
ನವದೆಹಲಿ(ಏ.11): ದೇಶಾದ್ಯಂತ ಉದ್ಭವವಾದ ಕೊರೋನಾ ಲಸಿಕೆ ಕೊರತೆ ಬಗ್ಗೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಇದೇ ವಿಚಾರವನ್ನಿಟ್ಟುಕೊಂಡು ಕೋವಿಡ್ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಕಿಡಿಕಾರಿದ್ದಾರೆ.
ಈ ಬಗ್ಗೆ ಶನಿವಾರ ವಿಡಿಯೋ ಸಂವಾದದಲ್ಲಿ ಮಾತನಾಡಿದ ಸೋನಿಯಾ ಅವರು, ‘ಮೋದಿ ಸರ್ಕಾರ ದೇಶದಲ್ಲಿ ಉತ್ಪತ್ತಿಯಾದ ಲಸಿಕೆಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ. ಇದರಿಂದ ದೇಶದ ವಿವಿಧ ಭಾಗಗಳಲ್ಲಿ ಲಸಿಕೆಗಳ ಅಭಾವ ಎದುರಾಗಿದ್ದು, ಕೊರೋನಾ ನಿಯಂತ್ರಣದಲ್ಲಿ ಸರ್ಕಾರ ಹಾದಿ ತಪ್ಪಿದೆ. ಚುನಾವಣೆ ಪ್ರಚಾರಗಳು ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಭಾರೀ ಸಂಖ್ಯೆ ಜನರ ಭಾಗವಹಿಸುವಿಕೆಯಿಂದ ಸೋಂಕಿನ 2ನೇ ಅಲೆ ತೀವ್ರವಾಗಿದ್ದು, ಇದಕ್ಕೆ ನಾವೆಲ್ಲರೂ ಜವಾಬ್ದಾರರು. ಇದನ್ನು ಅರಿತು, ದೇಶದ ಹಿತಾಸಕ್ತಿ ಕಾಪಾಡಬೇಕಿದೆ ಎಂದು ಮೋದಿ ಸರ್ಕಾರವನ್ನು ತಿವಿದರು.
ಅಲ್ಲದೆ ಸೋಂಕು ನಿಯಂತ್ರಣ, ಆರ್ಥಿಕತೆಯ ಕುಸಿತ, ಲಾಕ್‌ಡೌನ್ ಸೇರಿದಂತೆ ಇನ್ನಿತರ ಸಮಸ್ಯೆಗಳ ನಿವಾರಣೆಗೆ ನಿಮ್ಮ ಅಭಿಪ್ರಾಯ ತಿಳಿಸುವಂತೆ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರವಿರುವ ಮುಖ್ಯಮಂತ್ರಿಗಳು ಮತ್ತು ಸಚಿವರಿಗೆ ಸೋನಿಯಾ ಗಾಂಧಿ ಪ್ರಶ್ನಿಸಿದರು.
ದೇಶಾದ್ಯಂತ ಸೋಂಕಿನ 2ನೇ ಅಲೆಯ ಉಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸಾರ್ವಜನಿಕ ಸಮಾರಂಭಗಳು ಮತ್ತು ಚುನಾವಣಾ ರಾರಯಲಿಗಳನ್ನು ರದ್ದುಗೊಳಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ