ಕೊರೋನಾ ಸಮರಕ್ಕೆ ಹುತಾತ್ಮ ಯೋಧನ ಪತ್ನಿಯ ತ್ಯಾಗ| ದೇಶಕ್ಕಾಗಿ ಪ್ರಾಣ ಕೊಟ್ಟ ಪತಿ, ಇಂದು ಜೀವನ ಪರ್ಯಂತ ಕೂಡಿಟ್ಟ ಹಣ ಕೊರೋನಾ ಸಮರಕ್ಕೆ ದಾನಗೈದ ದರ್ಶಿನಿ ದೇವಿ| ಸರ್ಶಿನಿ ದೇವಿ ಕೊಡುಗೆಗೆ ಎಲ್ಲರೂ ಫಿದಾ
ನವದೆಹಲಿ(ಮೇ.17): ಉತ್ತರಾಖಂಡ್‌ನ ದರ್ಶಿನಿ ದೇವಿ ಕೊರೋನಾ ಸಂಕಟದ ಈ ಸಂದರ್ಭದಲ್ಲಿ ಮಾಡಿರುವ ಕೆಲಸ ಇಡೀ ದೇಶಕ್ಕೇ ಮಾದರಿ. ಹುತಾತ್ಮ ಯೋಧನ ಪತ್ನಿ 82 ವರ್ಷದ ದರ್ಶಿನಿ ದೇವಿ ತಾನು ಜೀವನ ಪರ್ಯಂತ ಕೂಡಿಟ್ಟ ಎರಡು ಲಕ್ಷ ಮೊತ್ತವನ್ನು ಕೊರೋನಾ ಸಮರಕ್ಕಾಗಿ ಪಿಎಂ ಕೇರ್ಸ್ ಫಂಡ್‌ಗೆ ನೀಡಿದ್ದಾರೆ.
ದರ್ಶಿನಿ ದೇವಿ ಈ ನಡೆಯನ್ನು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಕೂಡಾ ಜನರು ಇದನ್ನು ನೋಡಿ ಕಲಿಯಬೇಕು ಎನ್ನುವ ಮೂಲಕ ಶ್ಲಾಘಿಸಿದ್ದಾರೆ. ಅಲ್ಲದೇ ಕೇಂದ್ರ ಸಚಿವ ರಮೇಶ್ ಪೋಖರಿಯಾಲ್ ಕೂಡಾ ಇಂತಹವರಿಗೆ ನನ್ನದೊಂದು ಸಲಾಂ ಎಂದಿದ್ದಾರೆ.
ಅಗಸ್ತ್ಯ ಮುನಿ ವಿಕಾಸ್ ಖಂಡ್ ನಿವಾಸಿ, ವೃದ್ಧೆ ಶ್ರೀಮತಿ ದರ್ಶಿನಿ ದೇವಿ ರೌತಾಣ್ ಪಿಎಂ ಕೇರ್ಸ್ ಫಂಡ್‌ಗೆ ತಾವು ಈವರೆಗೆ ಕೂಡಿಟ್ಟಿದ್ದ ಎರಡು ಲಕ್ಷ ಮೊತ್ತ ದಾನ ಮಾಡಿ ಹೊಸ ಉದಾಹರಣೆಯಾಗಿದ್ದಾರೆ. ದರ್ಶಿನಿ ದೇವಿಯವರ ಪತಿ ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿದ್ದರು. ಆದರೆ 1965 ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಹುತಾತ್ಮರಾಗಿದ್ದರು.
ಇವರನ್ನು ನೋಡಿ ಕಲಿಯಬೇಕು
ಸಿಡಿಎಸ್ ಜನರಲ್ ಬಿಪಿನ್ ರಾವತ್ ದರ್ಶಿನಿ ದೇವಿಯನ್ನು ಶ್ಲಾಘಸಿದ್ದು, 'ಇದು ನಮ್ಮ ಸೇನೆ, ನಮ್ಮ ಸೇನೆ ಹೀಗಿತ್ತು ಹಾಗೂ ಹೀಗೇ ಇರಲಿದೆ. ದರ್ಶಿನಿ ದೇವಿ ಬಗ್ಗೆ ನಮಗೆ ಹೆಮ್ಮೆ ಇದೆ. ನಾವೆಲ್ಲರೂ ಅವರನ್ನು ನೋಡಿ ಕಲಿಯಬೇಕು. ನಮ್ಮಿಂದ ಏನೂ ಕೊಡಲು ಸಾಧ್ಯವಿಲ್ಲವೆಂದಾದರೆ ಕನಿಷ್ಟ ಪಕ್ಷ ತೆರಿಗೆಯನ್ನಾದರೂ ಪಾವತಿಸೋಣ' ಎಂದಿದ್ದಾರೆ.
ಅಂದು ದರ್ಶಿನಿ ಗಂಡ ಶತ್ರು ದೇಶದ ವಿರುದ್ಧ ಹೋರಾಡಲು ತನ್ನ ಪ್ರಾಣ ತ್ಯಾಗ ಮಾಡಿದರೆ, ಇಂದು ದೇಶವನ್ನು ಕಂಗೆಡಿಸಿರುವ ಕಾಣದ ವೈರಿಯ ವಿರುದ್ಧದ ಹೋರಾಟಕ್ಕೆ ದರ್ಶಿನಿ ತಮ್ಮ ಜೀವನ ಪರ್ಯಂತ ಕೂಡಿಟ್ಟ ಹಣ ನೀಡಿದ್ದಾರೆ.