ಕಾರ್ಮಿಕರಿಗೆ ಕೊರೋನಾಕ್ಕಿಂತ ಹಸಿವಿನ ಭೀತಿ| ಪ್ರತಿಕ್ರಿಯಿಸಿದ ಶೇ.50 ಜನರ ಬಳಿ ಒಂದು ದಿನಕ್ಕಾಗುವಷ್ಟು ದಿನಸಿ| ದಿನಸಿ ಖಾಲಿ ಭಯದಲ್ಲಿ ದಿನಕ್ಕೆ ಒಂದೇ ಹೊತ್ತು ಆಹಾರ ಸೇವನೆ
ಹೈದರಾಬಾದ್(ಏ.19): ಕೊರೋನಾ ತಡೆಗಾಗಿ ದೇಶಾದ್ಯಂತ ಹೇರಲಾಗಿರುವ ಲಾಕ್‌ಡೌನ್ ಹೊಡೆತಕ್ಕೆ ಬಡವರು ಮತ್ತು ವಲಸೆ ಕೂಲಿ ಕಾರ್ಮಿಕರು ತತ್ತರಿಸಿ ಹೋಗಿರುವ ವಿಚಾರ ಸಂಶೋಧನೆಯೊಂದರಿಂದ ಬೆಳಕಿಗೆ ಬಂದಿದೆ. ಲಾಕ್‌ಡೌನ್ ಅವಧಿಯಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲದಂತೆ ಇರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡ ಹೊರತಾಗಿಯೂ, ಬಹುತೇಕ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಇನ್ನಿತರ ವರ್ಗಗಳಿಗೆ ಸರ್ಕಾರದ ಯೋಜನೆಗಳು ತಲುಪಿಲ್ಲ ಎಂಬುದನ್ನು ಈ ಸಂಶೋಧನೆ ಹೇಳಿದೆ.
ಅಲ್ಲದೆ, ಕೆಲವು ಮಹಿಳೆಯರ ಜನ್ ಧನ್ ಖಾತೆಗಳಿಗೆ 500 ರು. ನೇರ ನಗದು ಪಾವತಿ ಹೊರತುಪಡಿಸಿದರೆ, ಪಡಿತರ ವಿತರಣೆ ಸೇರಿದಂತೆ ಇನ್ಯಾವುದೇ ಯೋಜನೆಗಳು ತಮಗೆ ತಲುಪಿಲ್ಲ ಎಂದು ಈ ಸಂಶೋಧನಾ ವರದಿಯಲ್ಲಿ ದೂರಲಾಗಿದೆ.
ಲಾಕ್‌ಡೌನ್: ಮೃತ ತಂದೆಯ ಹೆಸರಲ್ಲಿ ಪಾಸ್ ಪಡೆದ ಭೂಪ!
ಹೌದು, ಸ್ವಾನ್(ಸಂಕಷ್ಟಕ್ಕೆ ಸಿಲುಕಿದ ಕೆಲಸಗಾರರ ಕಾರ್ಯಪಡೆ ಜಾಲ) ಎಂಬ ಸಂಸ್ಥೆಗೆ ದೇಶಾದ್ಯಂತ 11 ಸಾವಿರ ಕೂಲಿ ಕಾರ್ಮಿಕರು ಕರೆ ಮಾಡಿ ತಾವು ಎದುರಿಸುತ್ತಿರುವ ಬವಣೆಯನ್ನು ಹಂಚಿಕೊಂಡಿದ್ದಾರೆ. ಇದರನ್ವಯ ಸ್ವಾನ್ ಜೊತೆ ತಮ್ಮ ಸಮಸ್ಯೆ ಹೇಳಿಕೊಂಡವರ ಪೈಕಿ ಶೇ.50ರಷ್ಟುಜನರಲ್ಲಿ ಕೇವಲ ಒಂದು ದಿನಕ್ಕೆ ಆಗುವಷ್ಟುದಿನಸಿ ಶೇಖರಣೆ ಇದೆ. ಅಲ್ಲದೆ, ಹೆಚ್ಚು ಆಹಾರ ಸೇವಿಸಿದರೆ ದಿನಸಿ ಮತ್ತು ಅಡುಗೆ ಸಾಮಗ್ರಿಗಳು ಖಾಲಿಯಾಗುತ್ತವೆ ಎಂಬ ಭೀತಿಗಾಗಿ ಬೆಂಗಳೂರಿನಿಂದ ತವರಿಗ ಹೊರಟಿರುವ 240 ಜನರ ಒಂದು ಗುಂಪು ದಿನಕ್ಕೆ 1 ಹೊತ್ತಿನ ಊಟ ಮಾತ್ರವೇ ಮಾಡುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಈ ಮೂಲಕ ವಲಸೆ ಕಾರ್ಮಿಕರಿಗೆ ಕೊರೋನಾಕ್ಕಿಂತಲೂ ಹಸಿವಿನ ಬೇಗೆಯೇ ಹೆಚ್ಚಾಗಿ ಹಿಂಸಿಸುತ್ತಿರುವುದು ಸ್ಪಷ್ಟವಾಗಿದೆ ಎಂಬ ವಿಶ್ಲೇಷಣೆಗಳು ವ್ಯಕ್ತವಾಗಿವೆ.
ಈ ವರದಿಯಲ್ಲಿ ಏನೆಲ್ಲಾ ಅಂಶಗಳಿವೆ?
ಶೇ.90: ತಮಗೆ ಸರ್ಕಾರದಿಂದ ಯಾವುದೇ ಪಡಿತರ ಸಿಕ್ಕಿಲ್ಲ
ಶೇ.70: ನಮಗೆ ಯಾವುದೇ ಸಿದ್ಧಪಡಿಸಿದ ಆಹಾರ ಸಿಕ್ಕಿಲ್ಲ
ಶೇ.78: ಜನರ ಬಳಿ 300 ರು.ಗಿಂತ ಕಡಿಮೆ ನಗದು
ಶೇ.70: ಕೇವಲ 200 ರು. ಉಳಿಸಿಕೊಂಡ ಕಾರ್ಮಿಕರು
ಶೇ.98: ನಮಗೆ ಸರ್ಕಾರದಿಂದ ನಗದು ನೆರವು ಸಿಕ್ಕಿಲ್ಲ
ಶೇ.79: ಕರೆ ಮಾಡಿದ ಇಷ್ಟು ಜನ ಕಟ್ಟಡ ಕಾರ್ಮಿಕರು