ಕರ್ನಾಟಕಕ್ಕೆ ನೀರು ಬಂದ್‌: ಮಹಾರಾಷ್ಟ್ರ ಸಚಿವ ಶಂಭುರಾಜ್‌ ಧಮಕಿ

By Govindaraj SFirst Published Dec 22, 2022, 4:43 AM IST
Highlights

ಬೆಳಗಾವಿ ಗಡಿ ವಿಷಯದಲ್ಲಿ ಸಂಯಮ ಕಾಪಾಡಿಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಲಹೆ ಹೊರತಾಗಿಯೂ, ಪ್ರಚೋದನಾಕಾರಿ ಹೇಳಿಕೆ ನೀಡುವುದನ್ನು ಮುಂದುವರೆಸಿರುವ ಮಹಾರಾಷ್ಟ್ರ ಸರ್ಕಾರ.

ನಾಗಪುರ (ಡಿ.22): ಬೆಳಗಾವಿ ಗಡಿ ವಿಷಯದಲ್ಲಿ ಸಂಯಮ ಕಾಪಾಡಿಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಲಹೆ ಹೊರತಾಗಿಯೂ, ಪ್ರಚೋದನಾಕಾರಿ ಹೇಳಿಕೆ ನೀಡುವುದನ್ನು ಮುಂದುವರೆಸಿರುವ ಮಹಾರಾಷ್ಟ್ರ ಸರ್ಕಾರ, ಗಡಿಭಾಗದ ಮೇಲಿನ ಹಕ್ಕು ಪ್ರತಿಪಾದನೆಯನ್ನು ಬಿಡದೇ ಹೋದಲ್ಲಿ ಕರ್ನಾಟಕಕ್ಕೆ ನಮ್ಮ ರಾಜ್ಯದ ಅಣೆಕಟ್ಟಿನಿಂದ ನೀರು ಹರಿಸುವ ಬಗ್ಗೆ ಮರುಚಿಂತನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದೆ. ಇಷ್ಟುದಿನ ಕೇವಲ ಪ್ರತಿಭಟನೆ, ಕಾನೂನು ಹೋರಾಟಕ್ಕೆ ಸೀಮಿತವಾಗಿದ್ದ ಮಹಾರಾಷ್ಟ್ರ ನಾಯಕರು ಇದೀಗ ಉತ್ತರ ಕರ್ನಾಟಕದ ಲಕ್ಷಾಂತರ ಜನರ ಕೃಷಿ ಚಟುವಟಿಕೆ ಮತ್ತು ಕುಡಿಯುವ ನೀರಿನ ಮೂಲವನ್ನೇ ತಡೆಯುವ ಎಚ್ಚರಿಕೆ ನೀಡುವ ಮೂಲಕ ಗಡಿ ಉದ್ವಿಗ್ನತೆಗೆ ಮತ್ತಷ್ಟುಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ.

ಜೊತೆಗೆ ಕರ್ನಾಟಕದ ಒಂದಿಗೂ ಭೂಮಿಯನ್ನೂ ಬಿಡುವುದಿಲ್ಲ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನು ಬೇಜವಾಬ್ದಾರಿಯುತ ಎನ್ನುವ ಮೂಲಕ ತಮ್ಮ ನಾಲಿಗೆಯನ್ನು ಹರಿಯಬಿಟ್ಟಿದ್ದಾರೆ. ಬುಧವಾರ ಮಹಾರಾಷ್ಟ್ರ ವಿಧಾನಸೌಧದ ಆವರಣದಲ್ಲಿ ಮಾತನಾಡಿದ ಮಹಾರಾಷ್ಟ್ರದ ಅಬಕಾರಿ ಸಚಿವ ಮತ್ತು ಕರ್ನಾಟಕದ ಗಡಿ ವಿವಾದ ನೋಡಲ್‌ ಸಚಿವ ಶಂಭುರಾಜ್‌ ದೇಸಾಯಿ, ‘ಕರ್ನಾಟಕದ ಒಂದಿಚು ಭೂಮಿಯನ್ನೂ ಬಿಡುವುದಿಲ್ಲ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. 

ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಮತ್ತೆ ಕರ್ನಾಟಕ ವಿರುದ್ಧ ಕಿಡಿ

ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಇಂಥ ಹೇಳಿಕೆ ನ್ಯಾಯಾಂಗ ನಿಂದನೆಯಾಗುತ್ತದೆ. ಜೊತೆಗೆ ಬೆದರಿಕೆ ಭಾಷೆಯಲ್ಲಿನ ಇಂಥ ಹೇಳಿಕೆಗಳು ಸಾಂವಿಧಾನಿಕ ಹುದ್ದೆಯಲ್ಲಿರುವ ಬೊಮ್ಮಾಯಿ ಅವರಿಗೆ ಸೂಕ್ತವಾದುದಲ್ಲ. ಅವರು ಇಂಥ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ನಾವು ಕೂಡಾ ಅವರಿಗೆ ಇದೇ ಧಾಟಿಯಲ್ಲಿ ಉತ್ತರಿಬಲ್ಲೆವು ಎಂಬುದನ್ನು ಅವರು ಮರೆಯಬಾರದು. ಅವರು ನಮ್ಮನ್ನು ಪ್ರಚೋದಿಸುವ ಕೆಲಸ ಮಾಡಬಾರದು’ ಎಂದು ಹೇಳಿದ್ದಾರೆ. ಜೊತೆಗೆ ‘ಗಡಿ ವಿಷಯದಲ್ಲಿ ನಾವು ಸಾಕಷ್ಟುತಾಳ್ಮೆ ವಹಿಸಿದ್ದೇವೆ. ಜೊತೆಗೆ ಮಾರ್ಚ್‌ ಮತ್ತು ಏಪ್ರಿಲ್‌ನ ಬೇಸಿಗೆ ಸಮಯದಲ್ಲಿ ಕರ್ನಾಟಕವು ನಮ್ಮ ಕೊಯ್ನಾ ಮತ್ತು ಕೃಷ್ಣಾ ಅಣೆಕಟ್ಟುಗಳಿಂದ ಬಿಡುಗಡೆ ಮಾಡುವ ನೀರನ್ನು ಬಹುವಾಗಿ ಅವಲಂಬಿಸಿದೆ ಎನ್ನುವುದನ್ನು ಕರ್ನಾಟಕದ ಮುಖ್ಯಮಂತ್ರಿ ತಮ್ಮ ಗಮನದಲ್ಲಿ ಇಟ್ಟುಕೊಳ್ಳಬೇಕು. 

ಕರ್ನಾಟಕ ಇಂಥ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸದೇ ಹೋದಲ್ಲಿ ಆಗ ಮಹಾರಾಷ್ಟ್ರ ನೆರೆ ರಾಜ್ಯಕ್ಕೆ ಬಿಡುಗಡೆ ಮಾಡುವ ನೀರಿನ ಬಗ್ಗೆ ಮರುಚಿಂತನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ್ದ ಎನ್‌ಸಿಪಿ ನಾಕ ಜಯಂತ್‌ ಪಾಟೀಲ್‌, ಮಹಾರಾಷ್ಟ್ರ ಸರ್ಕಾರ ತನ್ನ ಅಣೆಕಟ್ಟುಗಳ ಎತ್ತರ ಹೆಚ್ಚಿಸಿ ಕರ್ನಾಟಕಕ್ಕೆ ನೀರಿನ ಹರಿವು ತಡೆಯುವ ಮೂಲಕ ಪಾಠ ಕಲಿಸಬೇಕು ಎಂದು ಸಲಹೆ ನೀಡಿದ್ದರು. ಅದರ ಬೆನ್ನಲ್ಲೇ ದೇಸಾಯಿ ಈ ವಿವಾದಿತ ಹೇಳಿಕೆ ನೀಡಿದ್ದಾರೆ.

ಕರ್ನಾಟಕದಲ್ಲಿನ ಮರಾಠಿಗರಿಗೆ ಮಹಾರಾಷ್ಟ್ರ ನೆರವು ಪ್ರಕಟ

ಸಚಿವ ದೇಸಾಯಿ ಹೇಳಿದ್ದೇನು?
- ಕರ್ನಾಟಕದ ಒಂದಿಚು ಭೂಮಿ ಬಿಡಲ್ಲ ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ಬೇಜವಾಬ್ದಾರಿಯುತ
- ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿ ಬೊಮ್ಮಾಯಿಗೆ ಇಂಥ ಹೇಳಿಕೆ ಸೂಕ್ತವಾಗದು
- ನಾವು ಕೂಡಾ ಇಂಥ ಹೇಳಿಕೆಗೆ ತಿರುಗೇಟು ನೀಡಬಹುದು, ಆದರೆ ನಾವು ತಾಳ್ಮೆ ವಹಿಸಿದ್ದೇವೆ
- ಬೇಸಿಗೆಯಲ್ಲಿ ನೀರಿಗೆ ನಮ್ಮ ಮೇಲಿನ ಅವಲಂಬನೆಯನ್ನು ಸಿಎಂ ಬೊಮ್ಮಾಯಿ ಮರೆಯಬಾರದು
- ಹೇಳಿಕೆ ನಿಲ್ಲಿಸದೇ ಇದಲ್ಲಿ ಕೊಯ್ನಾ, ಕೃಷ್ಣಾ ನೀರು ಬಿಡುಗಡೆಗೆ ಮರುಚಿಂತನೆ ಮಾಡಬೇಕಾಗುತ್ತದೆ

click me!