹೊರಡಿಸಿದ್ದಾರೆ. ಕಾಂಗ್ರೆಸ್ ಶಾಸಕ, ಹಿರಿಯ ನಾಯಕ ಲಕ್ಷ್ಮಣ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಕಾರಣದಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಾರಿಖ್ ಅನ್ವರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಾರಣ ಬಹಿರಂಗಪಡಿಸಿದ ಪಕ್ಷ
ಲಕ್ಷ್ಮಣ್ ಸಿಂಗ್ ಉಚ್ಚಾಟನೆಗೆ ಸ್ಪಷ್ಟ ಕಾರಣವನ್ನು ಕಾಂಗ್ರೆಸ್ ಪಕ್ಷ ಬಹಿರಂಗಪಡಿಸಿಲ್ಲ. ಕೇವಲ ಪಕ್ಷ ವಿರೋಧಿ ನಡೆ ಅನ್ನೋ ಕಾರಣ ನೀಡಿ ಉಚ್ಚಾಟಿಸಲಾಗಿದೆ. ಇದೇ ವೇಳೆ ಪಕ್ಷದ ಚೌಕಟ್ಟು ಮೀರಿದರೆ ಶಿಸ್ತು ಕ್ರಮ ಕೈಕೊಳ್ಳಲಾಗುತ್ತದೆ ಎಂದು ಸ್ಪಷ್ಟ ಸೂಚನೆ ನೀಡಿದೆ.
ಮಧ್ಯ ಪ್ರದೇಶ ಕಾಂಗ್ರೆಸ್‌ನಲ್ಲಿ ಕೋಲಾಹಲ
ಲಕ್ಷ್ಮಣ್ ಸಿಂಗ್ ಪಕ್ಷದಿಂದ ಉಚ್ಚಾಟನೆ ಬೆನ್ನಲ್ಲೇ ಮಧ್ಯ ಪ್ರದೇಶ ಕಾಂಗ್ರೆಸ್‌ನಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಪ್ರಮುಖವಾಗಿ ಮಧ್ಯ ಪ್ರದೇಶ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸಹೋದರನಾಗಿರುವ ಲಕ್ಷ್ಮಣ್ ಸಿಂಗ್ ವಿರುದ್ಧ ತೆಗೆದುಕೊಂಡಿರುವ ಕ್ರಮದಿಂದ ಕೆಲ ಬಣ ಬಡಿದಾಟ ಜೋರಾಗಿದೆ. ಲಕ್ಷ್ಮಣ್ ಸಿಂಗ್ ವಿರುದ್ಧ ಹಲವು ನಾಯಕರು ದೂರು ನೀಡಿದ್ದರು. ಇತ್ತ ಪಕ್ಷ ವಿರೋಧಿ ಚಟುವಟಿಕೆಗಳನ್ನು ಕಾಂಗ್ರೆಸ್ ಹೈಕಮಾಂಡ್ ಕೂಡ ಗಮನಿಸಿತ್ತು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆದರೆ ಲಕ್ಷ್ಮಣ್ ಸಿಂಗ್ ಪರ ಬೆಂಬಲಿಗರು ಪಕ್ಷದ ನಿರ್ಧಾರದಿಂದ ಅಸಮಾಧಾನಗೊಂಡಿದ್ದಾರೆ.
ಲಕ್ಷ್ಮಣ್ ಸಿಂಗ್ ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ ಅನ್ನೋ ಆರೋಪಗಳು ಕೇಳಿಬರುತ್ತಲೇ ಇದೆ. ತಮ್ಮ ರಾಜಕೀಯ ಜೀವನದಲ್ಲಿ ಒಂದು ಬಾರಿ ಬಿಜೆಪಿಯಿಂದಲೂ ಸ್ಪರ್ಧಿಸಿ ಗೆದ್ದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸರಿಯಾದ ಸ್ಥಾನಮಾನ ಸಿಗದ ಕಾರಣ ಬಿಜೆಪಿಗೆ ನೆರವು ನೀಡುತ್ತಿದ್ದಾರೆ ಅನ್ನೋ ಆರೋಪಗಳು ಬಲವಾಗಿ ಕೇಳಿಬಂದಿತ್ತು. ಲಕ್ಷ್ಮಣ್ ಸಿಂಗ್ 5 ಬಾರಿ ಸಂಸದನಾಗಿ ಹಾಗೂ 3 ಬಾರಿ ಶಾಸಕನಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಕಾಂಗ್ರೆಸ್ ಶಾಸನಕನಾಗಿ ಪಕ್ಷದಿಂದ ಉಚ್ಚಾಟನೆಯಾಗಿದ್ದಾರೆ. 1990ರಲ್ಲಿ ಮಧ್ಯ ಪ್ರದೇಶ ವಿಧಾನಸಭೆಗೆ ಆಯ್ಕೆಯಾದರೆ, 1994ರಲ್ಲಿ ಸಂಸದರಾಗಿ ಮೊದಲ ಬಾರಿ ಆಯ್ಕೆಯಾಗಿದ್ದರು. 2004ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮುನಿಸಿಕೊಂಡು ಬಿಜೆಪಿ ಸೇರಿದ ಲಕ್ಷ್ಮಣ್ ಸಿಂಗ್ ಗೆದ್ದು ಸಂಸದರಾಗಿದ್ದರು. ಬಳಿಕ 2013ರಲ್ಲಿ ಕಾಂಗ್ರೆಸ್‌ಗೆ ಮರಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ