
ನವದೆಹಲಿ (ಡಿಸೆಂಬರ್ 22, 2023): ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 30 ರಂದು ಐದು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಅದರೊಂದಿಗೆ ಎರಡು ಅಮೃತ್ ಭಾರತ್ ರೈಲುಗಳ ಉದ್ಘಾಟನೆಯೂ ನಡೆಯಲಿದೆ, ಈ ರೈಲುಗಳ ಪೈಕಿ ಬೆಂಗಳೂರಿಗೂ 2 ಟ್ರೈನ್ ಸಂಚರಿಸಲಿದೆ ಅನ್ನೋದು ವಿಶೇಷ.
ಅಮೃತ್ ಭಾರತ್ ರೈಲುಗಳು ಪುಶ್ ಮತ್ತು ಪುಲ್ ತಂತ್ರಜ್ಞಾನವನ್ನು ಆಧರಿಸಿದೆ. ಇದು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ರೈಲುಗಳ ಸರಾಸರಿ ವೇಗವನ್ನು ಹೆಚ್ಚಿಸುತ್ತದೆ. ಇನ್ನು, ಪ್ರಮುಖವಾಗಿ ಪ್ರಧಾನಿ ಮೋದಿ ಅಯೋಧ್ಯೆಯ ಹೊಸ ರೈಲು ನಿಲ್ದಾಣ ಮತ್ತು ಮರ್ಯಾದಾ ಪುರುಷೋತ್ತಮ ಶ್ರೀ ರಾಮ ವಿಮಾನ ನಿಲ್ದಾಣವನ್ನು ಸಹ ಅದೇ ದಿನ ಉದ್ಘಾಟಿಸಲಿದ್ದಾರೆ.
ಇದನ್ನು ಓದಿ: ಅಯೋಧ್ಯೆ ರಾಮನ ವಿಗ್ರಹ ಜನವರಿ ಮೊದಲ ವಾರದಲ್ಲಿ ಅಂತಿಮ: ಆಯ್ಕೆಯಾಗುತ್ತಾ ಕನ್ನಡಿಗರು ಕೆತ್ತಿರೋ ವಿಗ್ರಹ?
ಡಿಸೆಂಬರ್ 30 ರಂದು, ಪ್ರಧಾನಿ ಮೋದಿ ಅಯೋಧ್ಯೆಗೆ ಭೇಟಿ ನೀಡಲಿದ್ದು, ಅಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಎಲ್ಲ ಹೊಸ ರೈಲುಗಳು, ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಿಗೆ ಹಸಿರು ನಿಶಾನೆ ಸಿಗಲಿದೆ. ಪ್ರಧಾನಿ ಮೋದಿ ಅಯೋಧ್ಯೆ - ಆನಂದ್ ವಿಹಾರ್, ನವದೆಹಲಿ - ವೈಷ್ಣೋದೇವಿ, ಅಮೃತಸರ - ನವದೆಹಲಿ, ಜಲ್ನಾ - ಮುಂಬೈ ಮತ್ತು ಕೊಯಮತ್ತೂರು - ಬೆಂಗಳೂರು ವಂದೇ ಭಾರತ್ ರೈಲುಗಳನ್ನು ಒಳಗೊಂಡಂತೆ 8 ಹೊಸ ರೈಲುಗಳಿಗೆ ಚಾಲನೆ ನೀಡಲಿದ್ದಾರೆ.
ಹೆಚ್ಚುವರಿಯಾಗಿ, ದೆಹಲಿ - ದರ್ಭಾಂಗ ಮತ್ತು ಮಾಲ್ಡಾ - ಬೆಂಗಳೂರು ಅಮೃತ್ ಭಾರತ್ ರೈಲುಗಳನ್ನು ಸಹ ಈ ವೇಳೆ ಚಾಲನೆ ನೀಡಲಾಗುತ್ತದೆ. ಕಾರ್ಮಿಕ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು, ಅಮೃತ್ ಭಾರತ್ ರೈಲುಗಳು ಸಂಚರಿಸುತ್ತಿದ್ದು, ಇವುಗಳ ಸಂಖ್ಯೆ 150 ಕ್ಕೆ ತಲುಪಿದೆ. ಈ ರೈಲುಗಳು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಒಡಿಶಾ ಮುಂತಾದ ರಾಜ್ಯಗಳಿಗೆ ತೆಲಂಗಾಣ, ದೆಹಲಿ, ಪಂಜಾಬ್, ಗುಜರಾತ್, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಕ್ಕೆ ಸಂಪರ್ಕ ನೀಡುತ್ತವೆ.
ಅಯೋಧ್ಯೆ ಹೋರಾಟ ಕುರಿತ ಚಿತ್ರ ‘695’ ಜನವರಿ 19 ರಂದು ತೆರೆಗೆ: ರಾಮಾಯಣ ಖ್ಯಾತಿಯ ಅರುಣ್ ಗೋವಿಲ್ ನಟನೆ
ಪುಲ್ - ಪುಶ್ ತಂತ್ರಜ್ಞಾನದಿಂದಾಗಿ, ಅವುಗಳ ವೇಗವು ರಾಜಧಾನಿ ಮತ್ತು ಶತಾಬ್ದಿ ರೈಲುಗಳನ್ನೂ ಮೀರಿಸುವ ನಿರೀಕ್ಷೆಯಿದೆ. ಆದರೆ, ಎಕ್ಸ್‌ಪ್ರೆಸ್ ರೈಲುಗಳಿಗೆ ಹೋಲಿಸಿದರೆ ಅಮೃತ್ ಭಾರತ್ ರೈಲುಗಳ ದರವು ಶೇಕಡಾ 10 ರಿಂದ 15 ರಷ್ಟು ಹೆಚ್ಚಾಗಿರುತ್ತದೆ ಎಂದು ವರದಿಗಳು ಹೇಳುತ್ತಿವೆ.
ಈ ಮಧ್ಯೆ, ವಂದೇ ಭಾರತ್ ರೈಲುಗಳಿಗೂ ಅಯೋಧ್ಯೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಅಲ್ಲದೆ, ಅಯೋಧ್ಯೆ ವಿಮಾನ ನಿಲ್ದಾಣದ ಉದ್ಘಾಟನೆ ಡಿಸೆಂಬರ್ 30 ರಂದು ನಡೆಯಲಿದ್ದು, ಜನವರಿ 5 ರಿಂದ ಇಲ್ಲಿ ವಿಮಾನಗಳು ಸಂಚರಿಸುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ