
ನವದೆಹಲಿ: ಜೂ.4ರಂದು ಕೇರಳ ಪ್ರವೇಶಿಸಲಿದೆ ಎಂದು ಊಹಿಸಲಾಗಿದ್ದ ಮುಂಗಾರು ಮಾರುತಗಳ ಕೆಲ ದಿನಗಳ ಕಾಲ ವಿಳಂಬವಾಗುವ ಸಾಧ್ಯತೆ ಇದೆ. ಅಲ್ಲದೇ ಮುಂದಿನ 5 ದಿನಗಳವರೆಗೆ ಪೂರ್ವ ಭಾರತದಲ್ಲಿ ಬಿಸಿ ಗಾಳಿ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಹೇಳಿದೆ.
ಸಾಮಾನ್ಯವಾಗಿ ಮುಂಗಾರು ಮಾರುತಗಳು ಜೂ.1ರಂದು ಕೇರಳ ಪ್ರವೇಶ ಮಾಡುತ್ತವೆ. ಆದರೆ ಈ ಬಾರಿ ಮುಂಗಾರು ಆಗಮನ ಮೂರು ದಿನ ವಿಳಂಬವಾಗಲಿದ್ದು, ಜೂ.4ರಂದು ಭಾರತದ ತೀರ ತಲುಪುವ ಸಾಧ್ಯತೆ ಇದೆ. ಕೇರಳದಲ್ಲಿ ಜೂ.5 ಮತ್ತು 6ರಂದು ಮೊದಲ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು.
ಆದರೆ ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ ಮೋಖಾ ಚಂಡಮಾರುತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮಾನ್ಸೂನ್ ನಿಖರ ಸಮಯಕ್ಕೆ ತಲುಪಲು ಸಹಾಯ ಮಾಡಿದ್ದರೂ ಸಹ ಹಿಂದೂ ಮಹಾಸಾಗರದಲ್ಲಿ ಉಂಟಾದ ಫ್ಯಾಬಿಯನ್ ಚಂಡಮಾರುತ ಮಾನ್ಸೂನ್ ಮಾರುತಗಳನ್ನು ಸೆಳೆದಿದೆ. ಹೀಗಾಗಿ ಮುಂಗಾರು ಕೇರಳ ಪ್ರವೇಶ 2-3 ದಿನ ವಿಳಂಬ ಆಗಬಹುದು ಎಂದು ರಾಷ್ಟ್ರೀಯ ಹವಾಮಾನ ವಿಜ್ಞಾನ ವಿಶ್ವವಿದ್ಯಾಲಯದ ಅಕ್ಷಯ್ ದೋರಸ್ ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮುಂಗಾರು ಮಾರುತಗಳ ಆಗಮನ ವಿಳಂವಾಗುತ್ತಿದ್ದು, 2019ರಲ್ಲಿ ಜೂ.8ರಂದು ಕೇರಳವನ್ನು ತಲುಪಿತ್ತು.
ಕಾರ್ಕಳ, ಹೆಬ್ರಿ ತಾಲೂಕಲ್ಲಿ ನೀರಿನ ತೀವ್ರ ಅಭಾವ, ರೈತರು ಕಂಗಾಲು
ಮುಂಗಾರುಪೂರ್ವ ಮಳೆ ಕೊರತೆ; 79 ಅಡಿಗೆ ಕುಸಿದ ಕೆಆರ್‌ಎಸ್ ನೀರಿನ ಮಟ್ಟ!
ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ79.72 ಅಡಿಗೆ ಕುಸಿದಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಕಳೆದ 5 ವರ್ಷಗಳಿಂದ ಅಣೆಕಟ್ಟೆಯ ನೀರಿನ ಸಂಗ್ರಹದಲ್ಲಿ ಸುಧಾರಣೆ ಕಂಡು ಬಂದಿತ್ತು. ಆದರೆ, ಈ ವರ್ಷ ಅತಿ ಕಡಿಮೆ ಪ್ರಮಾಣದ ನೀರು ಸಂಗ್ರಹವಾಗಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಭೀತಿ ಎದುರಾಗಿದೆ. ಪ್ರಸ್ತುತ ಜಲಾಶಯಕ್ಕೆ 344 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಅಣೆಕಟ್ಟೆಯಿಂದ 2991 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ನದಿಗೆ 280 ಕ್ಯುಸೆಕ್, ವಿಶ್ವೇಶ್ವರಯ್ಯ ನಾಲೆಗೆ 2503 ಕ್ಯುಸೆಕ್, ಆರ್‌ಬಿಎಲ್‌ಎಲ್ ನಾಲೆಗೆ 100 ಕ್ಯುಸೆಕ್, ಎಲ್‌ಬಿಎಲ್‌ಎಲ್ ನಾಲೆಗೆ 58 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಅಣೆಕಟ್ಟೆಯಲ್ಲಿ ಕೇವಲ 10.663 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ.
ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 105.12 ಅಡಿ ನೀರು ಸಂಗ್ರಹವಾಗಿತ್ತು. ಅಂದು ಜಲಾಶಯಕ್ಕೆ 3361 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 3142 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು. ಅಂದು ಜಲಾಶಯದಲ್ಲಿ 27.095 ಟಿಎಂಸಿ ಅಡಿಯಷ್ಟುನೀರು ಸಂಗ್ರಹವಾಗಿತ್ತು. ಕಳೆದ ವರ್ಷ ಮುಂಗಾರು ಪೂರ್ವ ಮಳೆ ವ್ಯಾಪಕವಾಗಿ ಸುರಿದ ಪರಿಣಾಮ ಬೇಸಿಗೆಯಲ್ಲೇ ಕೆಆರ್‌ಎಸ್‌ಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿ ಜಲಾಶಯದಲ್ಲಿ ಸುಮಾರು 5 ಅಡಿಗಳಷ್ಟು ನೀರು ಏರಿಕೆಯಾಗಿತ್ತು.
ಕಲಬುರಗಿ ಜಿಲ್ಲೆಯಲ್ಲಿ 8.87 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ
ಮುಂಗಾರು ಪೂರ್ವ ಮಳೆ ಕೊರತೆ:
ಮುಂಗಾರು ಪೂರ್ವ ಮಳೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಬಿದ್ದಿಲ್ಲ. ಇದರ ನಡುವೆಯೂ ಕೆಆರ್‌ಎಸ್‌ನಲ್ಲಿದ್ದ ನೀರನ್ನು ಬೇಸಿಗೆ ಬೆಳೆಗಳಿಗೆ ಹರಿಸಲಾಯಿತು. ಮುಂಗಾರು ಪೂರ್ವ ಮಳೆಯ ಕೊರತೆಯಿಂದ ಜಲಾಶಯದ ಸುತ್ತಮುತ್ತಲ ಕೆರೆ-ಕಟ್ಟೆಗಳಲ್ಲಿ ಅಲ್ಪಸ್ವಲ್ಪ ನೀರು ಮಾತ್ರ ಸಂಗ್ರಹವಾಗಿದೆ. ಮುಂಗಾರು ಪೂರ್ವ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿದಿದ್ದರೆ ರೈತರು ಭೂಮಿಯನ್ನು ಹದಗೊಳಿಸಿಕೊಂಡು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ಈಗಾಗಲೇ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ಒಳಹರಿವಿಲ್ಲದೆ ಅಣೆಕಟ್ಟು ಸೊರಗಿದೆ. ಜೊತೆಗೆ, ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶದಂತೆ ಜೂನ್ ತಿಂಗಳಲ್ಲಿ ತಮಿಳುನಾಡಿಗೆ ನೀರು ಹರಿಸುವ ಪರಿಸ್ಥಿತಿ ಸೃಷ್ಟಿಯಾಗಲಿದೆ. ಆಗ ನೀರಿಗೆ ಕ್ಲಿಷ್ಟಪರಿಸ್ಥಿತಿ ಎದುರಾಗುವ ಆತಂಕ ಮೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ