ಕೃಷ್ಣ ಜನ್ಮಭೂಮಿಯಿಂದ ಈದ್ಗಾ ಮಸೀದಿ ತೆರವು: ಅರ್ಜಿ ವಜಾ| ಪ್ರಾರ್ಥನಾ ಮಂದಿರಗಳ ಬದಲಾವಣೆ ಅಸಾಧ್ಯ| ಅರ್ಜಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ
ಮಥುರಾ(ಅ.01): ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಎಲ್ಲ 32 ಆರೋಪಿಗಳನ್ನು ಸಿಬಿಐ ಕೋರ್ಟ್ ಖುಲಾಸೆಗೊಳಿಸಿದ ಬೆನ್ನಲ್ಲೇ, ಮಥುರಾದ ಶ್ರೀ ಕೃಷ್ಣ ಜನ್ಮಭೂಮಿಯಲ್ಲಿ ನಿರ್ಮಾಣವಾಗಿದೆ ಎನ್ನಲಾದ ಈದ್ಗಾ ಮಸೀದಿ ತೆರವುಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಮನವಿಯನ್ನು ಇಲ್ಲಿನ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.
1991ರ ಪ್ರಾರ್ಥನಾ ಸ್ಥಳಗಳ (ವಿಶೇಷ ನಿಯಮಾವಳಿ) ಕಾಯ್ದೆ (1947ರ ಆ.15ರ ಯಥಾಸ್ಥಿತಿ ಕಾಪಾಡುವ) ಅನ್ವಯ, ಇಂಥ ಪ್ರಾರ್ಥನಾ ಮಂದಿರಗಳ ಬದಲಾವಣೆ ಅಸಾಧ್ಯ. ಹೀಗಾಗಿ ಅರ್ಜಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿ ಜಿಲ್ಲಾ ಸಹಾಯಕ ನ್ಯಾಯಾಧೀಶ ಛಯ್ಯಾ ಶರ್ಮಾ ಅರ್ಜಿಯನ್ನು ತಿರಸ್ಕರಿಸಿದರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀ ಕೃಷ್ಣ ಜನ್ಮಸ್ಥಾನ ಪರ ಹೋರಾಟದ ಭಾಗವಾದ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ ಅ.15ರಂದು ಸಭೆ ನಡೆಯಲಿದ್ದು, ಅಲ್ಲಿಯೇ ಮಥುರಾದ ಶ್ರೀಕೃಷ್ಣ ಜನ್ಮಸ್ಥಾನ ವಶಕ್ಕೆ ಅಗತ್ಯವಿರುವ ಹೋರಾಟದ ಬಗ್ಗೆ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.