ಮುಂಬೈ(ಜೂ.24): ಡೆಲ್ಟಾಪ್ಲಸ್ ಕೊರೋನಾ ರೂಪಾಂತರಿ ತಳಿ ಭಾರತದ ವಿವಿಧ ಭಾಗಗಳಲ್ಲಿ ಈಗ ಸದ್ದು ಮಾಡಲು ಆರಂಭಿಸಿರಬಹುದು. ಆದರೆ ಮಹಾರಾಷ್ಟ್ರದಲ್ಲಿ ಏಪ್ರಿಲ್ ತಿಂಗಳಲ್ಲೇ ಈ ತಳಿ ಸೃಷ್ಟಿಯಾಗಿತ್ತು.
ಆದರೆ ಅದು ಡೆಲ್ಟಾಪ್ಲಸ್ ರೂಪಾಂತರಿ ಎಂಬುದು ಇದೀಗ ಜೆನೋಮ್ ಸೀಕ್ವೆನ್ಸಿಂಗ್ ಬಳಿಕ ಬೆಳಕಿಗೆ ಬಂದಿದೆ. ಅಂದರೆ ಕಳೆದ ಎರಡೂವರೆ ತಿಂಗಳಿನಿಂದಲೇ ಅದು ಮಹಾರಾಷ್ಟ್ರದಲ್ಲಿ ಹಬ್ಬತೊಡಗಿದೆ ಎಂದು ಖಚಿತಪಟ್ಟಿದೆ.
ಮಹಾರಾಷ್ಟ್ರದಲ್ಲಿ ಇದುವರೆಗೆ ಒಟ್ಟು 21 ಡೆಲ್ಟಾಪ್ಲಸ್ ರೂಪಾಂತರಿ ತಳಿ ಪತ್ತೆಯಾಗಿದೆ. ಇದರಲ್ಲಿ 78 ವರ್ಷದ ಒಬ್ಬ ವೃದ್ಧ, ಮದುವೆಗೆ ಹಾಜರಾಗಿದ್ದ ಒಬ್ಬ ಹಾಲು ಮಾರಾಟಗಾರನ ಪತ್ನಿ, ಸೂರತ್‌ಗೆ ಹೋಗಿ ಬಂದಿದ್ದ ಇಬ್ಬರು ಚಿನ್ನಾಭರಣ ವ್ಯಾಪಾರಿಗಳು ಸೇರಿದ್ದಾರೆ. ಇವರೆಲ್ಲರೂ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೊರೋನಾ ಸೋಂಕಿಗೆ ತುತ್ತಾದವರು. ಅವರಲ್ಲಿ ಕಾಣಿಸಿಕೊಂಡಿದ್ದ ಕೊರೋನಾದ ವಂಶವಾಹಿಗಳನ್ನು ವಿಶ್ಲೇಷಣೆಗೆ (ಜಿನೋಮ್ ಸೀಕ್ವೆನ್ಸಿಂಗ್)ಒಳಪಡಿಸಿದ ವೇಳೆ ಅವರೆಲ್ಲಾ ಡೆಲ್ಟಾಪ್ಲಸ್‌ನಿಂದ ಸೋಂಕಿತರಾಗಿದ್ದರು ಎಂದು ದೃಢಪಟ್ಟಿದೆ.
ಮಲ್ಯ,ನೀಮೋ, ಚೋಕ್ಸಿಯಿಂದ 9000 ಕೋಟಿ ರು. ವಸೂಲಿ
ಏ.5 ಹಾಗೂ ಏ.15ರಂದು ಮುಂಬೈನಲ್ಲಿ ಸೋಂಕಿತರಾಗಿದ್ದ ಇಬ್ಬರು ವ್ಯಕ್ತಿಗಳು ದೇಶದಲ್ಲಿ ಡೆಲ್ಟಾಪ್ಲಸ್‌ಗೆ ತುತ್ತಾದ ಮೊದಲಿಗರು. ಬಳಿಕ ಇವರು ಗುಣಮುಜರಾಗಿದ್ದಾರೆ. ನಂತರ ಇದೀಗ ಈಗ ಡೆಲ್ಟಾಪ್ಲಸ್ ಸೋಂಕು ಮಹಾರಾಷ್ಟ್ರದ 6 ಜಿಲ್ಲೆಗಳಲ್ಲಿ ವರದಿಯಾಗಿವೆ. ರತ್ನಾಗಿರಿಯಲ್ಲಿ 9 ಹಾಗೂ ಜಲಗಾಂವ್‌ನಲ್ಲಿ 7 ಪ್ರಕರಣಗಳಿವೆ. ಮೇನಲ್ಲೇ ಬಹುತೇಕರಿಗೆ ಸೋಂಕು ಬಂದಿತ್ತು. ಆದರೆ ಇವರ ಸಂಪರ್ಕಿತರ ಪತ್ತೆ ಮತ್ತು ಪರೀಕ್ಷೆ ಕೆಲಸ ಈಗ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.