
ಮಗನ ಅಂಗಾಂಗಳನ್ನು ದಾನ ನೀಡಲು ಒಪ್ಪಿಗೆ ನೀಡಿದ ಬಳಿಕ, ತಾಯಿ ತನ್ನ 19 ತಿಂಗಳ ಮಗುವನ್ನು ಕೊನೆದಾಗಿ ಕಣ್ತುಂಬಿಕೊಂಡಿದ್ದಳು. ಆ ಬಳಿಕ ವೈದ್ಯರು ಮಗುವನ್ನು ಆಪರೇಷನ್ ಥಿಯೇಟರ್‌ಗೆ ತೆಗೆದುಕೊಂಡಿದ್ದರು. ಆಪರೇಷನ್ ಥಿಯೇಟರ್ ಬಾಗಿಲು ಕ್ಲೋಸ್ ಆಗುತ್ತಿದ್ದಂತೆ, ತನ್ನ ಮಗ ವಾಪಸ್ ಬರುವುದಿಲ್ಲ ಎಂದು ತಿಳಿದ ತಾಯಿ ಮತ್ತೆ ಹಿಂದಿರುಗಿ ನೋಡಲಿಲ್ಲ. ಮಗ ಮತ್ತೆ ಬದುಕಿ ಬರೋದಿಲ್ಲ ತಿಳಿದಿದ್ದ ಕಾರಣ ಪತಿಯೊಂದಿಗೆ ಆಸ್ಪತ್ರೆಯಿಂದ ಹೊರ ನಡೆದಿದ್ದರು.
ಚೆನ್ನೈನ ರಾಜೀವ್‌ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆಯಿತು. ಮಗುವನ ಬ್ರೈನ್ ಡೇಡ್ ಆಗಿದೆ ಎಂದು ವೈದ್ಯರು ಘೋಷಣೆ ಮಾಡಿದ ಬಳಿಕ, ಪೋಷಕರ ಅನುಮತಿ ಪಡೆದು ಅಂಗಾಂಗದಾನಕ್ಕೆ ನಿರ್ಧರಿಸಿದ್ದರು. ಇದರಂತೆ ಮೂವರು ಬೇರೆ ಬೇರೆ ವ್ಯಕ್ತಿಗಳಿಗೆ ಜೀವದಾನ ಮಾಡಿದ್ದಾರೆ. ಇದರೊಂದಿಗೆ ತಮಿಳುನಾಡಿನಲ್ಲಿ ಅತ್ಯಂತ ಕಡಿಮೆ ವಯಸ್ಸಿಗೆ ಅಂಗಾಂಗದಾನ ಮಾಡಿದ ಅತೀ ಚಿಕ್ಕ ವಯಸ್ಸಿನ ವ್ಯಕ್ತಿ ಎಂದು 19 ತಿಂಗಳ ಮಗು ಇತಿಹಾಸ ಪುಟಕ್ಕೆ ಸೇರ್ಪಡೆಯಾಗಿದೆ.
ಬಾಲಕ ಕೆಲವು ದಿನಗಳಿಂದ ನಿತ್ರಾಣಗೊಂಡಂತೆ ಕಾಣುತ್ತಿದ್ದ. ಸರಿಯಾಗಿ ಊಟ ಮಾಡದ ಕಾರಣ ಈ ರೀತಿ ಆಗಿರಬಹುದು ಎಂದು ದಂಪತಿ ತಿಳಿದುಕೊಂಡಿದ್ದರು. ಆದರೆ ಮಗುವಿನ ವಯಸ್ಸು ಇನ್ನು 19 ತಿಂಗಳು ಅಷ್ಟೇ, ಇದರಿಂದ ಮಗು ಕೂಡ ತನಗೆ ಏನಾಗುತ್ತಿದೆ ಎಂದು ಪೋಷಕರಿಗೆ ತಿಳಿಸಲು ಆಗಿರಲಿಲ್ಲ. ತಂದೆ-ತಾಯಿ ಕೂಡ ಆರ್ಥಿಕವಾಗಿ ಬಲಹೀನರಾಗಿದ್ದರು.
ಮಗುವಿಗೆ ಅನಾರೋಗ್ಯ ಸಂಭವಿಸಿದಾಗ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ಬಂದಿದ್ದರು. ಆದರೆ ಮಗುವಿಗೆ ಅಪಾಯಕಾರಿಯಾದ ಹೈಡ್ರೋಸೆಫಾಲಸ್ ಎಂಬ ಅನಾರೋಗ್ಯ ಉಂಟಾಗಿರುವುದನ್ನು ವೈದ್ಯರಿಗೆ ತಿಳಿದು ಬಂದಿತ್ತು.
ಹೈಡ್ರೋಸೆಫಾಲಸ್ (ಜಲಮಸ್ತಿಷ್ಕ ರೋಗ) ಎಂದರೆ ಮೆದುಳಿನ ಕುಹರಗಳಲ್ಲಿ (Ventricles) ಸೆರೆಬ್ರೊಸ್ಪೈನಲ್ ದ್ರವವು (CSF) ಅಸಹಜವಾಗಿ ಸಂಗ್ರಹವಾಗಿ, ಮೆದುಳಿನ ಮೇಲೆ ಹೆಚ್ಚು ಒತ್ತಡ ಉಂಟಾಗುವ ಕಾಯಿಲೆಯಾಗಿದೆ. ಪೋಷಕರಿಗೆ ಈ ರೋಗದ ಬಗ್ಗೆ ಏನು ತಿಳಿದಿರಲಿಲ್ಲ. ಕಡಿಮೆ ಸಮಯದಲ್ಲಿ ಮಗುವಿನ ಮೆದುಳಿನಲ್ಲಿ ಈ ದ್ರವ ಹೆಚ್ಚು ಪ್ರಮಾಣದಲ್ಲಿ ಶೇಖರಣೆಯಾಗಿತ್ತು ಎಂದು ಆಸ್ಪತ್ರೆಯ ವೈದ್ಯ ಆರ್ ರಾಘವೇಂದ್ರನ್ ತಿಳಿಸಿದ್ದಾರೆ.
ಆಸ್ಪತ್ರೆಗೆ ಆಗಮಿಸುವ ವೇಳೆ ಮಗುವಿನ ಸ್ಥಿತಿ ಗಂಭೀರವಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿದ ಬಳಿಕವೂ ಯಾವುದೇ ಚೇತರಿಕೆ ಕಂಡು ಬರಲಿಲ್ಲ. ಹುಟ್ಟುತ್ತಲೇ ಬರುವ ಕೆಲವು ಲೋಪಗಳಿಂದ ಇಂತಹ ಆರೋಗ್ಯ ಸಮಸ್ಯೆ ಕಂಡು ಬರುತ್ತದೆ. ಕೆಲವು ಸಂದರ್ಭದಲ್ಲಿ ಇದರ ಲಕ್ಷಣಗಳು ಜನಿಸಿದ ಕೂಡಲೇ ತಿಳಿದು ಬಂದರೆ, ಕೆಲವು ಸಂದರ್ಭಗಳಲ್ಲಿ ತಡವಾಗಿ ತಿಳಿಯುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.
ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ನಡೆದ ಆರು ದಿನಗಳ ಬಳಿಕವೂ ಯಾವುದೇ ಐಸಿಯುನಲ್ಲಿಯೇ ಚಿಕಿತ್ಸೆ ಮುಂದುವರೆಯುತ್ತಿತ್ತು. ಕೊನೆಗೆ ವೈದ್ಯರು ಮಗುವಿನ ಬ್ರೈನ್ ಡೇಡ್ ಆಗಿರುವುದಾಗಿ ಘೋಷಣೆ ಮಾಡಿದ್ದರು. ಈ ಆರೋಗ್ಯ ಸಮಸ್ಯೆ ಕಂಡು ಬರುವ ಕೆಲವು ದಿನಗಳ ಮುನ್ನದ ವರೆಗೂ ಮಗು ಸಾಮಾನ್ಯ ಮಕ್ಕಳಂತೆ ಆಡುತ್ತಾ ಚೆನ್ನಾಗಿತ್ತು ಎಂದು ಪೋಷಕರು ಹೇಳಿದ್ದರು. ಆದರೆ ಐಪಿಯುನಿಂದ ಮತ್ತೆ ಮಗು ವಾಪಸ್ ಬದುಕಿ ಬರೋದಿಲ್ಲ ಎಂದು ತಿಳಿದಾಗ ಅವರಿಗೆ ಆಘಾತ ಎದುರಾಗಿತ್ತು. ವೈದ್ಯರು ಮಗುವಿನ ಸ್ಥಿತಿಯ ಬಗ್ಗೆ ಪೋಷಕರಿಗೆ ವಿವರಿಸಿ, ಅಂಗಾಂಗದಾನ ಮಾಡುವಂತೆ ಮನವೊಲಿಕೆ ಮಾಡಿದ್ದರು. ಕೊನೆಗೂ ಕಣ್ಣೀರಿಡುತ್ತಲೇ ತಮ್ಮ ಮಗು, ಇತರರಿಗೆ ಹೊಸ ಜೀವನ ನೀಡಲು ಎಂದು ನಿರ್ಧಾರ ಮಾಡಿ ಒಪ್ಪಿಗೆ ಸೂಚಿಸಿದ್ದರು. ಇದರೊಂದಿಗೆ 19 ತಿಂಗಳ ವಯಸ್ಸಿಗೆ ಅಂಗಾಂಗದಾನ ಮಾಡಿದ ವ್ಯಕ್ತಿಯಗಿ ಮಗು ತಮಿಳುನಾಡಿನ ಇತಿಹಾಸದ ಪುಟಗಳನ್ನು ಸೇರಿಕೊಂಡಿದೆ.
ಮಗುವಿನ ಅಂಗಾಂಗ ದಾನಕ್ಕೆ ತೆಗೆದುಕೊಂಡು ಹೋಗುತ್ತಿದ್ದಂತೆ ಆಸ್ಪತ್ರೆಯಲ್ಲಿ ಉಳಿಯಲು ತಂದೆ-ತಾಯಿ ಸಾಧ್ಯವಾಗಲಿಲ್ಲ. ನಮ್ಮ ಮಗು ಬದುಕಲಿಲ್ಲ. ನಮ್ಮ ಮಗುವಿನಂತೆ ಇರುವ ಇತರರ ಮಕ್ಕಳಿಗಾಗಿ ಈ ನಿರ್ಧಾರ ಮಾಡಿದ್ದೇವೆ ಎಂದು ಹೇಳಿ ದಂಪತಿ ಆಸ್ಪತ್ರೆಯಿಂದ ಹೊರ ನಡೆದಿದ್ದರು. ಆ ಬಳಿಕ ಎನ್‌ಜಿಒ ಒಂದರ ನೆರವು ಪಡೆದು ಮಗುವಿನ ಅಂತ್ಯಕ್ರಿಯೆ ನಡೆಸಿದ್ದಾಗಿ ಡಾಕ್ಟರ್ ರಾಘವೇಂದ್ರನ್ ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ 20 ತಿಂಗಳ ಮಗುವಿನ ಅಂಗಾಂಗದಾನ ಮಾಡಲಾಗಿತ್ತು. ಇನ್ನು, ಈಗ ಬಾಲಕನ ಕಿಡ್ನಿಗಳನ್ನು 20 ವರ್ಷದ ಯುವತಿಗೆ ಜೋಡಿಸಲಾಗಿದೆ. ಲಿವರ್ ಅನ್ನು ಮಗುವಿಗೆ ಅಳವಡಿಸಲಾಗಿದೆ. ಹೃದಯವನ್ನು ಕೊಯಮತ್ತೂರಿನ ಮಗುವಿಗೆ ಕಸಿ ಮಾಡಲಾಗಿದೆ. ಚಿಕ್ಕ ಮಕ್ಕಳ ಅಂಗಾಂಗಳನ್ನು ವಯಸ್ಕರಿಗೆ ಕಸಿ ಮಾಡಬಹುದು ಎಂದು ಡಾ ಶಾಂತರಾಮನ್ ಹೇಳಿದ್ದಾರೆ ಎಂದು ಬಿಬಿಸಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ