NRIಗಳಿಗೆ ಅಂಚೆ ಮತಕ್ಕೆ ವಿದೇಶ ಸಚಿವಾಲಯ ಒಪ್ಪಿಗೆ!

By Suvarna NewsFirst Published Jan 6, 2021, 9:51 AM IST
Highlights

ಎನ್ನಾರೈಗಳಿಗೆ ಅಂಚೆ ಮತಕ್ಕೆ ವಿದೇಶ ಸಚಿವಾಲಯ ಒಪ್ಪಿಗೆ| ಸರ್ಕಾರ ನಿಯಮ ತಿದ್ದುಪಡಿ ಮಾಡಿದರೆ ಈ ವರ್ಷವೇ ಜಾರಿ?

ನವದೆಹಲಿ(ಜ.06): ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಭಾರತದಲ್ಲಿ ನಡೆಯುವ ಚುನಾವಣೆಗಳಲ್ಲಿ ತಾವಿರುವಲ್ಲಿಂದಲೇ ಅಂಚೆಯ ಮೂಲಕ ಮತದಾನ ಮಾಡುವುದಕ್ಕೆ ವಿದೇಶಾಂಗ ಸಚಿವಾಲಯ ಒಪ್ಪಿಗೆ ನೀಡಿದೆ.

ಈ ಕುರಿತು ಚುನಾವಣಾ ಆಯೋಗ ನವೆಂಬರ್‌ನಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕಾನೂನು ಸಚಿವಾಲಯವು ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಿತ್ತು. ವಿದೇಶಾಂಗ ಸಚಿವಾಲಯವು ಈ ಪ್ರಸ್ತಾವನೆಗೆ ತನ್ನದೇನೂ ಅಭ್ಯಂತರವಿಲ್ಲ. ಆದರೆ, ಚುನಾವಣಾ ಆಯೋಗವು ಹೊಸ ವ್ಯವಸ್ಥೆ ಜಾರಿಗೊಳಿಸುವ ಮುನ್ನ ಸಂಬಂಧಪಟ್ಟಎಲ್ಲರ ಒಪ್ಪಿಗೆ ಪಡೆಯಲಿ ಎಂದು ಸಲಹೆ ನೀಡಿ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಈಗಿರುವ ನಿಯಮಗಳ ಪ್ರಕಾರ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಂಡಿರುವ ಎನ್‌ಆರ್‌ಐಗಳು ಭಾರತಕ್ಕೆ ಖುದ್ದಾಗಿ ಬಂದು ಮತದಾನ ಮಾಡಬೇಕು. ಆದರೆ, ಪ್ರತಿ ಚುನಾವಣೆಗೂ ಮತದಾನಕ್ಕೆಂದೇ ಬಂದು-ಹೋಗುವುದು ಕಷ್ಟಎಂಬ ಕಾರಣಕ್ಕೆ ಅಂಚೆ ಮತದಾನದ ವ್ಯವಸ್ಥೆಯನ್ನು ತಮಗೂ ವಿಸ್ತರಿಸುವಂತೆ ಎನ್‌ಆರ್‌ಐಗಳು ಮನವಿ ಮಾಡುತ್ತಿದ್ದರು. ಈ ವ್ಯವಸ್ಥೆ ಜಾರಿಗೊಳಿಸಲು 1961ರ ಚನಾವಣಾ ನಿಯಮಗಳಿಗೆ ತಿದ್ದುಪಡಿ ತರಬೇಕಾಗುತ್ತದೆ. ಸರ್ಕಾರ ಅಗತ್ಯ ತಿದ್ದುಪಡಿ ತಂದರೆ ತಾನು ಏಪ್ರಿಲ್‌-ಮೇ ವೇಳೆ ನಡೆಯುವ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ಚುನಾವಣೆಯಿಂದಲೇ ಎನ್‌ಆರ್‌ಐಗಳಿಗೆ ಅಂಚೆ ಮತದಾನದ ವ್ಯವಸ್ಥೆ ಮಾಡಲು ಸಿದ್ಧ ಎಂದು ಚುನಾವಣಾ ಆಯೋಗ ಹೇಳಿತ್ತು.

ಸದ್ಯ ಜಾರಿಯಲ್ಲಿರುವ ಅಂಚೆ ಮತದಾನದ ವ್ಯವಸ್ಥೆಯನ್ನು ಎಲೆಕ್ಟ್ರಾನಿಕಲಿ ಟ್ರಾನ್ಸ್‌ಮಿಟೆಡ್‌ ಪೋಸ್ಟಲ್‌ ಬ್ಯಾಲಟ್‌ ಸಿಸ್ಟಂ (ಇಟಿಪಿಬಿಎಸ್‌) ಎನ್ನಲಾಗುತ್ತದೆ. ಇದರಡಿ, ನೋಂದಾಯಿತ ಮತದಾರರು ಫಾಮ್‌ರ್‍ 12ರಲ್ಲಿ ರಿಟರ್ನಿಂಗ್‌ ಅಧಿಕಾರಿಗೆ ತಾನು ಅಂಚೆ ಮತದಾನ ಮಾಡುತ್ತೇನೆಂದು ಮನವಿ ಸಲ್ಲಿಸಬೇಕು. ಆಗ ಚುನಾವಣಾಧಿಕಾರಿಯು ಮತದಾರನಿಗೆ ಇ-ಮೇಲ್‌ನಲ್ಲಿ ಬ್ಯಾಲಟ್‌ ಪೇಪರ್‌ ಕಳಿಸುತ್ತಾರೆ. ಅದನ್ನು ಭರ್ತಿ ಮಾಡಿ ಮತ ಎಣಿಕೆಯ ದಿನದೊಳಗೆ ಬಂದು ತಲುಪುವಂತೆ ಮತದಾರರು ಅಂಚೆಯಲ್ಲಿ ಕಳುಹಿಸಬೇಕು. ಸೈನಿಕರು, ವಿದೇಶದಲ್ಲಿರುವ ಸರ್ಕಾರಿ ನೌಕರರೂ ಸೇರಿದಂತೆ ಇನ್ನಿತರ ಸೇವಾ ಮತದಾರರಿಗೆ ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿದೆ.

click me!