ಲಿಫ್ಟ್ ಕುಸಿದು ಹಸಿ ಬಾಣಂತಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಲಿಫ್ಟ್‌ನಲ್ಲಿ ಬಾಣಂತಿಯನ್ನು ಕರೆದೊಯ್ಯುವಾಗ ಈ ದುರ್ಘಟನೆ ಸಂಭವಿಸಿದೆ. ತಲೆಗೆ ಗಂಭೀರ ಗಾಯಗಳಾಗಿ ಮಹಿಳೆ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಯೊಂದರಲ್ಲಿ ಲಿಫ್ಟ್ ಕುಸಿದು ಬಿದ್ದ ಪರಿಣಾಮ ಆಗಷ್ಟೇ ಮಗುವಿಗೆ ಜನ್ಮ ನೀಡಿದ್ದ ಹಸಿ ಬಾಣಂತಿಯೊಬ್ಬರು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಶಾಸ್ತ್ರಿನಗರದಲ್ಲಿ ಘಟನೆ ನಡೆದಿದೆ. 30 ವರ್ಷದ ಕರೀಷ್ಮಾ ಸಾವನ್ನಪ್ಪಿದ್ದ ಮಹಿಳೆ, ಆಸ್ಪತ್ರೆಯ ಜನರಲ್ ರೂಮ್‌ನಲ್ಲಿ ಕರೀಷ್ಮಾ ಮಗುವಿಗೆ ಜನ್ಮ ನೀಡಿದ್ದರು. ಇದಾದ ನಂತರ ಅವರನ್ನು ಸ್ಟ್ರೇಚರ್‌ನಲ್ಲಿ ಮಲಗಿಸಿ ಲಿಫ್ಟ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಲಿಫ್ಟ್‌ನ ಬೆಲ್ಟ್ ಕಟ್ಟಾಗಿ ಲಿಫ್ಟ್ ಕುಸಿದಿದ್ದು, ಕರೀಷ್ಮಾ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು, ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಯಿತಾದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.
ಮೀರತ್‌ನ ಶಾಸ್ತ್ರಿನಗರದಲ್ಲಿದ್ದ ಕ್ಯಾಪಿಟಲ್ ಆಸ್ಪತ್ರೆಯಲ್ಲಿ ಈ ದುರಂತ ನಡೆದಿದೆ. ಮೊದಲಿಗೆ ಲಿಫ್ಟ್ ಸ್ಟಕ್ ಆಗಿದ್ದು ಲಿಫ್ಟ್ ಒಳಗಿದ್ದವರು ಕೂಗಾಡಲು ಯತ್ನಿಸಿದ್ದಾರೆ. ಕೆಲವರು ಲಿಫ್ಟ್‌ನ ಬಾಗಿಲನ್ನು ತೆಗೆಯಲು ಯತ್ನಿಸಿದ್ದಾರೆ. ಆದರೆ ತಂತ್ರಜ್ಞರ ತಂಡ ಅವರನ್ನು ತಲುಪುವ ಮೊದಲೇ ಲಿಫ್ಟ್ ಕುಸಿದು ಬಿದ್ದು ದುರಂತ ಸಂಭವಿಸಿದೆ. ಕೂಡಲೇ ಬಾಣಂತಿ ಮಹಿಳೆಯನ್ನು ಕೂಡಲೇ ಬೇರೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ ಆಕೆ ಬದುಕುಳಿಯಲಿಲ್ಲ, ಇದರಿಂದ ಸಿಟ್ಟಿಗೆದ್ದ ಮಹಿಳೆಯ ಕುಟುಂಬದವರು ಹಾಗೂ ಸಂಬಂಧಿಕರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದಾರೆ. ಇದರಿಂದ ಹೆದರಿದ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಎಸ್ಕೇಪ್ ಆಗಿದ್ದಾರೆ. ಆದರೆ ಆಸ್ಪತ್ರೆ ಆವರಣದಲ್ಲೇ ಪೊಲೀಸ್ ಪೋಸ್ಟ್ ಇದ್ದು, ಕೂಡಲೇ ಸ್ಥಳಕಾಗಮಿಸಿದ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.
ಕರೀಷ್ಮಾ ಅವರು ಮುಂಜಾನೆಯಷ್ಟೇ ಆಸ್ಪತ್ರೆಗೆ ದಾಖಲಾಗಿದ್ದು, ಸಿ ಸೆಕ್ಷನ್ ಮೂಲಕ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗುವನ್ನು ಬೇರೆ ಆಸ್ಪತ್ರೆಯ ನರ್ಸರಿಯಲ್ಲಿ ಆರೈಕೆಗೆ ಇರಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಲೋಹಿಯಾ ನಗರ ಪೊಲೀಸ್ ಠಾಣೆಯಲ್ಲಿ ಕ್ಯಾಪಿಟಲ್ ಆಸ್ಪತ್ರೆಯ ವೈದ್ಯರು, ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಯ ನಂತರ ಮೀರತ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಅಲ್ಲಿದ್ದ ಇತರ 15 ರೋಗಿಗಳನ್ನು ಸಮೀಪದ ಮತ್ತೊಂದು ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ. ಅಲ್ಲದೇ ಘಟನೆಯ ಬಗ್ಗೆ ತನಿಖೆ ಮಾಡಲು ಸಿಎಂಒ ಟೀಮೊಂದನ್ನು ರಚನೆ ಮಾಡಿದ್ದು ತನಿಖೆ ನಡೆಯುತ್ತಿದೆ.