ಭಾರತಕ್ಕೆ ಸಿಕ್ಕಿತು 4ನೇ ಲಸಿಕೆ: ಮಾಡೆರ್ನಾಗೆ ಕೇಂದ್ರ ಒಪ್ಪಿಗೆ!

By Kannadaprabha NewsFirst Published Jun 30, 2021, 7:32 AM IST
Highlights

* ಅಮೆರಿಕದ 94% ಪರಿಣಾಮಕಾರಿ ಲಸಿಕೆಗೆ ಡಿಸಿಜಿಐ ಸಮ್ಮತಿ

* ಭಾರತಕ್ಕೆ ಸಿಕ್ಕಿತು 4ನೇ ಲಸಿಕೆ: ಮಾಡೆರ್ನಾಗೆ ಕೇಂದ್ರ ಒಪ್ಪಿಗೆ

* ಸಿಪ್ಲಾ ಕಂಪನಿಯಿಂದ ಆಮದು, ಅಧ್ಯಯನ ಬಳಿಕ ವಿತರಣೆ

ನವದೆಹಲಿ(ಜೂ.30): ಕೋವಿಡ್‌ 3ನೇ ಅಲೆ ಎದುರಿಸಲು ಸನ್ನದ್ಧವಾಗುತ್ತಿರುವ ಭಾರತಕ್ಕೆ ಮತ್ತೊಂದು ದೊಡ್ಡ ಅಸ್ತ್ರ ಸಿಕ್ಕಿದೆ. ಅಮೆರಿಕದ ಮಾಡೆರ್ನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆಯನ್ನು ನಿಯಂತ್ರಿತ ತುರ್ತು ಬಳಕೆ ನಿಯಮದಡಿ ಭಾರತಕ್ಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಮುಂಬೈ ಮೂಲದ ಸಿಪ್ಲಾ ಫಾರ್ಮಸ್ಯುಟಿಕಲ್ಸ್‌ ಕಂಪನಿಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ (ಡಿಸಿಜಿಐ) ಮಾಡೆರ್ನಾ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ. ಆದರೆ, ಭಾರತಕ್ಕೆ ಬಂದಾಕ್ಷಣ ಈ ಲಸಿಕೆ ಜನರಿಗೆ ಸಿಗುವುದಿಲ್ಲ. ಬದಲಿಗೆ, ಕೆಲವು ಔಪಚಾರಿಕತೆಗಳನ್ನು ಪೂರೈಸಬೇಕಿದ್ದು, ಆ ಬಳಿಕ ಜನರಿಗೆ ಇದು ಲಭಿಸಲಿದೆ. ಇದರೊಂದಿಗೆ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಮತ್ತು ಸ್ಪುಟ್ನಿಕ್‌ ಬಳಿಕ ಭಾರತಕ್ಕೆ 4ನೇ ಲಸಿಕೆ ಲಭ್ಯವಾದಂತಾಗಿದೆ.

‘ಕೋವ್ಯಾಕ್ಸ್‌’ ಯೋಜನೆಯಡಿ ಅಮೆರಿಕ ಸರ್ಕಾರ ಒಂದಿಷ್ಟುಪ್ರಮಾಣದ ಲಸಿಕೆಯನ್ನು ಭಾರತಕ್ಕೆ ಉಚಿತವಾಗಿ ನೀಡಲು ನಿರ್ಧರಿಸಿದೆ ಎಂದು ಇತ್ತೀಚೆಗೆ ಮಾಡೆರ್ನಾ ಕಂಪನಿ ಡಿಸಿಜಿಐಗೆ ಮಾಹಿತಿ ನೀಡಿತ್ತು. ಅದರ ಬೆನ್ನಲ್ಲೇ ಸಿಪ್ಲಾ ಕಂಪನಿಯು ಈ ಲಸಿಕೆ ಆಮದಿಗೆ ಅನುಮತಿ ಕೋರಿತ್ತು. ಅದರಂತೆ ಇದೀಗ ಅನುಮತಿ ನೀಡಲಾಗಿದೆ. ಅದರನ್ವಯ ಸಿಪ್ಲಾ ಸಂಸ್ಥೆಯು ಮೊದಲ 100 ಜನರಿಗೆ ಲಸಿಕೆ ನೀಡಿದ ಬಳಿಕದ ಸುರಕ್ಷತಾ ಅಧ್ಯಯನ ವರದಿಯನ್ನು 7 ದಿನದಲ್ಲಿ ಡಿಸಿಜಿಐಗೆ ಸಲ್ಲಿಸಬೇಕು. ಅದರ ಆಧಾರದಲ್ಲಿ ಮಾಡೆರ್ನಾ ಲಸಿಕೆಯನ್ನು ದೇಶದಲ್ಲಿ ನಡೆಯುತ್ತಿರುವ ಲಸಿಕಾ ಆಂದೋಲನದ ಭಾಗವಾಗಿ ಮಾಡಿಕೊಳ್ಳುವ ಕುರಿತು ಮುಂದಿನ ನಿರ್ಧಾರವನ್ನು ಡಿಸಿಜಿಐ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ಲಸಿಕೆ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ, ಅಮೆರಿಕದ ಔಷಧ ನಿಯಂತ್ರಣ ಪ್ರಾಧಿಕಾರ ಮತ್ತು ಯುರೋಪಿಯನ್‌ ಒಕ್ಕೂಟದಿಂದ ಅನುಮೋದನೆ ಪಡೆದ ಯಾವುದೇ ಲಸಿಕೆಯನ್ನು ಭಾರತದಲ್ಲಿ ಪ್ರಯೋಗಕ್ಕೆ ಒಳಪಡಿಸದೆಯೇ ಬಳಸಲು ಕೆಲ ತಿಂಗಳ ಹಿಂದೆಯೇ ಡಿಸಿಜಿಐ ಅನುಮತಿ ನೀಡಿತ್ತು.

ಭಾರತದಲ್ಲಿ 4 ಲಸಿಕೆ

1.ಕೋವಿಶೀಲ್ಡ್‌

2.ಕೋವ್ಯಾಕ್ಸಿನ್‌

3.ಸ್ಪುಟ್ನಿಕ್‌-5

4.ಮಾಡೆರ್ನಾ

ಜನರಿಗೆ ಯಾವಾಗ ಲಭ್ಯ?

ಮಾಡೆರ್ನಾ ಲಸಿಕೆ ಭಾರತಕ್ಕೆ ಬಂದಾಕ್ಷಣ ಜನರಿಗೆ ಸಿಗುವುದಿಲ್ಲ. ಸಿಪ್ಲಾ ಕಂಪನಿಯು 100 ಮಂದಿಗೆ ಈ ಲಸಿಕೆ ನೀಡಿ ಸುರಕ್ಷತಾ ಅಧ್ಯಯನ ನಡೆಸಲಿದೆ. ನಂತರ ಅದರ ವರದಿಯನ್ನು ಡಿಸಿಜಿಐಗೆ ಸಲ್ಲಿಸಲಿದೆ. ವರದಿ ಪರಾಮರ್ಶಿಸಿದ ನಂತರ ಇದನ್ನು ಲಸಿಕೆ ಆಂದೋಲನದ ಭಾಗವನ್ನಾಗಿ ಮಾಡಿಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಲಿದೆ.

click me!