
ಪ್ರಯಾಗ್‌ರಾಜ್ (ಮಾ.28): ವಿವಾಹಿತ ಪುರುಷನು ಮಹಿಳೆಯೊಬ್ಬಳ ಜೊತೆ ಒಪ್ಪಿತ ಲಿವ್-ಇನ್ ಸಂಬಂಧದಲ್ಲಿರುವುದು ಕಾನೂನಿನಡಿಯಲ್ಲಿ ಅಪರಾಧವಲ್ಲ. ಸಾಮಾಜಿಕ ನೈತಿಕತೆಯು ವೈಯಕ್ತಿಕ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ.
ವಿವಾಹಿತ ಪುರುಷ ಹಾಗೂ ಮಹಿಳೆ ಲಿವ್-ಇನ್ ಸಂಬಂಧದಲ್ಲಿದ್ದರು. ಆದರೆ ಮಹಿಳೆಯ ಕುಟುಂಬದಿಂದ ಜೋಡಿಗೆ ನಿರಂತರವಾಗಿ ಬೆದರಿಕೆಗಳು ಬರುತ್ತಿದ್ದವು. ಹಾಗಾಗಿ ರಕ್ಷಣೆ ಕೋರಿ ಕೋರ್ಟ್ ಮೊರೆ ಹೋಗಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಜೆ.ಜೆ. ಮುನೀರ್ ಹಾಗೂ ನ್ಯಾ. ತರುಣ್ ಸಕ್ಸೇನಾ ಅವರಿದ್ದ ವಿಭಾಗೀಯ ಪೀಠ, ‘ವಿವಾಹಿತ ಪುರುಷನು ಪರಸ್ಪರ ಒಪ್ಪಿಗೆಯ ಮೇರೆಗೆ ವಯಸ್ಕ ಮಹಿಳೆಯೊಂದಿಗೆ ಸಹಬಾಳ್ವೆ ನಡೆಸುವುದು ಅಪರಾಧವಲ್ಲ. ನೈತಿಕತೆ ಮತ್ತು ಕಾನೂನು ಎರಡೂ ಬೇರೆ ಬೇರೆ. ನಾಗರಿಕರ ವೈಯಕ್ತಿಕ ಹಕ್ಕುಗಳನ್ನು ರಕ್ಷಿಸುವ ಕೋರ್ಟ್‌ನ ಕ್ರಮವನ್ನು ಸಾಮಾಜಿಕ ಅಭಿಪ್ರಾಯ ಮತ್ತು ನೈತಿಕತೆ ನಿಯಂತ್ರಿಸಲು ಸಾಧ್ಯವಿಲ್ಲ’ ಎಂದಿತು.
ಇದೇ ವೇಳೆ, ‘ಇಂಥ ಜೋಡಿಗೆ ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯ’ ಎಂದು ಅಭಿಪ್ರಾಯಪಟ್ಟ ಪೀಠ, ರಕ್ಷಣೆಗೆ ಕ್ರಮ ಕೈಗೊಳ್ಳದ ಪೊಲೀಸ್ ಮಹಾನಿರ್ದೇಶಕರ ವಿರುದ್ಧ ಗರಂ ಆಯಿತು. ಜೊತೆಗೆ, ಜೋಡಿಗೆ ತಕ್ಷಣ ರಕ್ಷಣೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ