ಮೂರು ಮನೆ, 3 ಆಟೋ, ಒಂದು ಕಾರು ಜೊತೆಗೆ ಡ್ರೈವರ್, ಈತ ಭಾರತದ ಕೋಟ್ಯಾಧಿಪತಿ ಭಿಕ್ಷುಕ

Published : Jan 19, 2026, 07:38 PM IST
Indore beggar

ಸಾರಾಂಶ

ಮೂರು ಮನೆ, 3 ಆಟೋ, ಒಂದು ಕಾರು, ಲಕ್ಷ ಲಕ್ಷ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್, ಸಾಲ ಇಲ್ಲ, ಯಾವ ತಲೆನೋವು ಇಲ್ಲ. ಈತನ ಭಾರತದ ಶ್ರೀಮಂತ ಭಿಕ್ಷುಕ ಮಂಗಿಲಾಲ್. ಕಾಲುಗಳಿಗೆ ಸ್ವಾಧೀನವಿಲ್ಲ, ಹೀಗಾಗಿ ಅನಿವಾರ್ಯ ಭಿಕ್ಷಾಟನೆಗೆ ಇಳಿದ ಲಾಲ್ ಈಗ ಶ್ರೀಮಂತ. 

ಇಂದೋರ್ (ಜ.19) ಹುಟ್ಟುತ್ತಲೇ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರು. ಎದ್ದು ನಡೆಯಲು ಸಾಧ್ಯವಿಲ್ಲ. ವ್ಹೀಲ್ ಚೇರ್ ಅನಿವಾರ್ಯ. ಓದು, ಬರಹ ಸಾಧ್ಯವಾಗಲಿಲ್ಲ, ಹೀಗಾಗಿ ಬದುಕಿನ ಬಂಡಿ ಸಾಗಲು ಉಳಿದಿದ್ದು ಭಿಕ್ಷಾಟನೆ. ಹಾಗಂತ ನಿಮ್ಮ ಬಳಿ ಅಣ್ಣಾ, ತಾಯಿ ಏನಾದರು ಕೊಡಿ ಎಂದು ಕೇಳುವುದಿಲ್ಲ. ಈ ಮಂಗಿಲಾಲ್ ಪರಿಸ್ಥಿತಿ ನೋಡಿ ಜನರೇ ದುಡ್ಡು ಹಾಕುತ್ತಾರೆ, ನೆರವು ನೀಡುತ್ತಾರೆ. ಹೀಗೆ ಭಿಕ್ಷಾಟನೆಯಿಂದ ಮಂಗಿಲಾಲ್ ಶ್ರೀಮಂತರಾಗಿದ್ದಾರೆ. ಈಗಲೂ ಭಿಕ್ಷಾಟನೆ ಮಾಡುತ್ತಾರೆ. ಆದರೆ ಮಂಗಿಲಾಲ್ ಬಳಿ ಮೂರು ಮನೆ ಇದೆ. ಮೂರು ಆಟೋ ರಿಕ್ಷಾದ ಮಾಲೀಕರು. ಈ ಆಟೋ ರಿಕ್ಷಾಗಳಿಗೆ ಚಾಲಕರನ್ನೂ ಇಟ್ಟಿದ್ದಾರೆ. ಇಷ್ಟೇ ಅಲ್ಲ ಒಂದು ಮಾರುತಿ ಸುಜುಕಿ ಸಿಫ್ಟ್ ಡಿಸೈರ್ ಕಾರು ಕೂಡ ಇದೆ. ಇವರೇ ಇಂದೋರ್‌ನ ಭಿಕ್ಷುಕ ಮಂಗಿಲಾಲ್.

ಸರಾಫಾ ಬಜಾರ್‌ನಲ್ಲಿ ವರ್ಷಗಳಿಂದ ಕಾಣಸಿಗುತ್ತಿದ್ದ ಅಂಗವಿಕಲ ವ್ಯಕ್ತಿ ಮಂಗಿಲಾಲ್, ಎಂದಿಗೂ ಬಹಿರಂಗವಾಗಿ ಭಿಕ್ಷೆ ಬೇಡುತ್ತಿರಲಿಲ್ಲ. ಬದಲಾಗಿ, ಹೆಗಲ ಮೇಲೆ ಬ್ಯಾಗ್ ಹಾಕಿಕೊಂಡು, ಶೂ ಒಳಗೆ ಕೈಗಳನ್ನಿಟ್ಟು ನೆಲ ತಳ್ಳುತ್ತಾ, ಮೂಲೆಗಳಲ್ಲಿ ಸುಮ್ಮನೆ ಕುಳಿತಿರುತ್ತಿದ್ದ ಅಥವಾ ಜನಸಂದಣಿಯಲ್ಲಿ ನಿಧಾನವಾಗಿ ಚಲಿಸುತ್ತಿದ್ದ. ಇದನ್ನು ನೋಡಿ ಮರುಕಪಡುತ್ತಿದ್ದ ದಾರಿಹೋಕರು, ಆತನ ಕೈಗೆ ನಗದು ಅಥವಾ ನಾಣ್ಯಗಳನ್ನು ನೀಡುತ್ತಿದ್ದರು. ಸರಾಸರಿ ದಿನವೊಂದಕ್ಕೆ ಆತನ ಸಂಪಾದನೆ 500 ರಿಂದ 1,000 ರೂಪಾಯಿ ಇರುತ್ತಿತ್ತು.

ಭಿಕ್ಷಾಟನೆ ವಿರೋಧಿ ಅಭಿಯಾನದಲ್ಲಿ ಬಹಿರಂಗ

ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಕ್ಷಣಾ ತಂಡವು ಇತ್ತೀಚೆಗೆ ಭಿಕ್ಷಾಟನೆ ವಿರೋಧಿ ಅಭಿಯಾನದ ಭಾಗವಾಗಿ ಮಂಗಿಲಾಲ್‌ನನ್ನು ಕರೆತಂದು, ಪುನರ್ವಸತಿ ಕಲ್ಪಿಸುವುದಾಗಿ ತಿಳಿಸಿದಾಗ ಈ ಸತ್ಯಾಂಶ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾನೆ. ಭಗತ್ ಸಿಂಗ್ ನಗರದಲ್ಲಿ ಮೂರು ಅಂತಸ್ತಿನ ಮನೆ, ಶಿವನಗರದಲ್ಲಿ 600 ಚದರ ಅಡಿಯ ಮನೆ ಮತ್ತು ತನ್ನ ಅಂಗವೈಕಲ್ಯದ ಆಧಾರದ ಮೇಲೆ ರೆಡ್ ಕ್ರಾಸ್ ಸೊಸೈಟಿ ಮೂಲಕ ಪಿಎಂಎವೈ ಯೋಜನೆಯಡಿ ಅಲ್ವಾಸಾದಲ್ಲಿ ಒಂದು ಬೆಡ್‌ರೂಮ್ ಫ್ಲಾಟ್ ಹೊಂದಿರುವುದಾಗಿ ನೋಡಲ್ ಅಧಿಕಾರಿ ದಿನೇಶ್ ಮಿಶ್ರಾ ಅವರಿಗೆ ಮಂಗಿಲಾಲ್ ತಿಳಿಸಿದ್ದಾನೆ. ಅಲ್ಲದೆ, ಬಾಡಿಗೆಗೆ ನೀಡಲಾದ ಮೂರು ಆಟೋ-ರಿಕ್ಷಾಗಳು ಮತ್ತು ಸಂಬಳಕ್ಕೆ ಡ್ರೈವರ್ ಇರುವ ಸ್ವಿಫ್ಟ್ ಡಿಜೈರ್ ಕಾರನ್ನೂ ಆತ ಹೊಂದಿದ್ದಾನೆ.

ಹಣ ಬಡ್ಡಿಗೆ ನೀಡಿ ದುಡ್ಡು ಸಂಪಾದನೆ

ಮಂಗಿಲಾಲ್ ತಾನು ಪಡೆದ 'ಭಿಕ್ಷೆ'ಯನ್ನು ಸರಾಫಾ ಬಜಾರ್‌ನಲ್ಲಿನ ಸಣ್ಣ ಆಭರಣ ವ್ಯವಹಾರಗಳನ್ನು ಗುರಿಯಾಗಿಸಿಕೊಂಡು, ಹೆಚ್ಚಿನ ಬಡ್ಡಿಗೆ ಸಾಲ ನೀಡುವ ವ್ಯವಹಾರಕ್ಕೆ ಬಳಸುತ್ತಿದ್ದ ಎಂಬುದು ತನಿಖಾಧಿಕಾರಿಗಳಿಗೆ ತಿಳಿದುಬಂದಿದೆ. ಆತ ಸಾಲಗಾರರಿಂದ ದೈನಂದಿನ ಅಥವಾ ಸಾಪ್ತಾಹಿಕ ಬಡ್ಡಿಯನ್ನು ಸಂಗ್ರಹಿಸುತ್ತಿದ್ದ ಎಂದು ಆರೋಪಿಸಲಾಗಿದೆ.

“ಅವನ ಬಳಿ ಎಷ್ಟು ಹಣವಿದೆ ಎಂಬುದರ ಬಗ್ಗೆ ಆತ ನಮಗೆ ಸುಳಿವು ನೀಡಿದ್ದಾನೆ, ಆದರೆ ನಾವು ಇನ್ನೂ ನಿಖರವಾದ ಅಂಕಿಅಂಶವನ್ನು ತಲುಪಬೇಕಿದೆ. ನಾವು ಅವನ ಎಲ್ಲಾ ಆದಾಯದ ಮೂಲಗಳನ್ನು ಮತ್ತು ಅವನ ಹೆಸರಿನಲ್ಲಿರುವ ಆಸ್ತಿಗಳನ್ನು ತನಿಖೆ ಮಾಡುತ್ತಿದ್ದೇವೆ” ಎಂದು ಮಿಶ್ರಾ ಹೇಳಿದ್ದಾರೆ.

ಅಧಿಕಾರಿಗಳು ಈಗ ಮಂಗಿಲಾಲ್‌ನ ಬ್ಯಾಂಕ್ ಖಾತೆಗಳು ಮತ್ತು ಇತರ ನಗದು ಹಿಡುವಳಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಅದನ್ನು ಪರಿಶೀಲಿಸಲಾಗುವುದು. ಈಗಾಗಲೇ ಹಲವು ಆಸ್ತಿಗಳನ್ನು ಹೊಂದಿದ್ದರೂ ಪಿಎಂಎವೈ ಮನೆ ಹೇಗೆ ಪಡೆದ ಎಂಬುದನ್ನು ವಿವರಿಸಲು ಜಿಲ್ಲಾಧಿಕಾರಿಗಳ ಮುಂದೆ ಹಾಜರುಪಡಿಸಲಾಗುವುದು. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ರಜನೀಶ್ ಸಿನ್ಹಾ, ಮಂಗಿಲಾಲ್ 'ಗಮನಾರ್ಹ ಆಸ್ತಿ' ಹೊಂದಿದ್ದಾನೆ ಎಂದು ಖಚಿತಪಡಿಸಿದ್ದಾರೆ. “ಅವನು ಮೀಟರ್ ಬಡ್ಡಿ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದ್ದಾನೆ, ಇದು ಅಪರಾಧ. ಭಿಕ್ಷಾಟನೆಯನ್ನು ಉತ್ತೇಜಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.

ಮಂಗಿಲಾಲ್ ಪ್ರಸ್ತುತ ಅಲ್ವಾಸಾ ಫ್ಲಾಟ್‌ನಲ್ಲಿ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದು, ಅವನ ಇಬ್ಬರು ಸಹೋದರರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇಂದೋರ್‌ನ ಬೀದಿಗಳನ್ನು ಭಿಕ್ಷುಕರಿಂದ ಮುಕ್ತಗೊಳಿಸುವ ಈ ಅಭಿಯಾನವನ್ನು ಫೆಬ್ರವರಿ 2024 ರಲ್ಲಿ ಪ್ರಾರಂಭಿಸಲಾಯಿತು. ಕಳೆದ ಎರಡು ವರ್ಷಗಳಲ್ಲಿ, ಈ ಅಭಿಯಾನದಲ್ಲಿ ಭಾಗಿಯಾಗಿರುವ ಸಂಸ್ಥೆಗಳು ಸುಮಾರು 6,500 ಭಿಕ್ಷುಕರನ್ನು ಗುರುತಿಸಿ, ಅವರಲ್ಲಿ ಸುಮಾರು 4,500 ಜನರಿಗೆ ರಾಜ್ಯ ಸರ್ಕಾರದ ಯೋಜನೆಗಳ ಮೂಲಕ ಜೀವನೋಪಾಯ ಗಳಿಸಲು ಸಲಹೆ ನೀಡಿವೆ. ಸುಮಾರು 1,600 ರಕ್ಷಿಸಲ್ಪಟ್ಟ ಭಿಕ್ಷುಕರನ್ನು ಉಜ್ಜಯಿನಿಯ ಆಶ್ರಮಕ್ಕೆ ಸ್ಥಳಾಂತರಿಸಲಾಗಿದ್ದು, ಈ ಕಾರ್ಯಕ್ರಮವು 172 ಮಕ್ಕಳನ್ನು ಶಾಲೆಗೆ ಸೇರಿಸಲು ಸಹಾಯ ಮಾಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲೈಕ್​ಗೋಸ್ಕರ್ ಒಂದು​ ಜೀವವನ್ನೇ ತೆಗೆದಳಾ ಈ ಮುಸ್ತಫಾ? ದೀಪಕ್​ ಸಾವಿನ ಹಿಂದಿರೋ ರಹಸ್ಯವೇನು? ನಿಜವೇನು?
ಮುಕೇಶ್‌ ಅಂಬಾನಿ ಮನೆ ತಿಂಗಳ ವಿದ್ಯುತ್‌ ಬಿಲ್‌ 70 ಲಕ್ಷ ರು.