Uttarakhand Elections: ರಾಜೀನಾಮೆ ಬಳಿಕ ಸಚಿವರ ಮೊಬೈಲ್ ಸ್ವಿಚ್‌ ಆಫ್, ಬಿಜೆಪಿಗೆ ಹೊಸ ಆತಂಕ!

By Suvarna NewsFirst Published Dec 25, 2021, 9:24 PM IST
Highlights

* ಹರಕ್ ಸಿಂಗ್ ರಾವತ್ ರಾಜೀನಾಮೆಯಿಂದ ಬಿಜೆಪಿಯಲ್ಲಿ ಆತಂಕ

* ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಭೂಗತರಾದ ಹರಕ್ ಸಿಂಗ್ 

* ಮುಂದೇನು? ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಹೊಸ ಟೆನ್ಶನ್

ನವದೆಹಲಿ(ಡಿ.25): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಡೆಹ್ರಾಡೂನ್‌ಗೆ ಭೇಟಿ ನೀಡುವ ಎರಡು ದಿನಗಳ ಮೊದಲು, ಹರಕ್ ಸಿಂಗ್ ರಾವತ್ ರಾಜೀನಾಮೆ ಸುದ್ದಿ ಡೆಹ್ರಾಡೂನ್‌ನಿಂದ ದೆಹಲಿಯವರೆಗೆ ಬಿಜೆಪಿಯನ್ನು ಅಲ್ಲೋಲ ಕಲ್ಲೋಲಗೊಳಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಹರಕ್ ಸಿಂಗ್ ರಾವತ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎಂದು ತಡರಾತ್ರಿ ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ.

ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಭೂಗತರಾದ ಹರಕ್ ಸಿಂಗ್ 

ಹರಕ್ ಸಿಂಗ್ ಬೆನ್ನಟ್ಟಿದ ಮಾಧ್ಯಮ ಮಂದಿ ಯಮುನಾ ಕಾಲೋನಿಯಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಮೊಕ್ಕಾಂ ಹೂಡಿದ್ದಾರೆ. ಆದರೆ ಹರಕ್ ಸಿಂಗ್ ಅಲ್ಲಿಗೆ ತಲುಪಲಿಲ್ಲ. ಡಿಫೆನ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿಯೂ ಅವರು ಪತ್ತೆಯಾಗಿಲ್ಲ. ಮಾಧ್ಯಮದವರು ಎಲ್ಲೆಲ್ಲಿ ಅವರು ಇರುತ್ತಾರೆ ಎಂದು ನಿರೀಕ್ಷಿಸಿದರೂ ಅಲ್ಲಿ ನಿರಾಸೆ ಮಾತ್ರ ಕಾಣುತ್ತಿತ್ತು. ಸಚಿವ ಸಂಪುಟ ಸಭೆಯಿಂದ ಹೊರಬಂದ ಬಳಿಕ ಹರಕ್ ಸಿಂಗ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. 

ಹರಕ್ ಸಿಂಗ್ ರಾಜೀನಾಮೆ ನೀಡಿದ್ದಾರೆ ಎಂದು ಅವರ ನಿಕಟವರ್ತಿ ವಿಜಯ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಕ್ಯಾಬಿನೆಟ್ ಬ್ರೀಫಿಂಗ್‌ಗೆ ಆಗಮಿಸಿದ ಸರ್ಕಾರದ ವಕ್ತಾರ ಸುಬೋಧ್ ಉನಿಯಾಲ್ ಅವರು ಹರಕ್ ಸಿಂಗ್ ಅಸಮಾಧಾನಗೊಂಡಿದ್ದಾರೆಂಬುವುದನ್ನು ದೃಢಪಡಿಸಿದ್ದಾರೆ, ಆದರೆ ಅವರು ರಾಜೀನಾಮೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿಲ್ಲ. ಈ ವಿಷಯದ ಬಗ್ಗೆ ಸರ್ಕಾರದ ಆರೋಗ್ಯ ಸಚಿವ ಧನ್ ಸಿಂಗ್ ರಾವತ್, ಅವರಿಗೆ ಗೌರವದಲ್ಲಿ ಕೊರತೆ ಇದೆ ಎಂದು ಅನಿಸುತ್ತಿದ್ದರೆ, ನಾವು ಅವರನ್ನು ಇನ್ನಷ್ಟು ಗೌರವಿಸುತ್ತೇವೆ ಎಂದು ಹೇಳಿದರು. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ಇದನ್ನು ಕುಟುಂಬದ ವಿಷಯವೆಂದು ತಳ್ಳಿಹಾಕಿದರು.

ಕೋಟ್‌ದ್ವಾರದ ವೈದ್ಯಕೀಯ ಕಾಲೇಜಿನ ವಿಚಾರದಲ್ಲಿ ಗಲಾಟೆ

ತಾಂತ್ರಿಕವಾಗಿ, ಈ ಇಡೀ ಅಸಮಾಧಾನ ಸ್ಫೋಟಗೊಂಡಿದ್ದು, ಕೋಟ್‌ದ್ವಾರದ ವೈದ್ಯಕೀಯ ಕಾಲೇಜು ವಿಚಾರವಾಗಿ. ಪೌರಿ ಜಿಲ್ಲೆಯ ಕೋಟ್‌ದ್ವಾರದಲ್ಲಿ ವೈದ್ಯಕೀಯ ಕಾಲೇಜು ಮಾಡಲು ಸಾಧ್ಯವಿಲ್ಲ ಏಕೆಂದರೆ ಈಗಾಗಲೇ ಇಲ್ಲಿ ವೈದ್ಯಕೀಯ ಕಾಲೇಜು ಇದೆ ಮತ್ತು ಜಿಲ್ಲೆಯಲ್ಲಿ ಇಂತಹುದೇ ಮತ್ತೊಂದು ಕಾಲೇಜು ಇರುವಂತಿಲ್ಲ. ನಿಯಮಗಳಿಗೆ ತಿದ್ದುಪಡಿ ತಂದಾಗ ಅಥವಾ ಕೋಟ್‌ದ್ವಾರವನ್ನು ಹೊಸ ಜಿಲ್ಲೆಯಾಗಿ ಘೋಷಿಸಿದಾಗಷ್ಟೇ ಭಾರತ ಸರ್ಕಾರದ ನಿಯಮಗಳ ಪ್ರಕಾರ ಮಾತ್ರ ಅಲ್ಲಿ ಕಾಲೇಜು ನಿರ್ಮಿಸಬಹುದು.

ಇದಲ್ಲದೇ ರಾಜ್ಯ ಸರ್ಕಾರ ತನ್ನ ಬಜೆಟ್‌ನಿಂದ ಕಾಲೇಜು ನಿರ್ಮಿಸಬೇಕು ಎಂಬುದು ಇನ್ನೊಂದು ಮಾರ್ಗ. ಆದರೆ ಇದಕ್ಕಾಗಿ 500 ಕೋಟಿ ರೂಪಾಯಿ ಬೇಕಾಗಲಿದ್ದು, ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಸರ್ಕಾರಕ್ಕೆ 500 ಕೋಟಿ ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ. ಅದೂ ಈಗಾಗಲೇ ಅಲ್ಲಿ ಬೇರೊಂದು ಕಾಲೇಜು ಇರುವಾಗ ಇದು ಅಸಾಧ್ಯ.

ಅಲ್ಲದೆ, ಬಿಜೆಪಿ ಸಂಘಟನೆ ಮತ್ತು ಸರ್ಕಾರ ಎರಡೂ ಹಾನಿ ನಿಯಂತ್ರಣಕ್ಕೆ ತೊಡಗಿವೆ. ಈಗ ರಾಜಕೀಯದಾಟ ಯಾರ ಕಡೆ ವಾಲುತ್ತದೋ, ಇದೇ ಭವಿಷ್ಯದಲ್ಲೂ ಪರಿಣಾಮ ಬೀರುತ್ತದೆ. 

click me!