ಇ-ಕಾಮರ್ಸ್‌ ಲೋಪ ಪತ್ತೆಗೆ ಇಂದು ಸಭೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

Kannadaprabha News   | Kannada Prabha
Published : May 28, 2025, 06:53 AM IST
Kannada actress Ranya rao gold smuggling case Union minister pralhad joshi reacts

ಸಾರಾಂಶ

ಇ-ಕಾಮರ್ಸ್‌ ವೇದಿಕೆಗಳಲ್ಲಿ ಗ್ರಾಹಕರ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತಹ ಪ್ರಮುಖ 13 ಕರಾಳ ಮಾದರಿ (ಡಾರ್ಕ್‌ ಪ್ಯಾಟರ್ನ್‌)ಗಳನ್ನು ಗುರುತಿಸಿದ್ದು, ಈ ಕುರಿತು ಪರಿಹಾರ ಕ್ರಮಕ್ಕಾಗಿ ಚರ್ಚಿಸಲು ದೆಹಲಿಯಲ್ಲಿ ಬುಧವಾರ ಉನ್ನತ ಮಟ್ಟದ ಸಭೆ ಕರೆಯಲಾಗಿದೆ ಎಂದು ಪ್ರಲ್ಹಾದ್‌ ಜೋಶಿ ತಿಳಿಸಿದರು.

ನವದೆಹಲಿ (ಮೇ.28): ಇ-ಕಾಮರ್ಸ್‌ ವೇದಿಕೆಗಳಲ್ಲಿ ಗ್ರಾಹಕರ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತಹ ಪ್ರಮುಖ 13 ಕರಾಳ ಮಾದರಿ (ಡಾರ್ಕ್‌ ಪ್ಯಾಟರ್ನ್‌)ಗಳನ್ನು ಗುರುತಿಸಿದ್ದು, ಈ ಕುರಿತು ಪರಿಹಾರ ಕ್ರಮಕ್ಕಾಗಿ ಚರ್ಚಿಸಲು ದೆಹಲಿಯಲ್ಲಿ ಬುಧವಾರ ಉನ್ನತ ಮಟ್ಟದ ಸಭೆ ಕರೆಯಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಇ-ಕಾಮರ್ಸ್‌ ವೇದಿಕೆಗಳಲ್ಲಿನ ವ್ಯಾಪಾರ-ವಹಿವಾಟುಗಳ ಬಗ್ಗೆ ವಿವಿಧ ರೀತಿಯ ದೂರುಗಳು ಬರುತ್ತಿವೆ. ಕೆಲವೊಂದು ಕರಾಳ ಮಾದರಿ (ಡಾರ್ಕ್‌ ಪ್ಯಾಟರ್ನ್‌)ಗಳ ಬಗ್ಗೆ ಗ್ರಾಹಕರಲ್ಲಿ ತೀವ್ರ ಅಸಮಾಧಾನ ಮೂಡಿದೆ. ಹಾಗಾಗಿ ಗ್ರಾಹಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಂಶಗಳ ಕುರಿತು ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆಹಾರ, ಪ್ರಯಾಣ, ಸೌಂದರ್ಯ ವರ್ಧಕಗಳು, ಔಷಧಾಲಯ, ಚಿಲ್ಲರೆ ವ್ಯಾಪಾರ, ಬಟ್ಟೆ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳಲ್ಲಿನ ಪ್ರಮುಖ ಇ-ಕಾಮರ್ಸ್ ವೇದಿಕೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಮೆಜಾನ್, ಫ್ಲಿಪ್‌ಕಾರ್ಟ್, 1mg.com, ಆಪಲ್, ಬಿಗ್‌ಬಾಸ್ಕೆಟ್, ಮಿಶೋ, ಮೆಟಾ, ಮೇಕ್‌ ಮೈಟ್ರಿಪ್, ಪೇಟಿಎಂ, ಓಲಾ, ರಿಲಯನ್ಸ್ ರಿಟೇಲ್ ಲಿಮಿಟೆಡ್, ಸ್ವಿಗ್ಗಿ, ಜೊಮಾಟೊ, ಯಾತ್ರಾ, ಉಬರ್, ಟಾಟಾ, ಈಸ್‌ಮೈಟ್ರಿಪ್, ಕ್ಲಿಯರ್ ಟ್ರಿಪ್, ಇಂಡಿಯಾ ಮಾರ್ಟ್, ಇಂಡಿಗೊ ಏರ್‌ಲೈನ್ಸ್, ಕ್ಸಿಗೊ, ಜಸ್ಟೀಸ್‌ ಡಿಯಲ್, ಮೆಡಿಕಾ ಬಜಾರ್, ನೆಟ್‌ಮೆಡ್ಸ್, ಒಎನ್‌ಡಿಸಿ, ಥಾಮಸ್ ಕುಕ್ ಮತ್ತು ವಾಟ್ಸಾಪ್ ಗ್ರಾಹಕರ ಹಕ್ಕುಗಳ ರಕ್ಷಣೆ, ವ್ಯಾಪಾರದಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹ ಮಾರುಕಟ್ಟೆ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಪ್ರಮುಖ ಕೈಗಾರಿಕಾ ಸಂಸ್ಥೆಗಳು, ಸ್ವಯಂ ಸೇವಾ ಗ್ರಾಹಕ ಸಂಸ್ಥೆಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಸಹ ಈ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಲಿವೆ. ಪಾರದರ್ಶಕ ವಹಿವಾಟು ಹಾಗೂ ಕರಾಳ ಮಾದರಿಗಳ ಬಗ್ಗೆ ಗ್ರಾಹಕರಲ್ಲಿರುವ ಕಳವಳ ನಿವಾರಣೆ, ಸಂಶೋಧನೆ, ನಿಯಂತ್ರಣ ಮತ್ತು ಪರಿಹಾರ ಕ್ರಮ ರೂಪಿಸುವ ನಿಟ್ಟಿನಲ್ಲಿ ಅಮೂಲ್ಯ ಸಲಹೆ, ಮಾರ್ಗದರ್ಶನಗಳನ್ನು ಅವು ನೀಡಲಿವೆ ಎಂದು ತಿಳಿಸಿದರು. ಇ-ಕಾಮರ್ಸ್‌ ಸಂಸ್ಥೆಗಳಲ್ಲಿ ಗ್ರಾಹಕರ ದಾರಿ ತಪ್ಪಿಸುವ ಹಾಗೂ ಅನಪೇಕ್ಷಿತ ಆಯ್ಕೆಗಳನ್ನು ಮಾಡುವಂತೆ ಸೆಳೆಯುವ ʼಡಾರ್ಕ್ ಪ್ಯಾಟರ್ನ್‌ʼಗಳ ಅನ್ಯಾಯದ ವ್ಯಾಪಾರ ಪದ್ಧತಿಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕೇಂದ್ರ ಗ್ರಾಹಕ ಇಲಾಖೆ ತ್ವರಿತ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಡಾರ್ಕ್ ಪ್ಯಾಟರ್ನ್‌ಗಳನ್ನು ಎದುರಿಸಲು ಇಲಾಖೆ ಅನೇಕ ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವ ಜೋಶಿ ತಿಳಿಸಿದರು.

ಕೇಂದ್ರ ಗ್ರಾಹಕ ಇಲಾಖೆ 2023ರ ನವೆಂಬರ್ 30ರಂದು ಡಾರ್ಕ್ ಪ್ಯಾಟರ್ನ್‌ಗಳ ತಡೆಗಟ್ಟುವಿಕೆ ಕುರಿತು ಸಮಗ್ರ ಮಾರ್ಗಸೂಚಿ ಹೊರಡಿಸಿದೆ. ಇ-ಕಾಮರ್ಸ್‌ ವೇದಿಕೆಗಳಲ್ಲಿ ಪ್ರಮುಖವಾಗಿ 13 ವಿಧದ ಡಾರ್ಕ್‌ ಪ್ಯಾಟರ್ನ್‌ಗಳನ್ನು ಗುರುತಿಸಿದ್ದು, ಫಾಲ್ಸ್ ಅರ್ಜೆನ್ಸಿ, ಬಾಸ್ಕೆಟ್ ಸ್ನೀಕಿಂಗ್, ಕನ್ಫರ್ಮ್ ಶೇಮಿಂಗ್, ಫೋರ್ಸ್ಡ್ ಆಕ್ಷನ್, ಸಬ್‌ಸ್ಕ್ರಿಪ್ಷನ್ ಟ್ರಾಪ್, ಇಂಟರ್‌ಫೇಸ್ ಹಸ್ತಕ್ಷೇಪ, ಬೈಟ್ ಮತ್ತು ಸ್ವಿಚ್, ಡ್ರಿಪ್ ಪ್ರೈಸಿಂಗ್, ಡಿಸ್ಗೈಸ್ಡ್ ಜಾಹೀರಾತು, ನಗ್ಗಿಂಗ್, ಟ್ರಿಕ್ ಪ್ರಶ್ನೆ, ಸಾಸ್ ಬಿಲ್ಲಿಂಗ್ ಮತ್ತು ರೋಗ್ ಮಾಲ್‌ವೇರ್‌ಗಳು ಒಳಗೊಂಡಿವೆ. ಈ ಎಲ್ಲವೂಗಳ ಬಗ್ಗೆಯೂ ಉನ್ನತ ಮಟ್ಟದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ, ಮತ್ತಷ್ಟು ಕಟ್ಟುನಿಟ್ಟಿನ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್