
ಚುಚುರಾ (ಫೆ.23): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಇಲ್ಲಿನ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾದ ವಿರುದ್ಧ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶ ಒಗ್ಗೂಡಿಸಿದ ‘ವಂದೇಮಾತರಂ’ ಬರೆದ ಬಂಕಿಮಚಂದ್ರ ಚಟರ್ಜಿ ಅವರು ತಮ್ಮ ಜೀವಮಾನ ಕಳೆದ ಮನೆ ಹಾಳಾಗಿದೆ. ಇದು ಬಂಗಾಳಿ ಅಸ್ಮಿತೆಗೇ ಅವಮಾನ ಎಂದು ಮಮತಾ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸೋಮವಾರ ಇಲ್ಲಿನ ಹೂಗ್ಲಿ ಜಿಲ್ಲೆಯಲ್ಲಿ ಚುನಾವಣಾ ರಾರಯಲಿಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ‘ಟಿಎಂಸಿ ಸರ್ಕಾರ ‘ಸಿಂಡಿಕೇಟ್ ರಾಜ್’ ಇದ್ದಂತೆ. ಇಲ್ಲಿ ದುಡ್ಡು ಕೊಡದೆ ಜನಸಾಮಾನ್ಯರ ಯಾವ ಕೆಲಸಗಳೂ ನಡೆಯುವುದಿಲ್ಲ’ ಎಂದು ಆರೋಪಿಸಿದರು.
‘ಇದೇ ವೇಳೆ, ಟಿಎಂಸಿ ನೇತೃತ್ವದ ಸರ್ಕಾರ ತನ್ನ ಓಟ್ ಬ್ಯಾಂಕ್ ರಕ್ಷಣೆಗಾಗಿ ಓಲೈಕೆ ರಾಜಕಾರಣ ಮಾಡುತ್ತಾ, ಇಲ್ಲಿ ಸಂಸ್ಕೃತಿ, ಪರಂಪರೆಯನ್ನು ಕಡೆಗಣಿಸುತ್ತಿದೆ. ಎಷ್ಟರಮಟ್ಟಿಗೆ ಕಡೆಗಣಿಸುತ್ತಿದೆ ಎಂದರೆ ಇಲ್ಲಿನ ಪವಿತ್ರ ದುರ್ಗಾಪೂಜೆಯನ್ನೇ ನಿಲ್ಲಿಸಲಾಯಿತು. ಹಾಗೆಯೇ ಕೈಗಾರಿಕಾ ಅಭಿವೃದ್ಧಿ ಮತ್ತು ರೈತರು ಮತ್ತು ಬಡವರಿಗೆ ನೆರವಾಗುವ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ನಿಧಿ ಮತ್ತು ಆಯುಷ್ಮಾನ್ ಯೋಜನೆಗಳನ್ನೂ ಸರ್ಕಾರ ನಿರ್ಲಕ್ಷಿಸಿದೆ’ ಎಂದು ಹೇಳಿದರು.
ಅಲ್ಲದೆ, ರಾಜ್ಯ ಸರ್ಕಾರವು ಗೂಂಡಾಗಳಿಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸುವವರೆಗೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಅನುಷ್ಠಾನ ಆಗುವವರೆಗೆ ಬಂಗಾಳದ ಅಭಿವೃದ್ಧಿ ಸಾಧ್ಯವಿಲ್ಲ. ಬಂಗಾಳದ ಜನರು ನಿಜವಾದ ಬದಲಾವಣೆ ಬಯಸುತ್ತಿದ್ದಾರೆ. ಬಿಜೆಪಿಯು ಅಭಿವೃದ್ಧಿಯನ್ನು ಬಯಸುವ, ಯಾರನ್ನೂ ಓಲೈಕೆ ಮಾಡದ ಸರ್ಕಾರವನ್ನು ಬಂಗಾಳಕ್ಕೆ ಒದಗಿಸಲಿದೆ. ಇಲ್ಲಿನ ಸಂಸ್ಕೃತಿ, ಪರಂಪರೆಯನ್ನು ರಕ್ಷಿಸಲಿದೆ ಎಂದು ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ