Covid Crisis: ವಿದೇಶಕ್ಕೆ ಹೋಗುವವರಿಗೆ ಶೀಘ್ರ ಬೂಸ್ಟರ್‌ ಡೋಸ್‌?

By Kannadaprabha NewsFirst Published Mar 27, 2022, 3:30 AM IST
Highlights

ಶಿಕ್ಷಣ, ಉದ್ಯೋಗ, ಕ್ರೀಡೆ ಅಥವಾ ವ್ಯವಹಾರ ಉದ್ದೇಶದಿಂದ ವಿದೇಶಕ್ಕೆ ತೆರಳುವವರಿಗೆ ಆದ್ಯತೆಯ ಮೇರೆಗೆ ಮುಂಜಾಗ್ರತಾ ಡೋಸ್‌ ಕೊರೋನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಶೀಘ್ರವೇ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನವದೆಹಲಿ (ಮಾ.27): ಶಿಕ್ಷಣ, ಉದ್ಯೋಗ, ಕ್ರೀಡೆ ಅಥವಾ ವ್ಯವಹಾರ ಉದ್ದೇಶದಿಂದ ವಿದೇಶಕ್ಕೆ ತೆರಳುವವರಿಗೆ ಆದ್ಯತೆಯ ಮೇರೆಗೆ ಮುಂಜಾಗ್ರತಾ ಡೋಸ್‌ (Booster Dose) ಕೊರೋನಾ ಲಸಿಕೆ (Corona Vaccine) ನೀಡಲು ಕೇಂದ್ರ ಸರ್ಕಾರ ಶೀಘ್ರವೇ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

ಹಾಗೆಯೇ ಬೂಸ್ಟರ್‌ ಡೋಸ್‌ ಕಡ್ಡಾಯ ಇರುವ ವಿದೇಶಗಳಿಗೆ (Abroad) ಹೋಗುವ ಪ್ರಯಾಣಿಕರಿಗೆ ಉಚಿತವಾಗಿ ಲಸಿಕೆ ನೀಡಬೇಕೇ ಅಥವಾ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಹಣ ಪಾವತಿಸಿ ನೀಡಬೇಕೇ ಎಂಬ ಬಗ್ಗೆ ಸಹ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ನಿಗದಿತ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಭಾನುವಾರದಿಂದ ಪುನಾರಂಭಗೊಳ್ಳಲಿದೆ. ಹಲವು ದೇಶಗಳು ಮೂರನೇ ಅಥವಾ ಬೂಸ್ಟರ್‌ ಡೋಸ್‌ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ವಿದೇಶಕ್ಕೆ ತೆರಳುವವರನ್ನು ಆದ್ಯತೆಯಾಗಿ ಪರಿಗಣಿಸಿ ಲಸಿಕೆ ನೀಡಲು ಅನುಮೋದನೆ ನೀಡಬಹುದು. 

ಆದರೆ ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಯಾವುದೇ ಅಧಿಕೃತ ನಿರ್ದೇಶನ ಹೊರಬಿದ್ದಿಲ್ಲ ಎಂದು ಮೂಲಗಳು ತಿಳಿಸಿವೆ.ಸದ್ಯ ಭಾರತದಲ್ಲಿ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಕೋವಿಡ್‌-19 (Covid19) ಮುನ್ನೆಚ್ಚರಿಕಾ ಡೋಸ್‌ ನೀಡಲಾಗುತ್ತಿದೆ. ಎರಡನೇ ಡೋಸ್‌ ಲಸಿಕೆ ಪಡೆದ ದಿನದಿಂದ ಒಂಭತ್ತು ತಿಂಗಳು ಪೂರ್ಣಗೊಂಡ ನಂತರ ಬೂಸ್ಟರ್‌ ಡೋಸ್‌ ಪಡೆಯಬಹುದಾಗಿದೆ.

Covid Crisis: 18+ ಆದ ಎಲ್ಲರಿಗೂ ಬೂಸ್ಟರ್‌ ಡೋಸ್‌..?

ಒಮಿಕ್ರೋನ್‌ ವಿರುದ್ಧ ಬೂಸ್ಟರ್‌ ಡೋಸ್‌ ಪರಿಣಾಮಕಾರಿ: 3ನೇ ಡೋಸ್‌ ಕೋವಿಡ್‌-19 ಲಸಿಕೆ (Booster Dose) ಇಡೀ ವಿಶ್ವವನ್ನು ಬಾಧಿಸುತ್ತಿರುವ ಒಮಿಕ್ರೋನ್‌ (Omicron) ರೂಪಾಂತರಿ ವೈರಸ್‌ ವಿರುದ್ಧ ಪರಿಣಾಮಕಾರಿ ಎಂದು ಸಮೀಕ್ಷೆಯೊಂದು ಹೇಳಿದೆ. ಲ್ಯಾನ್ಸೆಟ್‌ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು, ಬೂಸ್ಟರ್‌ ಡೋಸ್‌ ದೇಹದಲ್ಲಿ ಪ್ರತಿಕಾಯ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಒಮಿಕ್ರೋನ್‌ ರೂಪಾಂತರಿ ನಿಗ್ರಹ ಸಾಧ್ಯ ಎಂದು ತಿಳಿಸಿದೆ.

ಕೇವಲ ಎರಡು ಡೋಸ್‌ ಆಸ್ಟ್ರಾಜೆನಿಕಾ (AstraZeneca) ಅಥವಾ ಫೈಝರ್‌ ಲಸಿಕೆ (Pfizer Vaccine) ಪಡೆದವರಲ್ಲಿ ಒಮಿಕ್ರೋನ್‌ ಸೋಂಕಿನ ವಿರುದ್ಧ ಹೋರಾಡುವಷ್ಟುಪ್ರತಿಕಾಯಗಳು ಉತ್ಪತ್ತಿಯಾಗಿರಲಿಲ್ಲ. ಅಲ್ಲದೆ 2ನೇ ಡೋಸ್‌ ಪಡೆದ ಮೊದಲ 3 ತಿಂಗಳಲ್ಲೇ ಪ್ರತಿಕಾಯ ಪ್ರಮಾಣ ಗಣನೀಯವಾಗಿ ತಗ್ಗಿತ್ತು. ಆದರೆ ಬೂಸ್ಟರ್‌ ಡೋಸ್‌ ಪಡೆದ ನಂತರದಲ್ಲಿ ಪ್ರತಿಕಾಯ ಶಕ್ತಿ ಗಣನೀಯವಾಗಿ ಹೆಚ್ಚಿದೆ. ಇಂಥವರು ಒಮಿಕ್ರೋನ್‌ ವೈರಸ್ಸನ್ನು ನಿಗ್ರಹಿಸುವ ಶಕ್ತಿ ಹೊಂದಿದ್ದಾರೆ ಎಂಬುದು ಸಂಶೋಧನೆಯಲ್ಲಿ ದೃಢಪಟ್ಟಿದೆ ಎಂದು ತಿಳಿಸಿದೆ.

ಅಲ್ಲದೆ ಕೇವಲ ಎರಡೂ ಡೋಸ್‌ ಲಸಿಕೆ ಪಡೆದ ಮತ್ತು ಈ ಹಿಂದೆ ಕೊರೋನಾ ಲಕ್ಷಣಗಳನ್ನು ಹೊಂದಿದ್ದವರಲ್ಲಿಯೂ ಬೂಸ್ಟರ್‌ ಡೋಸ್‌ ಪಡೆದವರಲ್ಲಿ ಇದ್ದಷ್ಟೇ ಪ್ರತಿಕಾಯ ಇರುವುದು ಕಂಡುಬಂದಿದೆ. ಪ್ರತಿಕಾಯಗಳ ಪ್ರಮಾಣ ಲಸಿಕೆಯ ಪರಿಣಾಮಕಾರಿತ್ವವನ್ನು ಸೂಚಿಸುವುದಿಲ್ಲ. ಆದಾಗ್ಯೂ ಗಂಭೀರ ಪ್ರಮಾಣದ ಸೋಂಕಿನಿಂದ ರಕ್ಷಣೆ ನೀಡುತ್ತದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. 364 ಜನರಿಂದ 620 ರಕ್ತದ ಮಾದರಿಗಳನ್ನು ಪಡೆದು ಈ ಅಧ್ಯಯನ ನಡೆಸಲಾಗಿದೆ.

ಮಾರ್ಚ್ 16 ರಿಂದ 12-14 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ, 60+ ಆದವರಿಗೆ ಬೂಸ್ಟರ್!

ಯಾವ ಲಸಿಕೆ?: ಮೊದಲಿನ 2 ಡೋಸ್‌ ಲಸಿಕೆ ಯಾವ ಕಂಪನಿಯದ್ದಾಗಿರುತ್ತೋ, ಅದೇ ಕಂಪನಿಯ ಲಸಿಕೆಯನ್ನು 3ನೇ ಡೋಸ್‌ ಆಗಿ ಪಡೆಯಬೇಕು. ಉದಾಹರಣೆಗೆ: ಕೋವ್ಯಾಕ್ಸಿನ್‌ 2 ಡೋಸ್‌ ಪಡೆದವರು 3ನೇ ಡೋಸ್‌ ಆಗಿ ಕೋವ್ಯಾಕ್ಸಿನ್‌ ಅನ್ನೇ ಪಡೆಯಬೇಕು. ‘ಲಸಿಕೆ ಮಿಶ್ರಣ’ (ಬೇರೆ ಕಂಪನಿಯ ಲಸಿಕೆ) ಮಾಡುವಂತಿಲ್ಲ.

click me!