ಬಿಜೆಪಿ ಪರ ಬಿಎಸ್‌ಎಫ್‌ ಕೆಲಸ; ಮತ ಹಾಕದಂತೆ ಗಡಿ ಭಾಗದ ಜನರಿಗೆ ಬೆದರಿಕೆ: ಮಮತಾ ಬ್ಯಾನರ್ಜಿ ಆರೋಪ

By Kannadaprabha NewsFirst Published Jun 27, 2023, 11:20 AM IST
Highlights

ಬಿಎಸ್‌ಎಫ್‌ನ ಕೆಲ ಅಧಿಕಾರಿಗಳು ಗಡಿಭಾಗದ ಪ್ರದೇಶಗಳಿಗೆ ಭೇಟಿ ನೀಡಿ ಅವರಿಗೆ ಮತ ಹಾಕದಂತೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇಂಥ ಬೆದರಿಕೆಗಳಿಗೆ ಹೆದರದೆ ಧೈರ್ಯವಾಗಿ ಮತ ಹಾಕುವಂತೆ ಮತದಾರರಿಗೆ ನಾನು ಕರೆ ಕೊಡುತ್ತಿದ್ದೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೂಚ್‌ಬಿಹಾರ್‌ (ಜೂನ್ 27, 2023): ಮುಂಬರುವ ಪಂಚಾಯತ್‌ ಚುನಾವಣೆ ವೇಳೆ ಮತಹಾಕದಂತೆ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಗಡಿ ಭಾಗದ ಮತದಾರರರಿಗೆ ಬೆದರಿಕೆ ಹಾಕುತ್ತಿದೆ ಎಂಬ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ಇಲ್ಲಿ ಪಕ್ಷದ ಅಭ್ಯರ್ಥಿಗಳ ಪ್ರಚಾರ ಚುನಾವಣಾ ಭಾಷಣ ಮಾಡಿದ ಮಮತಾ, ಬಿಎಸ್‌ಎಫ್‌ನ ಕೆಲ ಅಧಿಕಾರಿಗಳು ಗಡಿಭಾಗದ ಪ್ರದೇಶಗಳಿಗೆ ಭೇಟಿ ನೀಡಿ ಅವರಿಗೆ ಮತ ಹಾಕದಂತೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇಂಥ ಬೆದರಿಕೆಗಳಿಗೆ ಹೆದರದೆ ಧೈರ್ಯವಾಗಿ ಮತ ಹಾಕುವಂತೆ ಮತದಾರರಿಗೆ ನಾನು ಕರೆ ಕೊಡುತ್ತಿದ್ದೇನೆ. ಅಲ್ಲದೆ ಹೀಗೆ ಬೆದರಿಕೆ ಹಾಕುವ ಬಿಎಸ್‌ಎಫ್‌ ಅಧಿಕಾರಿಗಳ ಮೇಲೆ ನಿಗಾ ಇಡುವಂತೆ ಪೊಲೀಸರಿಗೂ ಸೂಚಿಸಿದ್ದೇನೆ ಎಂದು ಮಮತಾ ಹೇಳಿದ್ದಾರೆ.

2021ರಲ್ಲಿ ಕೇಂದ್ರ ಸರ್ಕಾರ ಬಿಎಸ್‌ಎಫ್‌ ಕಾಯ್ದೆಗೆ ತಿದ್ದುಪಡಿ ತಂದು, ಬಿಎಸ್‌ಎಫ್‌ ಅಧಿಕಾರಿಗಳಿಗೆ ಗಡಿಯಿಂದ 50 ಕಿ.ಮೀ. ವ್ಯಾಪ್ತಿಯಲ್ಲಿನ ಯಾವುದೇ ಜಾಗದಲ್ಲಿ ತಪಾಸಣೆ ಮಾಡುವ, ವಸ್ತುಗಳನ್ನು ವಶಪಡಿಸಿಕೊಳ್ಳುವ ಮತ್ತು ಯಾರನ್ನು ಬೇಕಾದರೂ ಬಂಧಿಸುವ ಅಧಿಕಾರ ನೀಡಿತ್ತು. ಈ ಹಿಂದೆ 15 ಕಿ.ಮೀ ಇದ್ದ ವ್ಯಾಪ್ತಿಯನ್ನು 50 ಕಿ.ಮೀಗೆ ವಿಸ್ತರಿಸಿದ್ದಕ್ಕೆ ಬಂಗಾಳ ಸರ್ಕಾರ ತೀವ್ರ ವಿರೋಧ ಹೊಂದಿದೆ.

ಇದನ್ನು ಓದಿ: ದೀದಿ ರಾಜ್ಯದಲ್ಲಿ ಮುಕ್ತವಾಯ್ತು ಕಾಂಗ್ರೆಸ್‌: 'ಕೈ' ಏಕೈಕ ಶಾಸಕ ಟಿಎಂಸಿಗೆ ಸೇರ್ಪಡೆ

ಮೇಘಾಲಯ: ಬಿಎಸ್‌ಎಫ್‌ ಯೋಧರ ಮೇಲೆ ಕಳ್ಳಸಾಗಣೆ ನಿರತ ಗ್ರಾಮಸ್ಥರ ದಾಳಿ
ಶಿಲ್ಲಾಂಗ್‌: ಮಣಿಪುರದಲ್ಲಿ ಮಹಿಳೆಯರ ಗುಂಪೊಂದು ಯೋಧರ ಮೇಲೆ ದಾಳಿ ಮಾಡಿ ಉಗ್ರರನ್ನು ಬಿಡಿಸಿಕೊಂಡ ಹೋದ ಬೆನ್ನಲ್ಲೇ, ನೆರೆಯ ಮೇಘಾಲಯದಲ್ಲೂ ಬಿಎಸ್‌ಎಫ್‌ ಯೋಧರ ಮೇಲೆ ಗ್ರಾಮಸ್ಥರ ತಂಡವೊಂದು ದಾಳಿ ನಡೆಸಿದೆ. ಘಟನೆಯಲ್ಲಿ ಇಬ್ಬರು ಯೋಧರು ಮತ್ತು ಇತರೆ 6 ಜನರು ಗಾಯಗೊಂಡಿದ್ದಾರೆ. 

ಇಲ್ಲಿನ ಉಮ್ಸಿಯೇಮ್‌ ಗ್ರಾಮದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದ್ದು ಸ್ಥಳೀಯ ಪೊಲೀಸರು ಮತ್ತು ಹಿರಿಯ ಬಿಎಸ್‌ಎಫ್‌ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ‘ಕಳೆದ ಕೆಲ ದಿನಗಳಿಂದ ಬಾಂಗ್ಲಾ ದೇಶಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಬಟ್ಟೆ ಸೇರಿ ಅಪಾರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ’ ಎಂದು ಮೇಘಾಲಯದ ಬಿಎಸ್‌ಎಫ್‌ ಇನ್ಸ್‌ಪೆಕ್ಟರ್‌ ಪ್ರದೀಪ್‌ ಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರ ಹಿನ್ನೆಲೆ 36 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ರದ್ದು: ಹೈಕೋರ್ಟ್‌ ಆದೇಶ

click me!