
ನವದೆಹಲಿ (ಜೂ.7): ಭಾಷಾ ವಿಷಯವಾಗಿ ಕರ್ನಾಟಕ ಹಾಗೂ ಉತ್ತರ ಭಾರತೀಯರ ನಡುವೆ ಆಗಾಗ ಸಂಘರ್ಷಗಳು ವರದಿಯಾಗುತ್ತಿರುವ ನಡುವೆಯೇ, ‘ಕರ್ನಾಟಕದಲ್ಲಿ ಉದ್ಯೋಗದಲ್ಲಿರುವವರು ಇಲ್ಲಿಯ ಸ್ಥಳೀಯ ಭಾಷೆಯನ್ನು ಕಲಿಯಬೇಕು ಮತ್ತು ಬಳಸಬೇಕು. ಕನ್ನಡದಲ್ಲಿ ಕೆಲವು ಮಾತುಗಳನ್ನಾಡಿ, ಕನ್ನಡಿಗರಿಗೆ ಗೌರವ ಸೂಚಿಸಬೇಕು’ ಎಂದು ತಾಂತ್ರಿಕ ಹೂಡಿಕೆದಾರ, ಆರಿನ್ ಕ್ಯಾಪಿಟಲ್‌ನ ಮುಖ್ಯಸ್ಥ ಮೋಹನದಾಸ್ ಪೈ ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ‘ಕೆಲವು ಅಧಿಕಾರಿಗಳು ಕನ್ನಡ ಕಲಿಯಲು ನಿರಾಕರಿಸುವುದು ದುರಹಂಕಾರ. ಇದು ಅನಗತ್ಯ ಉದ್ವಿಗ್ನತೆಗಳನ್ನು ಉಂಟುಮಾಡುತ್ತದೆ. ಬೆಂಗಳೂರು ಅತ್ಯಂತ ಸ್ವಾಗತಾರ್ಹ ಸ್ಥಳ. ಇತ್ತೀಚೆಗೆ, ಹೊರಭಾಗದಿಂದ ಇಲ್ಲಿಗೆ ಬರುವವರಲ್ಲಿ ಅನೇಕರು ದುರಹಂಕಾರಿಗಳಾಗಿ, ಕನ್ನಡ ಮಾತಾಡಲು ಹಿಂದೇಟು ಹಾಕುತ್ತಾರೆ. ಇದರಿಂದ ಸಮಸ್ಯೆ ಉಂಟಾಗುತ್ತಿದೆ. ಕನ್ನಡದಲ್ಲಿ ಕೆಲವು ಮಾತನ್ನಾದರೂ ಆಡಬೇಕು. ಇಲ್ಲಿನ ಜನರಿಗೆ ಗೌರವ ಸಲ್ಲಿಸಬೇಕು’ ಎಂದರು.
ಇಲ್ಲಿ ಕನ್ನಡ ಮಾತನಾಡುವ ಸ್ಥಳೀಯರ ಸಂಖ್ಯೆ ಕೇವಲ ಶೇ.33ರಷ್ಟಿದೆ. ಬಹಳಷ್ಟು ಜನ ಇಲ್ಲಿಗೆ ಬಂದು, ಒಳ್ಳೆಯ ಕೆಲಸ ಮಾಡಿ ಪ್ರಯೋಜನ ಪಡೆದಿದ್ದಾರೆ.ಇತ್ತೀಚೆಗೆ ಗ್ರಾಹಕರೊಂದಿಗೆ ಕನ್ನಡ ಮಾತಾಡಲು ನಿರಾಕರಿಸಿದ್ದಲ್ಲದೆ, ಅಹಂಕಾರದ ವರ್ತನೆಯಿಂದ ಸುದ್ದಿಯಾಗಿದ್ದ ಎಸ್‌ಬಿಐ ಬ್ಯಾಂಕ್‌ನ ಹಿಂದಿಭಾಷಿಕ ಉದ್ಯೋಗಿ ಕುರಿತು ಪ್ರಸ್ತಾವಿಸಿದ ಅವರು, ‘ಆಕೆ ಸೇವಾ ಕೆಲಸದಲ್ಲಿದ್ದಾಕೆ. ಸರ್, ಕ್ಷಮಿಸಿ. ನನಗೆ ಕನ್ನಡ ಮಾತಾಡಲು ಬರುವುದಿಲ್ಲ. ಕಲಿಯುತ್ತಿದ್ದೇನೆ. ನನ್ನ ಸಹೋದ್ಯೋಗಿಗಳ ನೆರವು ಪಡೆಯುವೆ ಎಂದಿದ್ದರೆ ಸಾಕಿತ್ತು. ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ’ ಎಂದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ