ಬಾಬಾ ರಾಮ್‌ದೇವ್ ಅವರ ಪತಂಜಲಿ ಉತ್ಪನ್ನದ ಮೇಲೆ ಇದೀಗ ಉತ್ತರಖಂಡದಲ್ಲಿ ನಿಷೇಧ ಹೇರಲಾಗಿದೆ. 5 ಔಷಧಿಗಳ ಜಾಹೀರಾತು ಗ್ರಾಹಕರನ್ನು ತಪ್ಪುದಾರಿಗೆಳೆಯುತ್ತಿದೆ ಅನ್ನೋ ಕಾರಣಕ್ಕೆ ನಿಷೇಧ ಹೇರಲಾಗಿದೆ.
ಡೆಹ್ರಡೂನ್(ನ.11): ಬಾಬಾ ರಾಮ್‌ದೇವ್ ಅವರ ಪತಂಜಲಿ ಉತ್ಪನ್ನ ಇದೀಗ ಮತ್ತೆ ಭಾರಿ ಚರ್ಚೆಯಾಗುತ್ತಿದೆ. ಕೇರಳದ ನೇತ್ರ ತಜ್ಞ ಕೆ.ವಿ.ಬಾಬು ಸಲ್ಲಿಸಿದ ದೂರಿನ ಆಧಾರದಲ್ಲಿ ಇದೀಗ ಉತ್ತರಖಂಡದ ಆರ್ಯುವೇದ ಹಾಗೂ ಯೂನಾನಿ ಪರವಾನಗಿ ಪ್ರಾಧಿಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಪತಂಜಲಿಯ 5 ಔಷಧಿ ಉತ್ಪನ್ನಗಳ ಉತ್ಪಾದನೆ ನಿಲ್ಲಿಸುವಂತೆ ಖಡಕ್ ಆದೇಶ ನೀಡಿದೆ. ಪತಂಜಲಿಯ 5 ಉತ್ಪನ್ನಗಳು ಜಾಹೀರಾತಿನಲ್ಲಿ ಹೇಳುವ ವಿಚಾರಕ್ಕೂ ಉತ್ಪನ್ನದಲ್ಲಿರುವ ಔಷಧಿ ಗುಣಗಳಿಗೆ ವ್ಯತ್ಯಾಸವಿದೆ. ಜನರನ್ನು ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕಟಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಕುರಿತು ಆರ್ಯುವೇದ ಹಾಗೂ ಯೂನಾನಿ ಪ್ರಾಧಿಕಾರ ಇದೀಗ 5 ಉತ್ಪನ್ನಗಳನ್ನು ನಿಷೇಧಿಸುವಂತೆ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಬಾಬಾ ರಾಮ್‌ದೇವ್ ಫಾರ್ಮಸಿ ಪ್ರತಿಕ್ರಿಯೆ ನೀಡಿದ್ದು, ಇದು ಆಯುರ್ವೇದಾ ವಿರೋಧಿ ಮಾಫಿಯಾ ಕೆಲಸ ಎಂದು ಆರೋಪಿಸಿದ್ದಾರೆ.
ಪತಂಜಲಿಯ ಐದು ಔಷಧಿ ಉತ್ಪನ್ನವಾಗಿರುವ ಬಿಪಿ ಗ್ರಿಟ್, ಮಧುಗ್ರಿಟ್, ಥ್ಯೋರ್‌ಗ್ರಿಟ್, ಲಿಪಿಡೊಮ್, ಐಯ್‌ಗ್ರಿಟ್ ಗೋಲ್ಡ್ ಟ್ಯಾಬ್ಲೆಟ್ ನಿಷೇಧಿಸುವಂತೆ ಆದೇಶ ನೀಡಲಾಗಿದೆ. ಈ ಔಷಧಿಗಳು ಕ್ರಮವಾಗಿ ರಕ್ತದೊತ್ತಡ, ಮಧುಮೇಹ, ಗಾಯಿಟರ್, ಗ್ಲುಕೋಮಾ ಮತ್ತು ಅಧಿಕ ಕೊಲೆಸ್ಟ್ರಾಲ್ ನಿವಾರಿಸುತ್ತದೆ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ. ಜಾಹೀರಾತು ಹಾಗೂ ಉತ್ಪನ್ನದಲ್ಲಿ ವ್ಯತ್ಯಾಸವಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹೀಗಾಗಿ ಆರ್ಯುವೇದ ಹಾಗೂ ಯೂನಾನಿ ಪ್ರಾಧಿಕಾರ ಈ ಉತ್ಪನ್ನಗಳನ್ನು ಉತ್ಪಾದಿಸದಂತೆ ಆದೇಶಿಸಿದೆ.
'ನಾವು ಹೇಳಿದ್ರೆ ಹುಸಿ ವಿಜ್ಞಾನ, ನೀವು ಹೇಳಿದ್ರೆ ಸಂಶೋಧನೆ! ಪತಂಜಲಿ ಪಂಚ್
ಪತಂಜಲಿಯ ಔಷಧಿಯನ್ನು ಉತ್ಪಾದಿಸುವ ದಿವ್ಯಾ ಫಾರ್ಮಸಿಗೆ ಸೂಚನೆ ನೀಡಿದೆ. ಪತಂಜಲಿ ಈ ಉತ್ಪನ್ನಗಳ ಲೇಬಲ್, ಜಾಹೀರಾತು ಸೇರಿದಂತೆ ಎಲ್ಲವನ್ನೂ ಬದಲಾಯಿಸಿ ಮತ್ತೆ ಹೊಸದಾಗಿ ಔಷಧಿಯ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಬೇಕು. ಪರವಾನಗಿ ಸಿಕ್ಕ ಬಳಿಕವಷ್ಟೇ ಈ ಉತ್ಪನ್ನಗಳನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಾಧ್ಯ ಎಂದು ಆರ್ಯುವೇದ ಹಾಗೂ ಯೂನಾನಿ ಪ್ರಾಧಿಕಾರ ಹೇಳಿದೆ.
ಇದು ಆರ್ಯುವೇದಾ ವಿರೋಧಿ ಮಾಫಿಯಾ ಕೆಲಸವಾಗಿದೆ. ದೇಶದಲ್ಲಿ ಆಯುರ್ವೇದ ಔಷಧಿ ವಿರುದ್ಧ ವ್ಯವಸ್ಥಿತಿ ಪಿತೂರಿ ನಡೆಯುತ್ತಿದೆ. ಅಲೋಪಥಿ ಔಷಧಿಗಳ ಮಾರಾಟದಲ್ಲಿ ಕುಸಿತ ಕಾಣುತ್ತಿರುವ ಹಿನ್ನಲೆಯಲ್ಲಿ ಹಲವು ಎನ್‌ಜಿಒ ಸೇರಿದಂತೆ ಸಂಸ್ಥೆಗಳು, ಆಸ್ಪತ್ರೆಗಳು ಭಾರತೀಯ ಔಷಧಿ ಪದ್ದತಿಯನ್ನು ಟೀಕಿಸುತ್ತಾ,ವಿರೋಧಿಸುತ್ತಾ ಬಂದಿದೆ. ದೂರು ನೀಡಿ ಆಯುರ್ವೇದಾ ಔಷಧಿಯನ್ನು ನಿರ್ನಾಮ ಮಾಡುವ ಯತ್ನ ಮಾಡುತ್ತಿದ್ದಾರೆ ಎಂದು ದಿವ್ಯಾ ಫಾರ್ಮಸಿ ಹೇಳಿದೆ.
ಶೀಘ್ರದಲ್ಲೇ Patanjali ಬ್ರ್ಯಾಂಡ್‌ಗಳ 4 ಐಪಿಒ ಪ್ರಾರಂಭಿಸಲಿರುವ ಬಾಬಾ ರಾಮ್‌ದೇವ್
ಪತಂಜಲಿಯ ಎಲ್ಲಾ ಔಷಧಿಗಳನ್ನು ಭಾರತೀಯ ಆಯುರ್ವೇದಾ ಪದ್ದತಿಯಲ್ಲಿ ಉತ್ಪಾದಿಸಲಾಗಿದೆ. 500ಕ್ಕೂ ಹೆಚ್ಚು ಆಯುರ್ವೇದಾ ತಜ್ಞರು, ಸಂಶೋಧಕರು ಸೇರಿ ಈ ಔಷಧಿಗಳನ್ನು ಉತ್ಪಾದಿಸಿದ್ದಾರೆ. ಆಯುರ್ವೇದಾ ದರ್ಜೆಯ ಎಲ್ಲಾ ಮಾನದಂಡಗಳನ್ನ ಪಾಲಿಸಲಾಗಿದೆ . ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿ ಹರಿದಾಡುತ್ತಿದೆ. ಆದರೆ ನಮಗೆ ಅಧಿಕೃತವಾಗಿ ಯಾವುದೇ ಆದೇಶದ ಪ್ರತಿ ಸಿಕ್ಕಿಲ್ಲ ಎಂದು ದಿವ್ಯಾ ಫಾರ್ಮಸಿ ಹೇಳಿದೆ. ಇದೀಗ ಪತಂಜಲಿ ಹಾಗೂ ಯುನಾನಿ ಪ್ರಾಧಿಕಾರ ನಡುವೆ ಹಗಜಗ್ಗಾಟ ಆರಂಭಗೊಂಡಿದೆ. ಇದು ತಾರಕಕ್ಕೇರುವ ಎಲ್ಲಾ ಸಾಧ್ಯತೆ ಗೋಚರಿಸುತ್ತಿದೆ.