ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿಯಮಿತವಾಗಿ ಸಂಚರಿಸುವ ಖಾಸಗಿ ವಾಹನಗಳಿಗೆ ಮಾಸಿಕ ಹಾಗೂ ವಾರ್ಷಿಕ ಟೋಲ್ ಪಾಸ್ ನೀಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ನವದೆಹಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮಿತವಾಗಿ ಸಂಚರಿಸುವ ಖಾಸಗಿ ವಾಹನಗಳಿಗೆ ಅನುವಾಗುವ ನಿಟ್ಟಿನಲ್ಲಿ ಮಾಸಿಕ ಹಾಗೂ ವಾರ್ಷಿಕ ಟೋಲ್ ಪಾಸ್ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿದ ಸಚಿವ ಗಡ್ಕರಿ 'ಖಾಸಗಿ ವಾಹನಗಳಿಗೆ ಮಾಸಿಕ, ವಾರ್ಷಿಕ ಪಾಸ್ ವಿತರಣೆಗೆ ಚಿಂತನೆ ನಡೆಸಿದ್ದೇವೆ. ಖಾಸಗಿ ವಾಹನಗಳು ಟೋಲ್ ಸಂಗ್ರಹದಲ್ಲಿ ಶೇ.26ರಷ್ಟು ಪಾಲು ಹೊಂದಿದೆ. ಹೀಗಾಗಿ ಹೆಚ್ಚು ನಷ್ಟ ಸಂಭವಿಸುವುದಿಲ್ಲ' ಎಂದಿದ್ದಾರೆ.
ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದಂತೆ ಟೋಲ್ ಸಂಗ್ರಹಣಾ ಬೂತ್ ಅನ್ನು ಹಳ್ಳಿಗಳ ಹೊರಗೆ ಸ್ಥಾಪನೆ ಮಾಡಲಾಗುವುದು. ಅಲ್ಲದೇ ಫಾಸ್ಟ್‌ಟ್ಯಾಗ್ ಜೊತೆಗೆ ಹೆಚ್ಚುವರಿ ಸೌಲಭ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಜಿಎನ್‌ಎಸ್‌ಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಆರಂಭದಲ್ಲಿ ಜಾರಿಗೆ ತರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Toll Plaza Exemptions: ಯಾರಿಗೆಲ್ಲಾ ಟೋಲ್ ಹಣ ಕಟ್ಟುವುದರಿಂದ ವಿನಾಯಿತಿ ಇದೆ?
ಏನಿದು ಜಿಎನ್‌ಎಸ್‌ಎಸ್ ಟೋಲ್ ಸಂಗ್ರಹ?
ಭಾರತವು GNSS ಆಧಾರಿತ ಟೋಲ್ ಸಂಗ್ರಹಕ್ಕಾಗಿ ಪೈಲಟ್ ಯೋಜನೆಯನ್ನು ಪ್ರಾರಂಭಿಸಿದೆ. ಇದು ಟೋಲ್ ಪ್ಲಾಜಾಗಳಲ್ಲಿ ಕಾಯುವಿಕೆಯನ್ನು ತೆಗೆದುಹಾಕುತ್ತದೆ, ಪ್ರಯಾಣಿಸಿದ ದೂರದ ಆಧಾರದ ಮೇಲೆ ಟೋಲ್ ಶುಲ್ಕವನ್ನು ಸ್ವಯಂಚಾಲಿತವಾಗಿ ಡೆಬಿಟ್ ಮಾಡುತ್ತದೆ. GNSS ಆಧಾರಿತ ಟೋಲ್ ಸಂಗ್ರಹವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸಿದ ದೂರವನ್ನು ಟ್ರ್ಯಾಕ್ ಮಾಡಲು ಉಪಗ್ರಹಗಳನ್ನು ಬಳಸುತ್ತದೆ. ಹೆದ್ದಾರಿಯಲ್ಲಿನ ದೂರಕ್ಕೆ ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಈ ವ್ಯವಸ್ಥೆಯು ಸಾಮಾನ್ಯ ರಸ್ತೆಗಳಿಗೆ ಅನ್ವಯಿಸುವುದಿಲ್ಲ.
ಇದನ್ನೂ ಓದಿ: Bengaluru : ಕರ್ನಾಟಕದಲ್ಲಿ ಗರಿಷ್ಠ ಆದಾಯ ತರುವ ಟೋಲ್ ಪ್ಲಾಜಾ ಇದು, ಒಂದೇ ವರ್ಷದಲ್ಲಿ 308 ಕೋಟಿ ಕಲೆಕ್ಷನ್!