ಚೆನ್ನೈ: ಭೀಕರ ಅಗ್ನಿ ದುರಂತಕ್ಕೆ ಹೊತ್ತಿ ಉರಿದ ರೈಲು, ಬೆಂಕಿ ನಂದಿಸಲು ಹರಸಾಹಸ

Published : Jul 13, 2025, 10:03 AM IST
goods train fire

ಸಾರಾಂಶ

ತಿರುವಳ್ಳೂರು ಬಳಿ ಸರಕು ರೈಲಿನಲ್ಲಿನ ತೈಲ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಚೆನ್ನೈ-ಅರಕ್ಕೋಣಂ ರೈಲು ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಹಲವಾರು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ ಮತ್ತು ಮಾರ್ಗ ಬದಲಾವಣೆ ಮಾಡಲಾಗಿದೆ.  

ಚೆನ್ನೈ: ಭಾನುವಾರ ಮುಂಜಾನೆ ತಿರುವಳ್ಳೂರು ಬಳಿ ಸರಕು ಸಾಗಣೆ ರೈಲಿನಲ್ಲಿ ಇದ್ದ ಕಚ್ಚಾ ತೈಲ ಟ್ಯಾಂಕರ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ಸಂಭವಿಸಿದೆ. ಪರಿಣಾಮ ಜನನಿಬಿಡವಾದ ಚೆನ್ನೈ-ಅರಕ್ಕೋಣಂ ರೈಲು ಮಾರ್ಗದಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಚೆನ್ನೈ ಎನ್ನೋರ್‌ನಿಂದ ಮುಂಬೈಗೆ ತೆರಳುತ್ತಿದ್ದ 45 ಕಚ್ಚಾ ತೈಲ ಟ್ಯಾಂಕರ್‌ಗಳನ್ನು ಹೊತ್ತ ಸರಕು ರೈಲು, ತಿರುವಳ್ಳೂರು ಬಳಿಯ ಎಗತ್ತೂರು ಪ್ರದೇಶವನ್ನು ಬೆಳಿಗ್ಗೆ 5 ಗಂಟೆ ಸುಮಾರಿಗೆ ದಾಟುತ್ತಿದ್ದಾಗ ಈ ಘಟನೆ ನಡೆದಿದೆ.

ರೈಲ್ವೆ ಮೂಲಗಳ ಮಾಹಿತಿ ಪ್ರಕಾರ, ಒಂದೇ ಟ್ಯಾಂಕರ್‌ ಬೆಂಕಿಗೆ ಆಹುತಿಯಾಗಿದ್ದು, ಅವುದಿಂದ ಹೊರಬಂದ ಜ್ವಾಲೆಗಳು ಪಕ್ಕದ ಟ್ಯಾಂಕರ್‌ಗಳಿಗೆ ವೇಗವಾಗಿ ಹರಿದು ದೊಡ್ಡ ಅಗ್ನಿ ದುರಂತಕ್ಕೆ ಕಾರಣವಾಗಿವೆ. ಸ್ಥಳದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಎಚ್ಚೆತ್ತ ಅಧಿಕಾರಿಗಳು ಆ ಪ್ರದೇಶದಲ್ಲಿ ಹಾದು ಹೋಗುವ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

ಈ ಅಗ್ನಿದುರಂತದ ಪರಿಣಾಮ ಚೆನ್ನೈ-ಅರಕ್ಕೋಣಂ ವಿಭಾಗದಲ್ಲಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಹಲವಾರು ಪ್ರಯಾಣಿಕ ಮತ್ತು ಸರಕು ರೈಲು ಸೇವೆಗಳು ವಿಳಂಬವಾದವು. ಕೆಲವು ರೈಲುಗಳು ಬೇರೆ ಮಾರ್ಗಕ್ಕೆ ತಿರುಗಿಸಲ್ಪಟ್ಟಿವೆ.

ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬೆಂಕಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದ ನಂತರ ಪೂರ್ಣ ಪ್ರಮಾಣದ ಮೌಲ್ಯಮಾಪನ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಹಿರಿಯ ರೈಲ್ವೆ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲೇ ಇದ್ದು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ದುರಂತದ ಕಾರಣದ ಬಗ್ಗೆ ತನಿಖೆ

ಬೆಂಕಿಗೆ ಕಾರಣವಾಗಿರುವ ಹಿನ್ನೆಲೆಯನ್ನು ತಿಳಿದುಕೊಳ್ಳಲು ತನಿಖೆ ಆರಂಭಿಸಲಾಗಿದೆ. ಸಾರ್ವಜನಿಕರು ತುರ್ತು ಸಿಬ್ಬಂದಿಯ ಕಾರ್ಯಕ್ಕೆ ಅಡ್ಡಿಯಾಗದಂತೆ ತಿರುವಳ್ಳೂರು ಜಿಲ್ಲಾಡಳಿತವು ಜನರಿಗೆ ಸ್ಥಳಕ್ಕೆ ತೆರಳಬಾರದು ಎಂದು ಮನವಿ ಮಾಡಿದೆ. ಉಸಿರಾಟದ ತೊಂದರೆ ಇರುವವರು ಮನೆಯಲ್ಲೇ ಉಳಿಯಬೇಕು ಮತ್ತು ಅಗತ್ಯವಿದ್ದರೆ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಅಧಿಕಾರಿಗಳಿಂದ ಸಹಾಯ ಪಡೆಯಬೇಕು ಎಂದು ಎಚ್ಚರಿಸಲಾಗಿದೆ. ಅಗ್ನಿಶಾಮಕ ಕಾರ್ಯಾಚರಣೆಗಳು ಮುಂದುವರೆದಿದ್ದು, ತಿರುವಳ್ಳೂರು ಜಿಲ್ಲಾಧಿಕಾರಿ ಎಂ. ಪ್ರತಾಪ್ ಸಾರ್ವಜನಿಕರ ಸಹಕಾರವನ್ನು ಕೋರಿದ್ದಾರೆ.

ರೈಲು ಸೇವೆಗಳಲ್ಲಿ ವ್ಯತ್ಯಯ

ಮುನ್ನೆಚ್ಚರಿಕೆಯ ಭಾಗವಾಗಿ ಚೆನ್ನೈ-ಅರಕ್ಕೋಣಂ ವಿಭಾಗದ ಎಲ್ಲಾ ಇಎಂಯು (EMU) ಸ್ಥಳೀಯ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

  • 8 ಎಕ್ಸ್‌ಪ್ರೆಸ್ ರೈಲುಗಳು ರದ್ದುಪಡಿಸಲಾಗಿದೆ.
  • 5 ಎಕ್ಸ್‌ಪ್ರೆಸ್ ರೈಲುಗಳ ಮಾರ್ಗ ಬದಲಿಸಲಾಗಿದೆ.
  • 8 ರೈಲುಗಳನ್ನು ಅಲ್ಪಾವಧಿಗೆ ಸ್ಥಗಿತಗೊಳಿಸಲಾಗಿದೆ.

ರೈಲ್ವೆ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಬೆಂಕಿ ನಂದಿಸುವ ಕಾರ್ಯವು ಚುರುಕಾಗಿ ನಡೆಯುತ್ತಿದೆ. ಸಾಮಾನ್ಯ ರೈಲು ಸಂಚಾರವನ್ನು ಸಾಧ್ಯವಾದಷ್ಟು ಬೇಗ ಪುನರಾರಂಭಿಸುವ ಪ್ರಯತ್ನ ನಡೆಯುತ್ತಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಅದಕ್ಕೆ ತಕ್ಕಂತೆ ಯೋಜಿಸಬೇಕೆಂದು ವಿನಂತಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಈ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು: 044-25354151, 044-24354995.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ