
ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಹಸ್ತಾಂತರಿಸುವ ನಿರ್ಧಾರವು ಕೇವಲ ಆಡಳಿತಾತ್ಮಕ ಬದಲಾವಣೆಯಷ್ಟೇ ಅಲ್ಲ; ಇದು ಮಂಗಳೂರು ಹಾಗೂ ಕರಾವಳಿ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಹೊಸ ಶಕೆಯ ಆರಂಭವಾಗಿದೆ. ಈ ಚ ಕೊಂಕಣ ರೈಲ್ವೆಯನ್ನು ಪೂರ್ಣಪ್ರಮಾಣದಲ್ಲಿ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಮತ್ತು ಪ್ರತ್ಯೇಕ ಮಂಗಳೂರು ರೈಲ್ವೆ ವಿಭಾಗವನ್ನು ಸ್ಥಾಪಿಸುವ ಪ್ರಕ್ರಿಯೆಯು ಪ್ರಮುಖ ಘಟ್ಟ ತಲುಪಿದೆ.
ಉಳ್ಳಾಲ ಸೇರಿದಂತೆ ಮಂಗಳೂರು ಪ್ರದೇಶವನ್ನು ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಅಡಿಯಲ್ಲಿ ಮೈಸೂರು ವಿಭಾಗಕ್ಕೆ ಸ್ಥಳಾಂತರಿಸುವುದರೊಂದಿಗೆ ಪ್ರಮುಖ ಮೊದಲ ಹಂತ ಪೂರ್ಣಗೊಂಡಿದೆ. ಮೈಸೂರು, ಬೆಂಗಳೂರು ಮತ್ತು ಹುಬ್ಬಳ್ಳಿ ವಿಭಾಗಗಳ ಮಾದರಿಯಲ್ಲೇ ನೈಋತ್ಯ ರೈಲ್ವೆಯ ಅಡಿಯಲ್ಲಿ ಪ್ರತ್ಯೇಕ ಮಂಗಳೂರು ರೈಲ್ವೆ ವಿಭಾಗವನ್ನು ರಚಿಸುವ ಪ್ರಯತ್ನಗಳು ಸಾಗಿವೆ.
ಕೊಂಕಣ ರೈಲ್ವೆ ವ್ಯಾಪ್ತಿಯ ತೋಕೂರಿನಿಂದ ಗೋವಾದ ತಿವಿಮ್ ನಿಲ್ದಾಣದವರೆಗೆ 30 ನಿಲ್ದಾಣಗಳನ್ನೊಳಗೊಂಡ ಭಾಗವನ್ನು ನೈಋತ್ಯ ರೈಲ್ವೆಗೆ ಸೇರಿಸುವ ಯೋಜನೆ ಇದೆ. ರೋಹಾದಿಂದ ತಿವಿಮ್‌ವರೆಗಿನ 38 ನಿಲ್ದಾಣಗಳನ್ನು ಒಳಗೊಂಡ ಮಾರ್ಗವನ್ನು ಕೇಂದ್ರ ರೈಲ್ವೆಯ ಅಡಿಯಲ್ಲಿ ತರಲು ಉದ್ದೇಶಿಸಲಾಗಿದೆ. ಮಡಗಾಂವ್ ನಿಲ್ದಾಣವನ್ನು ಯಾವ ವಲಯಕ್ಕೆ ಸೇರಿಸಬೇಕೆಂಬ ಕುರಿತು ಎರಡು ವಲಯಗಳ ನಡುವೆ ಇರುವ ಭಿನ್ನಾಭಿಪ್ರಾಯದಿಂದಾಗಿ ಹೊಸ ವಿಭಾಗ ರಚನೆಯ ಕ್ರಮ ತುಸು ವಿಳಂಬವಾಗಿದೆ.
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಅನ್ನು 1990 ರಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ ರೈಲ್ವೆ ಸಚಿವಾಲಯ ಮತ್ತು ನಾಲ್ಕು ರಾಜ್ಯಗಳು ಇದರಲ್ಲಿ ಷೇರುಗಳನ್ನು ಹೊಂದಿವೆ. ಕೇಂದ್ರ ರೈಲ್ವೆ ಸಚಿವಾಲಯ (ಶೇ. 66.79), ಮಹಾರಾಷ್ಟ್ರ (ಶೇ. 14.91), ಕರ್ನಾಟಕ (ಶೇ. 10.17), ಗೋವಾ ಹಾಗೂ ಕೇರಳ (ತಲಾ ಶೇ. 4.07).
ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ಸಂಪೂರ್ಣವಾಗಿ ವಿಲೀನಗೊಳಿಸಲು ಸಂಸ್ಥೆಯು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಒಡೆತನಕ್ಕೆ ಬರಬೇಕಿದೆ. ಲೋಕಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ರೈಲ್ವೆ ಸಚಿವಾಲಯವು ಈ ಪ್ರಕ್ರಿಯೆಯ ಪ್ರಸ್ತುತ ಸ್ಥಿತಿಯನ್ನು ಸ್ಪಷ್ಟಪಡಿಸಿದೆ.
ಷೇರುದಾರ ರಾಜ್ಯಗಳು ಅಗತ್ಯವಿರುವ ಬಂಡವಾಳ ವೆಚ್ಚಕ್ಕೆ ಕೊಡುಗೆ ನೀಡಬೇಕು ಅಥವಾ ತಮ್ಮ ಷೇರುಗಳನ್ನು ರೈಲ್ವೆ ಸಚಿವಾಲಯಕ್ಕೆ ವರ್ಗಾಯಿಸಬೇಕು ಎಂದು ಸೂಚಿಸಲಾಗಿದೆ. ಮಹಾರಾಷ್ಟ್ರ ತನ್ನ ಷೇರು ಹಿಂತೆಗೆತಕ್ಕೆ ಪ್ರತಿಯಾಗಿ ₹396.54 ಕೋಟಿ ಪರಿಹಾರ ಕೋರಿದೆ. ಕೇರಳ ತನ್ನ ಪಾಲಿನ (ಅಂದಾಜು ₹90 ಕೋಟಿ) ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಕರ್ನಾಟಕವು ಕೆಆರ್‌ಸಿಎಲ್‌ನಿಂದ ನಿರ್ಗಮಿಸಲು ವಿಭಿನ್ನ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದು, ಈ ಬೇಡಿಕೆಗಳ ಅಂತಿಮ ಪರಿಹಾರ ಇನ್ನೂ ಕಂಡುಕೊಳ್ಳಬೇಕಿದೆ.
ಮೂರು ದಶಕಗಳಷ್ಟು ಹಳೆಯದಾದ ಕೊಂಕಣ ರೈಲ್ವೆಯ ಹಳಿ ದ್ವಿಗುಣಗೊಳಿಸುವಿಕೆ, ಸುರಂಗ ನವೀಕರಣ ಮತ್ತು ಸುರಕ್ಷತಾ ಕಾರ್ಯಗಳಿಗೆ ಭಾರಿ ಬಂಡವಾಳದ ಅಗತ್ಯವಿದೆ. ಸಂಸ್ಥೆಯ ಸೀಮಿತ ಆದಾಯ ಮೂಲಗಳಿಂದಾಗಿ ಅಭಿವೃದ್ಧಿ ಕಾರ್ಯಗಳು ಮಂದಗತಿಯಲ್ಲಿದ್ದು, ವಿಲೀನದ ಮೂಲಕವೇ ಈ ಮೂಲಸೌಕರ್ಯಗಳನ್ನು ಆಧುನೀಕರಿಸಲು ಸಾಧ್ಯ.
ಪ್ರಸ್ತುತ ಈ ಮಾರ್ಗದಲ್ಲಿ ದಿನನಿತ್ಯ 114 ಮೇಲ್, ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತಿದ್ದು, ಬಹುತೇಕ ರೈಲುಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಯಾಣಿಕರ ನಿರಂತರ ಬೇಡಿಕೆಯನ್ನು ಪರಿಗಣಿಸಿ ಹೊಸ ರೈಲು ಸೇವೆ, ಸಂಚಾರ ವಿಸ್ತರಣೆ ಮತ್ತು ತಾತ್ಕಾಲಿಕ ಅಥವಾ ಶಾಶ್ವತ ಬೋಗಿಗಳ ಹೆಚ್ಚಳದ ಮೂಲಕ ಸೇವೆಯನ್ನು ಸುಧಾರಿಸುವ ಪ್ರಯತ್ನಗಳು ಮುಂದುವರಿದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ