ನಾಣ್ಯದಲ್ಲಿರೋ ಝಿಂಕ್ ದೇಹದ ದೃಢತೆಗೆ ಕಾರಣವಾಗುತ್ತಾ? ಹೀಗ್ ಯೋಚಿಸಿ ಬೇಕಾ ಬಿಟ್ಟು ನಾಣ್ಯ ನುಂಗಿದ ವ್ಯಕ್ತಿ!

Published : Feb 27, 2024, 05:56 PM IST
ನಾಣ್ಯದಲ್ಲಿರೋ ಝಿಂಕ್ ದೇಹದ ದೃಢತೆಗೆ ಕಾರಣವಾಗುತ್ತಾ? ಹೀಗ್ ಯೋಚಿಸಿ ಬೇಕಾ ಬಿಟ್ಟು ನಾಣ್ಯ ನುಂಗಿದ ವ್ಯಕ್ತಿ!

ಸಾರಾಂಶ

ದೇಹವನ್ನು ಸದೃಢವಾಗಿ ಬೆಳೆಸಿಕೊಳ್ಳಲು ಯುವಕರು ಏನೆಲ್ಲ ಸಾಹಸ ಮಾಡುತ್ತಾರೆ. ಮಾನಸಿಕವಾಗಿ ಅಸ್ವಸ್ಥನಾಗಿದ್ದ ಯುವಕನೋರ್ವ ಬಾಡಿ ಬಿಲ್ಡ್ ಮಾಡಿಕೊಳ್ಳಲು 39 ನಾಣ್ಯಗಳು ಹಾಗೂ 37 ಅಯಸ್ಕಾಂತಗಳನ್ನು ನುಂಗಿ ಜೀವಕ್ಕೆ ಅಪಾಯ ತಂದುಕೊಂಡ ಘಟನೆ ದೆಹಲಿಯಲ್ಲಿ ಜರುಗಿದೆ.   

ದೇಹವನ್ನು ಸದೃಢವಾಗಿ ಬೆಳೆಸಿಕೊಳ್ಳಲು ಏನೆಲ್ಲ ಕಸರತ್ತು ಮಾಡುವ ಯುವಮಂದಿಯನ್ನು ನೋಡಿದ್ದೇವೆ. ಜಿಮ್ ನಲ್ಲಿ ಬೆವರಿಳಿಸುವುದು, ದಿನಕ್ಕೆ ನಿಗದಿತ ಪ್ರಮಾಣದಲ್ಲಿ ಮೊಟ್ಟೆ ತಿನ್ನುವುದು, ಪ್ರೊಟೀನ್ ಪೌಡರ್ ಸೇರಿದಂತೆ ಹಲವು ರೀತಿಯ ಎನರ್ಜಿ ಬೂಸ್ಟರ್ ಗಳನ್ನು ಸೇವಿಸುವುದು ಕಂಡುಬರುತ್ತದೆ. ಆದರೆ, ಇತ್ತೀಚೆಗೆ ಓರ್ವ ಯುವಕ ನಾಣ್ಯಗಳು ಮತ್ತು ಮ್ಯಾಗ್ನೆಟ್ ಗಳನ್ನು ಸೇವನೆ ಮಾಡಿಬಿಟ್ಟಿದ್ದ. ಇವುಗಳಲ್ಲಿರುವ ಝಿಂಕ್ ಅಂಶ ದೇಹದ ಸದೃಢತೆಗೆ ಕಾರಣವಾಗುತ್ತದೆ ಎನ್ನುವ ತಪ್ಪು ಕಲ್ಪನೆಯಿಂದ ಆತ ಮಾಡಿರುವ ಕೆಲಸಕ್ಕೆ ಜೀವವೇ ಅಪಾಯದ ಅಂಚಿಗೆ ತಲುಪಿತ್ತು. ಆದರೆ, ವೈದ್ಯರ ಪರಿಶ್ರಮದಿಂದ ಪ್ರಾಣವುಳಿದಿದೆ. ರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದೆ. 26  ವರ್ಷದ ಈ ಯುವಕ ಬರೋಬ್ಬರಿ 39 ನಾಣ್ಯಗಳು, 37 ಮ್ಯಾಗ್ನೆಟ್ ಗಳನ್ನು ನುಂಗಿಬಿಟ್ಟಿದ್ದ. ಈತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ವರದಿಯಾಗಿದೆ. ಸ್ಕಿಜೋಫ್ರೇನಿಯಾಕ್ಕೆ ತುತ್ತಾಗಿರುವ ಯುವಕನಿಗೆ ಝಿಂಕ್ ಅಂಶವುಳ್ಳ ನಾಣ್ಯಗಳನ್ನು ಸೇವಿಸುವುದರಿಂದ ದೇಹ ಬೆಳೆಸಿಕೊಳ್ಳಲು ಅನುಕೂಲವಾಗುತ್ತದೆ ಎನ್ನುವ ತಪ್ಪು ಭಾವನೆ ಹೇಗೆ ಮೂಡಿತೋ ಗೊತ್ತಿಲ್ಲ. 

ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆ ವೈದ್ಯರಿಗೆ (Doctors) ಈ ವೈದ್ಯಕೀಯ ಪ್ರಕರಣ (Case) ಶಾಕ್ (Shock) ನೀಡಿದೆ. ಅವರು 26 ವರ್ಷದ ಯುವಕನ (Man) ಹೊಟ್ಟೆಯಿಂದ ಬರೋಬ್ಬರಿ 39 ನಾಣ್ಯಗಳು, 37 ಅಯಸ್ಕಾಂತಗಳನ್ನು ಶಸ್ತ್ರಚಿಕಿತ್ಸೆ (Surgery) ಮೂಲಕ ಹೊರತೆಗೆದಿದ್ದಾರೆ. ಡಾ. ತರುಣ್ ಮಿತ್ತಲ್ ನೇತೃತ್ವದ ಶಸ್ತ್ರಚಿಕಿತ್ಸಾ ತಜ್ಞರ ತಂಡ ಈ ಸಾಧನೆ ಮಾಡಿದೆ. ಅಸಲಿಗೆ ವೈದ್ಯರಿಗೂ ಇದೊಂದು ಸವಾಲೊಡ್ಡಿದ ಪ್ರಕರಣವಾಗಿತ್ತು. ಇದರ ಬಗ್ಗೆ ವೈದ್ಯರಾದ ಡಾ.ತರುಣ್ ಮಿತ್ತಲ್ ತಮ್ಮ ಅನುಭವಗಳನ್ನು ಶೇರ್ ಮಾಡಿಕೊಂಡಿದ್ದಾರೆ. ದೇಹಕ್ಕೆ ಒಗ್ಗದ, ದೇಹ (Body) ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಇಂತಹ ವಸ್ತುಗಳ ಸೇವನೆ ಆರೋಗ್ಯಕ್ಕೆ (Health) ಮಾರಕವಾಗುತ್ತದೆ ಎಂದವರು ತಿಳಿಸಿದ್ದಾರೆ. 

ಡಿಯರ್ ಲೇಡಿಸ್ ಇಲ್ಲಿ ಕೇಳಿ… ಈ ಸಣ್ಣ ಸಮಸ್ಯೆ ಹೃದಯಾಘಾತಕ್ಕೆ ಕಾರಣವಾಗಬಹುದು

ಅನಾರೋಗ್ಯಕ್ಕೆ ತುತ್ತಾಗಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನಿಗೆ ಪದೇ ಪದೆ ವಾಂತಿಯಾಗುತ್ತಿತ್ತು (Vomit) ಹಾಗೂ 20 ದಿನಗಳಿಂದ ತೀವ್ರವಾದ ಹೊಟ್ಟೆನೋವು (Pain) ಬಾಧಿಸುತ್ತಿತ್ತು. ಯಾವುದೇ ಆಹಾರವನ್ನು ಸೇವನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ರೋಗಿಯ ಮನೆಯವರು ಆತ ನಿರಂತರವಾಗಿ ನಾಣ್ಯ (Coins) ಮತ್ತು ಮ್ಯಾಗ್ನೆಟ್ (Magnet) ನುಂಗುತ್ತಿದ್ದುದನ್ನು ವೈದ್ಯರ ಗಮನಕ್ಕೆ ತಂದಿದ್ದರು. ಬಳಿಕ, ಸಿಟಿ ಸ್ಕ್ಯಾನ್ ಮಾಡಿದಾಗ ಸಣ್ಣ ಕರುಳಿನಲ್ಲಿ ಸಿಲುಕಿಕೊಂಡಿದ್ದ ನಾಣ್ಯಗಳು ಮತ್ತು ಮ್ಯಾಗ್ನೆಟ್ ಕಂಡುಬಂದಿದ್ದವು. 

ಕರುಳನ್ನು ಕೊರೆದ ಮ್ಯಾಗ್ನೆಟ್
ಡಾ.ತರುಣ್ ಮಿತ್ತಲ್ ತಂಡ ಸರಿಸುಮಾರು 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಇಷ್ಟು ಪ್ರಮಾಣದ ನಾಣ್ಯಗಳು ಹಾಗೂ ಅಯಸ್ಕಾಂತಗಳನ್ನು ಹೊರತೆಗೆದಿದ್ದಾರೆ. ಇದು ಸುಲಭವಾದ ಕ್ರಿಯೆಯೂ ಆಗಿರಲಿಲ್ಲ. ಒಂದೇ ಒಂದು ನಾಣ್ಯವನ್ನು ಉಳಿಸಿದರೂ ಆರೋಗ್ಯಕ್ಕೆ ಹಾನಿಯಾಗುತ್ತಿತ್ತು. ಸಣ್ಣ ಕರುಳಿನ (Small Intestine) ಒಳಗೆ ಎರಡು ಸುತ್ತುಗಳಲ್ಲಿ ಅವು ಸಿಲುಕಿದ್ದವು. ಅಯಸ್ಕಾಂತದ ಪರಿಣಾಮವಾಗಿ, ಕರುಳಿನಲ್ಲೇ ಸೆಳೆತ ಹಾಗೂ ಕೊರೆತ (Erosion) ಉಂಟಾಗಿದ್ದವು. ಕರುಳು ಸವೆತಕ್ಕೆ ತುತ್ತಾಗಿತ್ತು. ದೀರ್ಘವಾದ ಶಸ್ತ್ರಕ್ರಿಯೆ ಬಳಿಕ ಎಲ್ಲವನ್ನೂ ಹೊರತೆಗೆಯುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ. ಇವುಗಳಲ್ಲಿ 1,2,5 ರೂಪಾಯಿ ನಾಣ್ಯಗಳು ಸೇರಿದಂತೆ ಹಲವು ವಿವಿಧ ಆಕಾರದ ಅಯಸ್ಕಾಂತಗಳಿದ್ದವು. ಶಸ್ತ್ರಕ್ರಿಯೆ ಬಳಿಕವೂ ಹೊಟ್ಟೆಯ (Stomach) ಆರೋಗ್ಯ ಸುಧಾರಿಸಲು ಕೆಲ ಸಮಯ ಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. 

ನೀವು ಕೂಡ ರೀಲ್ಸ್ ಗೆ ಅಡಿಕ್ಟ್ ಆಗಿದ್ದೀರಾ? ಈ ರೀತಿಯಾಗಿ ಸಮಸ್ಯೆ ನಿವಾರಿಸಿ…

ಜೀವಕ್ಕೆ ಮಾರಕ
ಡಾ. ಮಿತ್ತಲ್ ಪ್ರಕಾರ, ಇಂತಹ ವಸ್ತುಗಳನ್ನು ಯಾವುದೇ ಕಾರಣಕ್ಕೂ ದೇಹದ ಒಳಗೆ ಸೇರಲು ಬಿಡಬಾರದು. ಜೀವಕ್ಕೆ (Life) ಅಪಾಯಕಾರಿಯಾಗುವ ಇಂತಹ ಕ್ರಿಯೆಗಳಿಂದ ಯಾವುದೇ ರೀತಿ ಪ್ರಯೋಜನವಿಲ್ಲ. ನಾಣ್ಯಗಳಲ್ಲಿರುವ ಝಿಂಕ್ ಅಂಶ ದೇಹಕ್ಕೆ ಈ ಮಾದರಿಯಲ್ಲಿ ಸೇರಲು ಸಾಧ್ಯವಿಲ್ಲ. ಈ ಯುವಕ ಮಾನಸಿಕ ರೋಗಿಯಾಗಿರುವುದರಿಂದ ಹಾಗೆ ಭಾವಿಸಿರುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಯಾರೂ ಸಹ ಇಂತಹ ತಪ್ಪು ಭಾವನೆಗಳನ್ನು ಹೊಂದಬಾರದು ಎಂದು ತಿಳಿಸಿದ್ದಾರೆ.  ಈ ಕುರಿತು ಜನರಲ್ಲಿ ಜಾಗೃತಿ (Awareness) ಮೂಡಿಸುವ ಅಗತ್ಯವಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ. ಶಸ್ತ್ರಕ್ರಿಯೆ ಬಳಿಕ ವಾರಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ಯುವಕನನ್ನು ಮನೆಗೆ ಕಳುಹಿಸಲಾಗಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?