ಹಿಮಾಚಲ, ಉತ್ತರಾಖಂಡದಲ್ಲಿ ವರುಣಾರ್ಭಟಕ್ಕೆ ಬಲಿಯಾದವರೆಷ್ಟು?

By Kannadaprabha NewsFirst Published Aug 21, 2022, 11:05 AM IST
Highlights

 ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಮೇಘಸ್ಫೋಟದಿಂದಾಗಿ ಶನಿವಾರ ಭೀಕರ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದು, ಪ್ರಾಣ ಹಾಗೂ ಆಸ್ತಿ ಹಾನಿ ಸಂಭವಿಸಿದೆ.

ಶಿಮ್ಲಾ/ಡೆಹ್ರಾಡೂನ್‌: ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಮೇಘಸ್ಫೋಟದಿಂದಾಗಿ ಶನಿವಾರ ಭೀಕರ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದು, ಪ್ರಾಣ ಹಾಗೂ ಆಸ್ತಿ ಹಾನಿ ಸಂಭವಿಸಿದೆ. ನದಿ, ಜಲಪಾತಗಳು ಅಪಾಯದ ಮಟ್ಟಮೀರಿ ಹರಿಯುತ್ತಿದ್ದು, ಹಲವೆಡೆ ರಸ್ತೆ, ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಹಿಮಾಚಲ ಪ್ರದೇಶದಲ್ಲಿ 6 ಜನರು ಮೃತಪಟ್ಟಿದ್ದಾರೆ. ಅಲ್ಲದೇ ಇನ್ನೂ 13 ಜನರು ಮೃತಪಟ್ಟಶಂಕೆ ವ್ಯಕ್ತವಾಗಿದೆ. ಅದೇ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಮೇಘಸ್ಪೋಟದಿಂದಾಗಿ ಸೇತುವೆಗಳು ಕೊಚ್ಚಿ ಹೋಗಿವೆ.

ಹಿಮಾಚಲದಲ್ಲಿ ಪ್ರವಾಹ:

ಹಾರಿಮ್‌ಪುರ ಜಿಲ್ಲೆಯಲ್ಲಿ ಸುಮಾರು 22 ಜನರು ಪ್ರವಾಹದಲ್ಲಿ ಸಿಲುಕಿದ್ದು, ಉಳಿದವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಕಾಂಗ್ರಾ ಜಿಲ್ಲೆಯ ಚಕ್ಕಿ ಸೇತುವೆ ಕುಸಿದ ಹಿನ್ನೆಲೆಯಲ್ಲಿ ಜೋಗಿಂದರ್‌ನಗರ್‌ ಹಾಗೂ ಪಠಾಣಕೋಟ್‌ ಮಾರ್ಗದ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಚಂಬಾ ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ ಮನೆಯ ಅವಶೇಷಗಳ ಅಡಿಯಲ್ಲಿ ಸಿಲುಕಿ ಮೂವರು ಮೃತಪಟ್ಟಿದ್ದಾರೆ. ಮಂಡಿ ಜಿಲ್ಲೆಯಲ್ಲಿ ಬಾಲಕಿಯೊಬ್ಬಳು ಮೃತಪಟ್ಟಿದ್ದು ಖಚಿತವಾಗಿದ್ದು, ಇನ್ನೂ 13 ಜನರು ಮೃತಪಟ್ಟಶಂಕೆ ಇದೆ. ಬಾಲಕಿಯ ಶವ ಪ್ರವಾಹದಲ್ಲಿ ತೇಲಿ ಹೋಗಿ ಬಾಗಿ ನುಲ್ಲಾದಲ್ಲಿರುವ ಅವರ ಮನೆಯಿಂದ ಸುಮಾರು 500 ಮಿ. ದೂರದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಭೂಕುಸಿತ: ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ

ಬಾಗಿ ಹಾಗೂ ಕೋಟಾಲ ಜಿಲ್ಲೆಯಲ್ಲಿ ಮೇಘಸ್ಪೋಟದಿಂದಾಗಿ ಹಲವರ ಮನೆ ಕುಸಿದಿವೆ. ಕಶನ್‌ ಗ್ರಾಮದಲ್ಲೂ ಭೂಕುಸಿತವಾಗಿದ್ದು, ಕುಟುಂಬದ 8 ಜನರು ಮನೆಯ ಅವಶೇಷಗಳ ಅಡಿಯಲ್ಲೇ ಸಿಲುಕಿದ್ದಾರೆ ಅವರ ರಕ್ಷಣಾ ಕಾರ್ಯಗಳು ನಡೆದಿವೆ. ಬಾಲ್‌, ಸದರ್‌, ಥುನಾಗ್‌, ಮಂಡಿ ಹಾಗೂ ಲಮಾಟಾಚ್‌ ಗ್ರಾಮಗಳಲ್ಲಿ ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿ ಸಾಕಷ್ಟುಹಾನಿಯಾಗಿದೆ. ಕಾಂಗ್ರಾದಲ್ಲಿ ಮನೆ ಕುಸಿದು 9 ವರ್ಷದ ಮಗು ಮೃತಪಟ್ಟಿದೆ. ಲಹರ್‌ ಜಿಲ್ಲೆಯಲ್ಲಿ ಬಾಲ ಮುಕುಂದ ಎಂಬ 48 ವರ್ಷದ ವ್ಯಕ್ತಿ ಭೂಕುಸಿತದಿಂದ ಮೃತಪಟ್ಟಿದ್ದಾನೆ.

ಪ್ರವಾಹದ ಮಧ್ಯೆ ಟ್ರಾಕ್ಟರ್‌ ಪಲ್ಟಿ: ಟ್ರಾಕ್ಟರ್‌ನಲ್ಲಿದ್ದವರು ನೀರುಪಾಲು Viral video

ಆ. 28ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು ರಾಜ್ಯದಲ್ಲಿ ಅಲರ್ಚ್‌ ಘೋಷಿಸಲಾಗಿದೆ. ಪ್ರವಾಸಿಗರು, ನಾಗರಿಕರಿಗೆ ನದಿ, ಕೆರೆ ಅಥವಾ ಯಾವುದೇ ನೀರಿನ ಮೂಲಗಳ ಸಮೀಪ ತೆರಳದಂತೆ ಸೂಚನೆ ನೀಡಲಾಗಿದ್ದು, ಭೂಕುಸಿತದ ಭಯವಿರುವ ಸೂಕ್ಷ್ಮ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಗಿದೆ.

ಡೆಹ್ರಾಡೂನ್‌ನಲ್ಲಿ ಹಾನಿ:

ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟದಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಸೇತುವೆಗಳು ಕೊಚ್ಚಿ ಹೋಗಿವೆ. ಟೋನ್ಸ್‌ ನದಿಯ ದಡದಲ್ಲಿರುವ ಪ್ರಸಿದ್ಧ ತಪಾಕೇಶ್ವರ ಗುಹೆಗಳಲ್ಲೂ ನೀರು ಒಳನುಗ್ಗಿದೆ. ಇಕಲ್ಲಿನ ಸರ್‌ಖೇಟ್‌ ಗ್ರಾಮದಲ್ಲಿ ರಾತ್ರಿ 2.15ಕ್ಕೆ ಮೇಘಸ್ಫೋಟವಾಗಿದ್ದು, ಸೊಂಗ್‌ ನದಿ ಸೇತುವೆ ಕೊಚ್ಚಿ ಹೋಗಿದೆ. ಮಸ್ಸೂರಿಯ ಕೆಂಪ್ಟಿಜಲಪಾತದಿಂದ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಜಿಲ್ಲೆಯಲ್ಲಿ ಅಲರ್ಟ್‌‌ ಘೋಷಿಸಲಾಗಿದ್ದು, ವಿಪತ್ತು ನಿರ್ವಹಣಾ ತಂಡಗಳನ್ನು ನೆರೆ ಬಾಧಿತ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಅಗತ್ಯವಿದ್ದಲ್ಲಿ ಯೋಧರ ಸಹಾಯವನ್ನು ಕೂಡಾ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಮಿ ಹೇಳಿದ್ದಾರೆ.

ತೆಹ್ರಿ ಜಿಲ್ಲೆಯಲ್ಲಿ ಮನೆ ಕುಸಿದು 80 ವರ್ಷಗಳ ಮಹಿಳೆ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು (ಎಸ್‌ಡಿಆರ್‌ಎಫ್‌) ಸುರಕ್ಷಿತ ಸ್ಥಾನಕ್ಕೆ ಜನರನ್ನು ಸ್ಥಳಾಂತರಿಸಲು ಮುಂದಾಗಿವೆ. ಮಾಲ್ಡೇವಾ, ಭೂಟ್ಸಿ, ತೌಲಿಯಾಕಾಟಲ್‌, ಲವಾರ್ಕಾ, ರಿಂಗಾಲ್‌ಗಢ, ಧುಟ್ಟು, ರಗಡ್‌ ಗಾಂವ್‌, ಸರ್ಕೇಟ್‌ ಗ್ರಾಮಗಳನ್ನು ಪ್ರವಾಹ ಬಾಧಿತ ಎಂದು ಘೋಷಿಸಲಾಗಿದೆ. ರಿಷಿಕೇಶ್‌-ಬದರೀನಾಥ, ರಿಷಿಕೇಶ್‌-ಗಂಗೋತ್ರಿ ಹಾಗೂ ನರೇಂದ್ರನಗರ- ರಾಣಿಪೋಕ್ರಿ ರಸ್ತೆಯಲ್ಲಿ ಸಂಚಾರ ವ್ಯತ್ಯಯವಾಗಿದೆ.
 

click me!