ಅಣ್ಣನಿಗೆ ಕಿಡ್ನಿ ನೀಡಲು ಅವರಿಂದ 40 ಲಕ್ಷ ರೂ. ಹಣ ಪಡೆಯುವಂತೆ ಪತಿ ಒತ್ತಡ ಹೇರಿದ್ದ. ಆದರೆ, ಪತ್ನಿ ಇದಕ್ಕೊಪ್ಪದ ಕಾರಣ ವಾಟ್ಸಾಪ್ ಸಂದೇಶದ ಮೂಲಕ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಲಖನೌ (ಡಿಸೆಂಬರ್ 22, 2023): ಉತ್ತರ ಪ್ರದೇಶದ ಗೊಂಡಾ ಮೂಲದ 40 ವರ್ಷದ ಮಹಿಳೆಯೊಬ್ಬರು ತನ್ನ ಅಣ್ಣನಿಗೆ ಕಿಡ್ನಿ ದಾನ ಮಾಡಿದ್ದಕ್ಕೆ ಸಿಟ್ಟಿಗೆದ್ದ ಪತಿ ತ್ರಿವಳಿ ತಲಾಖ್ ನೀಡಿರುವ ಘಟನೆ ನಡೆದಿದೆ.
ಅಣ್ಣನಿಗೆ ಕಿಡ್ನಿ ನೀಡಲು ಅವರಿಂದ 40 ಲಕ್ಷ ರೂ. ಹಣ ಪಡೆಯುವಂತೆ ಪತಿ ಒತ್ತಡ ಹೇರಿದ್ದ ಆದರೆ, ಪತ್ನಿ ಇದಕ್ಕೊಪ್ಪದ ಕಾರಣ ಆಕೆಯ ಪತಿ ವಾಟ್ಸಾಪ್ ಸಂದೇಶದ ಮೂಲಕ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಪತಿ ಅಬ್ದುಲ್ ರಶೀದ್ (44) ವಿರುದ್ಧ ತರನ್ನುಮ್ ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನು ಓದಿ: ಐಬ್ರೋ ಮಾಡಿಸಿಕೊಂಡ ಪತ್ನಿಗೆ ವಿಡಿಯೋ ಕಾಲ್‌ನಲ್ಲೇ ತಲಾಖ್ ನೀಡಿದ ಪತಿ!
ವರದಕ್ಷಿಣೆ ನಿಷೇಧ ಕಾಯ್ದೆ ಮತ್ತು ಐಪಿಸಿಯ ಇತರ ಸೆಕ್ಷನ್‌ಗಳ ಜೊತೆಗೆ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರ ಅಡಿಯಲ್ಲಿ ಅಬ್ದುಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಲ್ ಅಧಿಕಾರಿ ಶಿಲ್ಪಾ ವರ್ಮಾ ತಿಳಿಸಿದ್ದಾರೆ. 4 ವರ್ಷಗಳ ಹಿಂದೆ ಭಾರತದಲ್ಲಿ ತ್ರಿವಳಿ ತಲಾಖ್ ಪದ್ಧತಿಯನ್ನು ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸಲಾಯಿತು. 2019 ರ ಕಾಯ್ದೆಯು 3 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಒದಗಿಸುತ್ತದೆ.
ತರನ್ನುಮ್ ಸಹೋದರ ಮೊಹಮ್ಮದ್ ಶಾಕಿರ್ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು ಮತ್ತು ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತನ್ನ ಸಹೋದರನ ಜೀವ ಉಳಿಸಲು, ಆಕೆ ತನ್ನ ಕಿಡ್ನಿಯನ್ನು ದಾನ ಮಾಡಲು ಒಪ್ಪಿಕೊಂಡಳು. ಆದರೂ, ಕಿಡ್ನಿ ಕೊಡುವುದರ ಬದಲಾಗಿ ಸಹೋದರನಿಂದ 40 ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳುವಂತೆ ಅಬ್ದುಲ್ ತನ್ನ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು ಎಂದು ತರನ್ನುಮ್ ಹೇಳಿದರು. ಇದಕ್ಕೆ ನಾನು ನಿರಾಕರಿಸಿದಾಗ, ಅವರು ವಾಟ್ಸಾಪ್ ಮೂಲಕ 'ತ್ರಿವಳಿ ತಲಾಖ್' ಎಂದು ಹೇಳಿದ್ದಾನೆ ಎಂದೂ ಮಹಿಳೆ ಹೇಳಿಕೊಂಡಿದ್ದಾರೆ.
ಬ್ಯೂಟಿ ಪಾರ್ಲರ್‌ನಲ್ಲಿ ಐಬ್ರೋ ಮಾಡಿಸಿಕೊಂಡಿದ್ದಕ್ಕೆ ತ್ರಿವಳಿ ತಲಾಕ್ ನೀಡಿದ ಪತಿ!
ಇನ್ನೊಂದೆಡೆ, ಪತ್ನಿ ಅನುಮತಿ ಕೇಳದೆ ಐಬ್ರೋ ಮಾಡಿಸಿಕೊಂಡಿದ್ದಾಳೆ ಎಂದು ಕೋಪಗೊಂಡ ಪತಿ ಆಕೆಗೆ ವಿಡಿಯೋ ಕಾಲ್‌ನಲ್ಲೇ ತಲಾಖ್ ನೀಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಐಬ್ರೋ ಮಾಡಿಸಿದ ಕಾರಣಕ್ಕೆ ಆಕೆಗೆ ಮೂರು ಬಾರಿ ನಿಷೇಧಿತ ತಲಾಖ್ ಹೇಳಿದ ಪತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಯಾಗ್‌ರಾಜ್ ನಿವಾಸಿಯಾಗಿರುವ ಮಹಮ್ಮದ್ ಸಲೀಂ ಸದ್ಯ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದು, ಆತನ ಪತ್ನಿ ಗುಲ್ಸಾಬಾ ಕಾನ್ಪುರದಲ್ಲಿ ವಾಸವಿದ್ದಾಳೆ. ಹೀಗಿರುವಾಗ ಗುಲ್ಸಾಬಾ ಜತೆ ಸಲೀಂ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಾಗ ಆಕೆ ಐಬ್ರೋ ಮಾಡಿಸಿದ್ದನ್ನು ನೋಡಿದದ್ದ ಘಟನೆ ಇತ್ತೀಚೆಗೆ ನಡೆದಿತ್ತು.