ಹೊಸ ಸಂಸತ್ ಭವನಕ್ಕೆ ಸುಪ್ರೀಂ ಒಪ್ಪಿಗೆ| ದಿಲ್ಲಿಯಲ್ಲಿ ಸೆಂಟ್ರಲ್ ವಿಸ್ತಾ ಯೋಜನೆಗಿದ್ದ ಅಡ್ಡಿ ನಿವಾರಣೆ| ಪರಿಸರ ಸಂಬಂಧಿ ಒಪ್ಪಿಗೆ, ಭೂ ಬಳಕೆ ಬದಲಾವಣೆಗೂ ಒಕೆ
ನವದೆಹಲಿ(ಜ.06): ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಸೆಂಟ್ರಲ್ ವಿಸ್ತಾ’ ಯೋಜನೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಅದರೊಂದಿಗೆ, ಹೊಸ ಸಂಸತ್ ಭವನದ ನಿರ್ಮಾಣವೂ ಸೇರಿದಂತೆ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ 3 ಕಿ.ಮೀ. ಪ್ರದೇಶದಲ್ಲಿ ಕೈಗೊಳ್ಳಲಿರುವ ನಾನಾ ನಿರ್ಮಾಣ ಕಾಮಗಾರಿಗಳಿಗಿದ್ದ ಕಾನೂನಿನ ಅಡ್ಡಿ ನಿವಾರಣೆಯಾದಂತಾಗಿದೆ.
ಈ ಯೋಜನೆಗೆ ಪರಿಸರ ಸಂಬಂಧಿ ಅನುಮತಿ ನೀಡಿರುವುದು, ಲ್ಯೂಟನ್ಸ್ ದೆಹಲಿಯಲ್ಲಿನ ಭೂಮಿಯ ಬಳಕೆ ಕುರಿತಾದ ನಿಯಮಗಳನ್ನು ಬದಲಿಸಿರುವುದೂ ಸೇರಿದಂತೆ ‘ಸೆಂಟ್ರಲ್ ವಿಸ್ತಾ’ ಯೋಜನೆಯ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಹಲವಾರು ಅರ್ಜಿಗಳು ದಾಖಲಾಗಿದ್ದವು. ಅವೆಲ್ಲವುಗಳನ್ನೂ ವಿಚಾರಣೆ ನಡೆಸಿದ ನ್ಯಾ| ಎ.ಎಂ.ಖಾನ್ವಿಲ್ಕರ್ ಅವರ ನೇತೃತ್ವದ ತ್ರಿಸದಸ್ಯ ಪೀಠ ಮಂಗಳವಾರ 2:1 ತೀರ್ಪಿನೊಂದಿಗೆ ಯೋಜನೆಗೆ ಬಹುಮತದ ಸಮ್ಮತಿ ನೀಡಿತು. ನ್ಯಾ| ಖಾನ್ವಿಲ್ಕರ್ ಹಾಗೂ ನ್ಯಾ| ದಿನೇಶ್ ಮಹೇಶ್ವರಿ ಅವರು ಯೋಜನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಸರ್ಕಾರದ ವಿವಿಧ ಇಲಾಖೆಗಳು ನೀಡಿರುವ ಎಲ್ಲಾ ಅನುಮತಿಗಳನ್ನೂ ಎತ್ತಿ ಹಿಡಿದರೆ, ಇನ್ನೊಬ್ಬ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಪರಿಸರ ಇಲಾಖೆಯ ಒಪ್ಪಿಗೆ ಮತ್ತು ಭೂಮಿ ಬಳಕೆಗೆ ಸಂಬಂಧಿಸಿದ ನಿಯಮ ಬದಲಾವಣೆಗೆ ಆಕ್ಷೇಪ ವ್ಯಕ್ತಪಡಿಸಿದರು.
undefined
ಇದೇ ವೇಳೆ ನ್ಯಾಯಪೀಠವು, ಸೆಂಟ್ರಲ್ ವಿಸ್ತಾ ಸ್ಥಳದಲ್ಲಿ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸುವುದಕ್ಕಿಂತ ಮೊದಲು ಪಾರಂಪರಿಕ ಸಮಿತಿ ಹಾಗೂ ಇನ್ನಿತರ ಸಂಬಂಧಪಟ್ಟಪ್ರಾಧಿಕಾರಗಳಿಂದ ಒಪ್ಪಿಗೆ ಪಡೆದುಕೊಳ್ಳುವಂತೆ ಸೂಚಿಸಿತು. ಜೊತೆಗೆ, ನಿರ್ಮಾಣ ಕಾಮಗಾರಿಗಳಿಂದ ಉಂಟಾಗುವ ವಾಯುಮಾಲಿನ್ಯ ತಡೆಯಲು ಸ್ಮಾಗ್ ಟವರ್ ಹಾಗೂ ಆ್ಯಂಟಿ ಸ್ಮಾಗ್ ಗನ್‌ಗಳನ್ನು ಬಳಸುವಂತೆ ನಿರ್ದೇಶನ ನೀಡಿತು.
ಸೆಂಟ್ರಲ್ ವಿಸ್ತಾ ಯೋಜನೆಯ ಪ್ರಮುಖ ಆಕರ್ಷಣೆಯಾಗಿರುವ 971 ಕೋಟಿ ರು. ವೆಚ್ಚದ ಹೊಸ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಡಿ.10ರಂದು ಭೂಮಿಪೂಜೆ ನೆರವೇರಿಸಿದ್ದರು.
ಒಂದೇ ವರ್ಷದಲ್ಲಿ ಎಲ್ಲ ಅಡೆತಡೆ ನಿವಾರಣೆ
2019ರ ಸೆಪ್ಟೆಂಬರ್‌ನಲ್ಲಿ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಇದರಡಿ ತ್ರಿಭುಜಾಕೃತಿಯ ಹೊಸ ಸಂಸತ್ ಭವನ ಹಾಗೂ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ಲ್ಯೂಟನ್ಸ್ ದೆಹಲಿಯ ಪ್ರದೇಶದಲ್ಲಿ ವಿವಿಧ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ಹೊಸ ಸಂಸತ್ ಭವನದಲ್ಲಿ 900ರಿಂದ 1200 ಸಂಸದರು ಕುಳಿತುಕೊಳ್ಳಲು ಜಾಗವಿರಲಿದೆ. ಆದರೆ, ಈ ಯೋಜನೆಯಿಂದ ದೆಹಲಿಯಲ್ಲಿ ಹಸಿರು ನಾಶವಾಗುತ್ತದೆ, ಪಾರಂಪರಿಕ ಕಟ್ಟಡಗಳಾಗಿರುವ ಸಂಸತ್ ಭವನವೂ ಸೇರಿದಂತೆ ಇನ್ನಿತರ ಕಟ್ಟಡಗಳಿಗಳಿಗೆ ಹಾನಿಯಾಗಬಹುದು ಹಾಗೂ ಈ ಯೋಜನೆಗಾಗಿ ಲ್ಯೂಟನ್ಸ್ ದೆಹಲಿಯಲ್ಲಿ ಭೂಮಿ ಬಳಕೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಬದಲಿಸಲಾಗಿದೆ ಎಂದು ಆಕ್ಷೇಪಿಸಿ ನಾನಾ ಕೋರ್ಟ್‌ಗಳಲ್ಲಿ ದಾವೆಗಳು ದಾಖಲಾಗಿದ್ದವು. ಅವೆಲ್ಲವುಗಳನ್ನು ಒಟ್ಟಿಗೇ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಈಗ ಯೋಜನೆಗಿದ್ದ ಎಲ್ಲಾ ಕಾನೂನಾತ್ಮಕ ಅಡ್ಡಿಗಳನ್ನು ನಿವಾರಿಸಿ ತೀರ್ಪು ನೀಡಿದೆ.