
ನವದೆಹಲಿ(ಮಾ.27): ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ಮಾ.31ರಿಂದ ಏ.7ರವರೆಗೆ ದೇಶಾದ್ಯಂತ ಮೂರು ಹಂತಗಳಲ್ಲಿ ಹೋರಾಟ ನಡೆಸಲು ನಿರ್ಧರಿಸಿದೆ. ಈ ಹೋರಾಟದ ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜನರಿಗೆ ಮೋಸ ಮಾಡಿದೆ ಎಂದು ಸಾರಲು ಮುಂದಾಗಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಪಕ್ಷದ ವಕ್ತಾರ ಹಾಗೂ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಬಿಜೆಪಿ ಸರ್ಕಾರದಿಂದಾಗಿ ದೇಶ ಅನುಭವಿಸುತ್ತಿರುವ ಬೆಲೆಯೇರಿಕೆ ಸಮಸ್ಯೆ ವಿರುದ್ಧ ‘ಮೆಹಂಗಾಯಿ ಮುಕ್ತ ಭಾರತ್ ಅಭಿಯಾನ’ ನಡೆಸಲು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳದ ಮೂಲಕ ಕಳೆದ 8 ವರ್ಷಗಳಲ್ಲಿ ಕೇಂದ್ರ ಸರ್ಕಾರ 26 ಲಕ್ಷ ಕೋಟಿ ರು. ಸಂಗ್ರಹಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮೊದಲ ಹಂತ:
ಮಾ.31ರಂದು ಮೊದಲ ಹಂತದಲ್ಲಿ ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನಸಾಮಾನ್ಯರು ತಮ್ಮ ತಮ್ಮ ಮನೆಗಳ ಹೊರಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಹಾರ ಹಾಕುವ ಮೂಲಕ ಪ್ರತಿಭಟಿಸಲಿದ್ದಾರೆ. ಜೊತೆಗೆ ಡ್ರಮ್ ಬಡಿದು, ಗಂಟೆ ಬಾರಿಸಿ ಕಿವುಡು ಬಿಜೆಪಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಿದ್ದಾರೆ ಎಂದು ಸುರ್ಜೇವಾಲಾ ಹೇಳಿದರು.
ಎರಡನೇ ಹಂತ:
ಏ.2ರಿಂದ 4ರವರೆಗೆ ಕಾಂಗ್ರೆಸ್ ನಾಯಕರು ಜಿಲ್ಲಾ ಮಟ್ಟದಲ್ಲಿ ಎನ್‌ಜಿಒಗಳು, ಧಾರ್ಮಿಕ ಮುಖಂಡರು, ಸಾಮಾಜಿಕ ಸಂಸ್ಥೆಗಳು ಹಾಗೂ ನಾಗರಿಕ ಸಂಸ್ಥೆಗಳ ಜೊತೆ ಸೇರಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಹಾಗೂ ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಆ ಮೂರು ದಿನ ದೇಶಾದ್ಯಂತ ಜಿಲ್ಲಾ ಮಟ್ಟದಲ್ಲಿ ಧರಣಿ ಹಾಗೂ ಪಾದಯಾತ್ರೆಗಳು ನಡೆಯಲಿವೆ.
ಮೂರನೇ ಹಂತ:
ಏ.7ರಂದು ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿ ಪಕ್ಷದ ವತಿಯಿಂದ ಸಾಮಾಜಿಕ, ಧಾರ್ಮಿಕ ಸಂಸ್ಥೆಗಳು, ಎನ್‌ಜಿಒಗಳು ಹಾಗೂ ಜನರ ಜೊತೆ ಸೇರಿ ಕಾಂಗ್ರೆಸ್ ನಾಯಕರು ಧರಣಿ ನಡೆಸಲಿದ್ದಾರೆ. ಹೋರಾಟದುದ್ದಕ್ಕೂ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜನರ ವೋಟಿಗಾಗಿ 137 ದಿನಗಳ ಕಾಲ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಬೆಲೆ ಏರಿಸದೆ ಚುನಾವಣೆ ಮುಗಿದಾಕ್ಷಣ ಏರಿಸುವ ಮೂಲಕ ಮೋಸ ಮಾಡುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ಸುರ್ಜೇವಲಾ ತಿಳಿಸಿದರು.
3 ಹಂತದ ಹೋರಾಟ
1. ಮಾ.31: ಮನೆಗಳಲ್ಲಿ ಎಲ್ಪಿಜಿ ಸಿಲಿಂಡರ್‌ಗೆ ಹಾರ ಹಾಕಿ, ಡ್ರಮ್ ಬಡಿದು, ಗಂಟೆ ಬಾರಿಸಿ ಪ್ರತಿಭಟನೆ
2. ಏ.2ರಿಂದ 4: ದೇಶಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜನರು, ಸಂಘ ಸಂಸ್ಥೆಗಳ ಜತೆ ಸೇರಿ ಪ್ರತಿಭಟನೆ
3. ಏ.7: ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿ ಸಂಘ ಸಂಸ್ಥೆಗಳ ಜೊತೆ ಸೇರಿ ಕಾಂಗ್ರೆಸ್ ನಾಯಕರಿಂದ ಧರಣಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ