ಕೋಲ್ಕತಾ: ನಿಷೇಧವಿದ್ದರೂ ಪೈಲಟ್ ಕಣ್ಣಿಗೆ ಬಿತ್ತು ಲೇಸರ್ ಕಿರಣ, ದೃಷ್ಟಿ ಮಂಜಾಗಿ ಬಾನಲ್ಲೇ ಸುತ್ತಿದ ವಿಮಾನ!

Gowthami K   | Kannada Prabha
Published : Aug 10, 2026, 10:20 AM IST
A laser beam reportedly hit a Malaysia Airlines flight during its landing approach at Kolkata airport

ಸಾರಾಂಶ

ಕೋಲ್ಕತಾದಲ್ಲಿ ಲ್ಯಾಂಡಿಂಗ್ ವೇಳೆ ಪೈಲಟ್ ಕಣ್ಣಿಗೆ ಲೇಸರ್ ಬೆಳಕು ಬಿದ್ದಿದ್ದರಿಂದ ಮಲೇಷ್ಯಾ ಏರ್‌ಲೈನ್ಸ್ ವಿಮಾನವು ಅಪಾಯದಿಂದ ಪಾರಾಗಿದೆ. ಮತ್ತೊಂದು ಘಟನೆಯಲ್ಲಿ, ಪುಣೆಯ ಬಾರಾಮತಿ ಏರ್‌ಸ್ಟ್ರಿಪ್‌ನಲ್ಲಿ ತರಬೇತಿ ವಿಮಾನ ಪತನಗೊಂಡಿದ್ದು, ಇದೇ ಸ್ಥಳದಲ್ಲಿ ಈ ಹಿಂದೆ ಅಜಿತ್ ಪವಾರ್ ಸಹಿತ ಐವರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು.

ಕೋಲ್ಕತಾ: ಕೌಲಾಲಂಪುರದಿಂದ 159 ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ಮಲೇಷ್ಯಾ ಏರ್‌ಲೈನ್ಸ್‌ನ ಎಂಎಚ್‌-184 ವಿಮಾನವು ಇಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವ ವೇಳೆ ಪೈಲಟ್‌ಗೆ ಲೇಸರ್ ಬೆಳಕು ಎದುರಾಗಿ ತೊಂದರೆ ಅನುಭವಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಶನಿವಾರ ರಾತ್ರಿ 11:20ಕ್ಕೆ ವಿಮಾನ ಲ್ಯಾಂಡ್‌ ಆಗಬೇಕಿತ್ತು. ಆದರೆ, ರನ್‌ವೇಯಿಂದ ಸುಮಾರು 8 ನಾಟಿಕಲ್ ಮೈಲಿ ದೂರದಲ್ಲಿದ್ದಾಗ, ಮಧ್ಯಮಗ್ರಾಮ್-ಬಾರಾಸತ್ ಕಡೆಯಿಂದ ಕಾಕ್‌ಪಿಟ್‌ಗೆ ತೀವ್ರವಾದ ಲೇಸರ್ ಬೆಳಕು ಬಿದ್ದಿರುವುದನ್ನು ಪೈಲಟ್ ಗಮನಿಸಿದ್ದಾರೆ. ಈ ಹಠಾತ್ ಲೇಸರ್ ಬೆಳಕಿನಿಂದಾಗಿ ಪೈಲಟ್‌ಗೆ ಕ್ಷಣಕಾಲ ದೃಷ್ಟಿ ಮಂಜಾಗಿ, ದಿಕ್ಕು ತೋಚದಂತಾಯಿತು. ಇದರಿಂದಾಗಿ ಗಗನದಲ್ಲೇ ಕೆಲವು ಸುತ್ತುಗಳನ್ನು ಹೊಡೆಯಬೇಕಾಯಿತು.

ಬಳಿಕ ಪೈಲಟ್ 2ನೇ ಬಾರಿ ಪ್ರಯತ್ನಿಸಿ, ರಾತ್ರಿ 11:25ರ ಸುಮಾರಿಗೆ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಘಟನೆ ಸಂಬಂಧ, ವಿಮಾನ ನಿಲ್ದಾಣ ಪ್ರಾಧಿಕಾರವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಏರ್ಪೋರ್ಟ್‌ ಸುತ್ತಮುತ್ತ ಲೇಸರ್‌ ಬಳಕೆಯನ್ನು ನಿಷೇಧಿಸಿರುವುದರಿಂದ, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಕಳೆದ ವರ್ಷ ಕೂಡ ದುರ್ಗಾ ಪೂಜೆ ವೇಳೆ ಬಳಸಲಾದ ಲೇಸರ್ ದೀಪಗಳು ಪೈಲಟ್‌ಗಳಿಗೆ ಆತಂಕವನ್ನುಂಟು ಮಾಡಿದ್ದವು.

ಬಾರಾಮತಿ ಏರ್‌ಸ್ಟ್ರಿಪ್‌ನಲ್ಲಿ ವಿಮಾನ ಪತನ, ಅಜಿತ್‌ ಪವಾರ್‌ ವಿಮಾನ ಇಲ್ಲೇ ಪತನ!

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ಏರ್‌ಸ್ಟ್ರಿಪ್‌ನಲ್ಲಿ ಖಾಸಗಿ ಕಂಪನಿಯೊಂದರ ತರಬೇತಿ ವಿಮಾನ ಇಂದು ಮಧ್ಯಾಹ್ನ ಲ್ಯಾಂಡಿಂಗ್ ವೇಳೆ ಪತನಗೊಂಡಿದೆ.

ಕಳೆದ ಜನವರಿಯಲ್ಲಿ ಇದೇ ಏರ್‌ಸ್ಟ್ರಿಪ್‌ನಲ್ಲಿ ಸಂಭವಿಸಿದ್ದ ವಿಮಾನ ದುರಂತದಲ್ಲಿ ಅಂದಿನ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟಿದ್ದರು. ಅದು ಹಸಿರಾಗಿರುವಂತೆಯೇ ಮಧ್ಯಾಹ್ನ 12.35ಕ್ಕೆ ಈ ಘಟನೆ ನಡೆದಿದೆ.

ತರಬೇತಿಯ ಸಮಯದಲ್ಲಿ ಪೈಲಟ್ ಮತ್ತು ಕೆಡೆಟ್ ಇದ್ದ ಕಾರ್ವರ್ ಏವಿಯೇಷನ್‌ನ VT-SEX ವಿಮಾನವು ರನ್‌ವೇ ದಾಟಿ ಹೋಗಿ ಸ್ವಲ್ಪ ದೂರದಲ್ಲಿ ವಿಮಾನ ಪತನಗೊಂಡಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ವಿಮಾನಕ್ಕೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜನವರಿಯಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ಬಾರಾಮತಿ ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು.

66 ವರ್ಷದ ಎನ್‌ಸಿಪಿ ನಾಯಕ ಅಜಿತ್ ಪವಾರ್, ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ, ಸಹಾಯಕ ಹಾಗೂ ಪೈಲಟ್ ಸುಮಿತ್ ಕಪೂರ್ ಮತ್ತು ಸಹ ಪೈಲಟ್ ಶಾಂಭವಿ ಪಾಠಕ್ ಇದ್ದ ಲಿಯರ್‌ಜೆಟ್ 45 ವಿಮಾನ ಪತನಗೊಂಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಹುಲ್ ಗಾಂಧಿ ಬಗ್ಗೆ ಶಶಿ ತರೂರ್ ಹೇಳಿಕೆ; ಕಾಂಗ್ರೆಸ್‌ನಲ್ಲಿ ಅಸಮಾಧಾನ! ಬಿಜೆಪಿಗೆ ಖುಷಿ ನೀಡುವ ಮಾತು ಬೇಡ ಎಂದ ವೇಣುಗೋಪಾಲ್
300 ಅಡಿ ಕುಸಿದ ಏರ್‌ ಇಂಡಿಯಾ, ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಗಾಯ, ಪೈಲಟ್‌ ಡ್ರಗ್‌ ಸೇವಿಸಿದ್ದು ಪತ್ತೆ!