ಮುಂಗಾರು ಕೇರಳ ಭಾಗದಲ್ಲಿ ಸಾಮಾನ್ಯವಾಗಿ ಜೂ.1ರಂದು ಪ್ರವೇಶ ಮಾಡುತ್ತಿದ್ದುದು ಈ ಬಾರಿ ಒಂದು ದಿನ ಮೊದಲೇ ಪ್ರವೇಶಿಸುವುದಾಗಿ ಭಾರತೀಯ ಹವಾಮಾನ ಇಲಾಖೆ ಸುಳಿವು ನೀಡಿತ್ತು. ಆದರೆ ಅದಕ್ಕೂ ಒಂದು ದಿನ ಮುಂಚಿತವಾಗಿ ಮುಂಗಾರು ಭಾರತವನ್ನು ಪ್ರವೇಶಿಸಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ನವದೆಹಲಿ(ಮೇ.31): ದೇಶದ ಕೃಷಿ ಚಟುವಟಿಕೆ ಮತ್ತು ಆರ್ಥಿಕತೆಯ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಭಾರತದ ನೈರುತ್ಯ ಭಾಗದಲ್ಲಿ ಕೇರಳವನ್ನು ಗುರುವಾರ ಪ್ರವೇಶಿಸಿದ್ದು, ಅಪರೂಪದ ವಿದ್ಯಮಾನದಲ್ಲಿ ರೆಮಲ್ ಚಂಡಮಾರುತದ ಪ್ರಭಾವದಿಂದಾಗಿ ಈಶಾನ್ಯ ಭಾಗದಲ್ಲೂ ಗುರುವಾರದಂದೇ ಪ್ರವೇಶ ಮಾಡಿದೆ. ಬಳಿಕ ಮುಂದಿನ 5-10 ದಿನಗಳಲ್ಲಿ ದೇಶಾದ್ಯಂತ ವ್ಯಾಪಿಸುವ ನಿರೀಕ್ಷೆಯಿದೆ.
ಮುಂಗಾರು ಕೇರಳ ಭಾಗದಲ್ಲಿ ಸಾಮಾನ್ಯವಾಗಿ ಜೂ.1ರಂದು ಪ್ರವೇಶ ಮಾಡುತ್ತಿದ್ದುದು ಈ ಬಾರಿ ಒಂದು ದಿನ ಮೊದಲೇ ಪ್ರವೇಶಿಸುವುದಾಗಿ ಭಾರತೀಯ ಹವಾಮಾನ ಇಲಾಖೆ ಸುಳಿವು ನೀಡಿತ್ತು. ಆದರೆ ಅದಕ್ಕೂ ಒಂದು ದಿನ ಮುಂಚಿತವಾಗಿ ಮುಂಗಾರು ಭಾರತವನ್ನು ಪ್ರವೇಶಿಸಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇದರ ಜೊತೆಗೆ ಈಶಾನ್ಯ ಭಾಗದ ಅರುಣಾಚಲ ಪ್ರದೇಶ, ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ, ಮಿಜೋರಂ, ಮಣಿಪುರ ಮತ್ತು ಅಸ್ಸಾಂನಲ್ಲೂ ಮುಂಗಾರು ರೆಮಲ್ ಚಂಡಮಾರುತದ ಪ್ರಭಾವದಿಂದಾಗಿ ಸರಾಸರಿಗಿಂತ (ಜೂ.5) ಒಂದು ವಾರ ಮೊದಲೇ ಪ್ರವೇಶಿಸಿದೆ.
ಜೂನ್ ಮೊದಲ ವಾರ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ
ನೈಋತ್ಯ ಮಾನ್ಸೂನ್ ಭಾರತಕ್ಕೆ ಪ್ರಮುಖ ಮಳೆಯನ್ನು ತರುವ ಕಾಲ. ಇದು ದೇಶದ ವಾರ್ಷಿಕ ಮಳೆಯ ಬಹುಪಾಲನ್ನು ಒದಗಿಸುತ್ತದೆ. ಈ ಅವಧಿಯಲ್ಲಿ ಖಾರೀಫ್ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಜೂನ್ ಮತ್ತು ಜುಲೈ ತಿಂಗಳ ಅವಧಿಯ ನೈಋತ್ಯ ಮಾನ್ಸೂನ್ ಅತಿ ಮಹತ್ವದ್ದು ಅಂತಲೇ ಪರಿಗಣಿಸಲಾಗುತ್ತದೆ. ನೈಋತ್ಯದಿಂದ ಬೀಸುವ ಮಾನ್ಸೂನ್ ಸಾಮಾನ್ಯವಾಗಿ ಜೂನ್‌ನಲ್ಲಿ ಆರಂಭವಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಕೊನೆಗೊಳ್ಳುತ್ತದೆ.
ಈ ವರ್ಷ ಮಳೆ ಹೇಗಿರಲಿದೆ?
ಕರ್ನಾಟಕ ಒಳಗೊಂಡ ದಕ್ಷಿಣ ಭಾರತದಲ್ಲೂ ವಾಡಿಕೆಗಿಂತ ಹೆಚ್ಚು ಮಳೆ ಆಗಲಿದೆ. ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ. ವಾಯುವ್ಯದಲ್ಲಿ ಸಾಮಾನ್ಯ ಮತ್ತು ದೇಶದ ಮಧ್ಯ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ.
2017ರ ಬಳಿಕ ಮೊದಲಿಗೆ:
ಸಾಮಾನ್ಯವಾಗಿ ಭಾರತದಲ್ಲಿ ಮುಂಗಾರು ಮಾರುತಗಳು ನೈರುತ್ಯ ಭಾಗದ ತುತ್ತತುದಿಯಿಂದ ಪ್ರವೇಶಿಸುತ್ತವೆ. ಭಾರತದ ನೈರುತ್ಯ ಹಾಗೂ ಈಶಾನ್ಯ ಭಾಗದಲ್ಲಿ ಏಕಕಾಲದಲ್ಲಿ ಮುಂಗಾರು ಪ್ರವೇಶಿಸುತ್ತಿರುವ ಅಪರೂಪದ ವಿದ್ಯಮಾನ 2017ರ ಬಳಿಕ ಇದೇ ಮೊದಲ ಬಾರಿಗೆ ಘಟಿಸುತ್ತಿದೆ. ಪಶ್ಚಿಮ ಬಂಗಾಳಕ್ಕೆ ಮುಂಗಾರು ಪೂರ್ವದಲ್ಲಿ ರೆಮಲ್ ಚಂಡಮಾರುತ ಅಪ್ಪಳಿಸಿದ ಕಾರಣ ಅಲ್ಲೂ ಸಹ ಮುಂಗಾರು ಪ್ರವೇಶಿಸುವಂತಹ ವಾತಾವರಣ ಸೃಷ್ಟಿಸಿದೆ. 2017ರಲ್ಲಿ ಕೊನೆಯ ಬಾರಿಗೆ ಮೋರಾ ಚಂಡಮಾರುತ ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿದ್ದ ಕಾರಣ ಚಂಡಮಾರುತ ಒಟ್ಟಿಗೆ ಪ್ರವೇಶಿಸಿತ್ತು.