
ಹೈದರಾಬಾದ್ (ಆ.02) ತೆಲಂಗಾಣ ರಾಜ್ಯ ಉದಯಿಸಿದ ಬಳಿಕ ಅಧಿಕಾರಕ್ಕೇರಿದ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ ಬಳಿಕ ರಾಷ್ಟ್ರೀಯ ಪಕ್ಷವಾಗಬೇಕು ಅನ್ನೋ ಉದ್ದೇಶದಿಂದ ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್) ಪಕ್ಷವಾಗಿ ಬದಲಾಗಿತ್ತು. ತೆಲಂಗಾಣ ರಾಜ್ಯಕ್ಕಾಗಿ ಹೋರಾಟ ಮಾಡಿದ ಕೆ ಚಂದ್ರಶೇಖರ್ ರಾವ್ ಮುಖ್ಯಮಂತ್ರಿಯಾಗಿ ಪಕ್ಷವನ್ನೂ ಗಟ್ಟಿಗೊಳಿಸಿದ್ದರು. ತಂದೆ ಕಟ್ಟಿ ಬೆಳೆಸಿದ ಬಿಆರ್‌ಎಸ್ ಪಕ್ಷದಿಂದ ಮಗಳು ಕೆ ಕವಿತಾ ಸಸ್ಪೆಂಡ್ ಆಗಿದ್ದಾರೆ. ತೆಲಂಗಾಣ ಎಂಎಲ್‌ಸಿ ಆಗಿರುವ ಕೆ ಕವಿತಾ ಆಡಿದ ಒಂದು ಮಾತಿನಿಂದ ತಂದೆಯ ಪಕ್ಷದಿಂದಲೇ ಹೊರಬಿದ್ದಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಆರ್‌ಎಸ್ ಪಕ್ಷ ಸೋಲು ಕಂಡು ಅಧಿಕಾರ ಕಳೆದುಕೊಂಡಿತ್ತು. ಬಳಿಕ ಪಕ್ಷದಲ್ಲಿ ಆಂತರಿಕ ಸಮಸ್ಯೆಗಳೇ ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಪಕ್ಷ ಮುನ್ನಡೆಸುತ್ತಿರುವ ಕೆ ಚಂದ್ರಶೇಖರ್ ರಾವ್ ತಮ್ಮ ಮಗಳನ್ನೇ ಪಕ್ಷದಿಂದ ಅಮಾನತು ಮಾಡಿದ ಘಟನೆ ನಡೆದಿದೆ. ಕೆ ಕವಿತಾ ನೀಡಿದ ಪಕ್ಷ ವಿರೋಧಿ ಹೇಳಿಕೆಯಿಂದ ಅಮಾನತ್ತಾಗಿದ್ದಾರೆ. ತಂದೆಯ ನೆರವಿಗೆ ಬಂದ ಮಗಳೇ ಇದೀಗ ಪಕ್ಷದಿಂದ ಹೊರಬಿದ್ದಿದ್ದಾರೆ.
ಕೆ ಚಂದ್ರಶೇಖರ್ ರಾವ್ ಅಧಿಕಾರವಧಿಯಲ್ಲಿ ನಡೆದ ಅಕ್ರಮಗಳ ತನಿಖೆಯನ್ನು ತೆಲಂಗಾಣದ ಕಾಂಗ್ರೆಸ್ ಸರ್ಕಾರ ಸಿಬಿಐಗೆ ವಹಿಸಿದೆ. ಪ್ರಮುಖವಾಗಿ ಕಲವೇಶ್ವರಂ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ತೆಲಂಗಾಣ ಕಾಂಗ್ರೆಸ್ ಸರ್ಕಾರ ಆರೋಪಿಸಿದೆ. 2014ರಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆಯಲ್ಲಿ ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿಚಾರಣೆ ಎದುರಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರ ಸಿಬಿಐ ತನಿಖೆಗೆ ಆದೇಶ ನೀಡುತ್ತಿದ್ದಂತೆ ಇತ್ತ ಕೆ ಕವಿತಾ ತಂದೆಯ ಪರವಾಗಿ ಬ್ಯಾಟ್ ಬೀಸಿದ್ದಾರೆ. ಇದುವೇ ಕೆ ಕವಿತಾಗೆ ಮಳುವಾಗಿದೆ.
ರೇವಂತ್ ರೆಡ್ಡಿ ವಿರುದ್ಧ ಸ್ವಪಕ್ಷೀಯ ಶಾಸಕ ಗರಂ
ಕಾಂಗ್ರೆಸ್ ಸರ್ಕಾರ ಸಿಬಿಐ ತನಿಖೆಗೆ ಆದೇಶ ನೀಡುತ್ತಿದ್ದಂತೆ ಕೆ ಕವಿತಾ ನೀಡಿದ ಹೇಳಿಕೆ ಬಿಆರ್‌ಎಸ್ ಪಕ್ಷದಲ್ಲಿ ಕೋಲಾಹಲ ಸೃಷ್ಟಿಸಿದೆ. ಬಿಆರ್‌ಎಸ್ ಪತ್ರದ ಹಿರಿಯ ನಾಯಕ ಕೆ ಹರೀಶ್ ರಾವ್ ಹಾಗೂ ಮಾಜಿ ಸಂಸದೆ ಮೇಘ ಕೃಷ್ಣ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಂದೆ ಕೆ ಚಂದ್ರಶೇಖರ್ ರಾವ್ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. 2014ರಲ್ಲಿ ಹರೀಶ್ ರಾವ್ ಇರಿಗೇಶನ್ ಮಿನಿಸ್ಟರ್ ಆಗಿದ್ದರು. ಅಕ್ರಮ ಆಗಿದೆ ಎಂದರೆ ಅವರ ವಿಚಾರಣೆ, ಅವರ ವಿರುದ್ದ ತನಿಖೆ ನಡೆಯಬೇಕು. ಕೆ ಚಂದ್ರಶೇಖರ್ ರಾವ್ ವಿರುದ್ದ ಅಲ್ಲ. ಆದರೆ ಇಲ್ಲಿ ತೆಲಂಗಾಣ ಮುಖ್ಯಮಂತ್ರಿ ಹರೀಶ್ ರಾವ್ ಹಾಗೂ ಸಂತೋಷ್ ಕುಮಾರ್ ಅವರನ್ನು ರಕ್ಷಿಸಲು ತಂದೆ ಕೆ ಚಂದ್ರಶೇಖರ್ ರಾವ್ ವಿರುದ್ಧ ಸಿಬಿಐ ತನಿಖೆಗ ಆದೇಶಿಸಿದ್ದಾರೆ. ಬಿಆರ್‌ಎಸ್ ಪಕ್ಷದ ಹರೀಶ್ ರಾವ್, ಮೇಘ ಕೃಷ್ಣ ರೆಡ್ಡಿ, ಸಂತೋಷ್ ಕುಮಾರ್‌ಗೆ ಯಾವುದೇ ಪಾಲು ಇಲ್ಲವೇ? ಎಂದು ಕೆ ಕವಿತಾ ಪ್ರಶ್ನಿಸಿದ್ದಾರೆ.
ಪಕ್ಷ ವಿರೋಧಿ ಹೇಳಿಕೆ ನೀಡಿದ ಕವಿತಾ ವಿರುದ್ಧ ಬಿಆರ್‌ಎಸ್ ಪಕ್ಷ ಕಠಿಣ ಕ್ರಮ ಕೈಗೊಂಡಿದೆ. ಒಂದೇ ದಿನದಲ್ಲಿ ಕವಿತಾ ಅಮಾನತು ಮಾಡಿದೆ. ಬಿಆರ್‌ಎಸ್ ಪಕ್ಷ ಈಗಾಗಲೇ ಸಂಕಷ್ಟದಲ್ಲಿದೆ. ಇದರೊಂದಿಗೆ ಕೆ ಕವಿತಾ ಅಮಾನತು ಪಕ್ಷವನ್ನು ಮತ್ತಷ್ಟ ದುರ್ಬಲಗೊಳಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಬೆಳವಣಿಗೆ ಪಕ್ಷದ ಆತಂರಿಕ ಬಿಕ್ಕಟ್ಟು ಮತ್ತಷ್ಟು ಹೆಚ್ಚಿಸಲಿದೆ ಎಂದು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಇತ್ತ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಅನ್ನೋ ಆರೋಪಗಳು ಕೇಳಿಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ