ಜೀಸಸ್‌ ಕೃಪೆಯಿಂದ ಭಾರತದಲ್ಲಿ ಕೋವಿಡ್ ನಿಯಂತ್ರಣ, ಆರೋಗ್ಯ ನಿರ್ದೇಶಕನ ವಿವಾದ!

By Suvarna NewsFirst Published Dec 21, 2022, 8:50 PM IST
Highlights

ಚೀನಾದಲ್ಲಿ ಕೋವಿಡ್ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ ಭಾರತ ಸದ್ಯದ ಮಟ್ಟಿದೆ ಸುರಕ್ಷಿತವಾಗಿದೆ. ಭಾರತದಲ್ಲಿ ಕೋವಿಡ್ ನಿಯಂತ್ರಣದಲ್ಲಿರಲು ಯೇಸು ಕ್ರಿಸ್ತ ಕಾರಣ. ಜೀಸಸ್ ಕೃಪೆ, ಕ್ರಿಶ್ಚಿಯನ್ ಧರ್ಮದಿಂದ ನಾವೆಲ್ಲಾ ಬದುಕಿದ್ದೇವೆ ಎಂದು ಆರೋಗ್ಯ ನಿರ್ದೇಶಕನೇ ಹೇಳಿದ್ದಾನೆ.

ಹೈದರಾಬಾದ್(ಡಿ.21): ಆಯಾ ಧರ್ಮದ, ಜಾತಿಗಳ ಕಾರ್ಯಕ್ರಮಕ್ಕೆ ತೆರಳಿ ಅಲ್ಲಿಗೆ ತಕ್ಕಂತೆ ಮಾತನಾಡುವುದರಲ್ಲಿ ರಾಜಕಾರಣಿಗಳು ಇತರರಿಗಿಂತ ಮುಂದೆ. ಆದರೆ ಇಲ್ಲೊಬ್ಬ ಆರೋಗ್ಯ ಆಧಿಕಾರಿ ರಾಜಕಾರಣಿಗಳನ್ನೇ ನಾಚಿಸುವಂತ ಹೇಳಿಕೆ ನೀಡಿದ್ದಾನೆ. ಸದ್ಯ ಎದ್ದಿರುವ ಕೊರೋನಾ ಆತಂಕ ನಡುವೆ ಜನರನ್ನು ಕೈಸ್ತ ಧರ್ಮಕ್ಕೆ ಸೆಳೆಯುವ ಪ್ರಯತ್ನ ಮಾಡಿದ್ದಾನೆ. ಚೀನಾದಲ್ಲಿ ಕೋವಿಡ್ ಮತ್ತೆ ಅಬ್ಬರಿಸುತ್ತಿದೆ. ಮರಣಶಾಸನ ಬರೆಯುತ್ತಿದೆ. ಆದರೆ ಭಾರತ ಸುರಕ್ಷಿತವಾಗಿದೆ. ಇದಕ್ಕೆ ಕಾರಣ ಜೀಸಸ್. ಯೇಸುವಿನ ಕೃಪೆಯಿಂದ ಭಾರತದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ಇಷ್ಟೇ ಅಲ್ಲ ಕ್ರೈಸ್ತ ಧರ್ಮದಿಂದ ನಾವೆಲ್ಲ ಬದುಕುಳಿದಿದ್ದೇವೆ ಎಂದು ತೆಲಂಗಾಣದ ಆರೋಗ್ಯ ನಿರ್ದೇಶಕ ಶ್ರೀನಿವಾಸ್ ರಾವ್ ಹೇಳಿದ್ದಾರೆ. 

ಕ್ರಿಸ್ಮಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶ್ರೀನಿವಾಸ್ ರಾವ್ ವಿವಾದಿತ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ಕೊರೋನಾ ನಿಯಂತ್ರಣದಲ್ಲಿರಲು ಸರ್ಕಾರದ ಕ್ರಮಗಳು, ಲಾಕ್‌ಡೌನ್, ಲಸಿಕೆ, ಚಿಕಿತ್ಸೆ, ಕ್ವಾರಂಟೈನ್ ಯಾವುದೂ ಕಾರಣವಲ್ಲ. ಭಾರತದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿರುವುದೇ ಜೀಸಸ್‌ನಿಂದ. ಜೀಸಸ್ ಕೃಪೆ ನಮ್ಮ ಮೇಲಿದೆ. ಇದರಿಂದ ಬಚಾವ್. ಇಲ್ಲಾ ಅಂದಿದ್ದರೆ ನಾವೆಲ್ಲಾ ಕೊರೋನಾ ಅಬ್ಬರಕ್ಕೆ ಧೂಳೀಪಟವಾಗುತ್ತಿದ್ದೇವು ಎಂದು ಶ್ರೀನಿವಾಸ್ ರಾವ್ ಹೇಳಿದ್ದಾರೆ.

ಚೀನಾ ಸರಣಿ ತಪ್ಪುಗಳಿಂದ ಕೋವಿಡ್ 4ನೇ ಅಲೆ ಭೀತಿ, ಭಾರತದಲ್ಲಿ 4 ಕೇಸ್ ಪತ್ತೆ!...

ಇಷ್ಟಕ್ಕೆ ಶ್ರೀನಿವಾಸ್ ರಾವ್ ಮಾತುಗಳು ಅಂತ್ಯಗೊಂಡಿಲ್ಲ. ಭಾರತ ಅಭಿವೃದ್ಧಿಯಾಗಲು ಕ್ರಿಶ್ಚಿಯನ್ನರು ಕಾರಣ. ಕ್ರಿಶ್ಚಿಯನ್ ಇಲ್ಲದಿದ್ದರೆ ಭಾರತ ಹಾಳು ಕೊಂಪೆಯಾಗಿರುತ್ತಿತ್ತು. ಕ್ರಿಶ್ಚಿಯನ್ ಧರ್ಮದಿಂದ ಭಾರತ ವಿಶ್ವದಲ್ಲೇ ಗುರುತಿಸಿದೆ ಎಂದಿದ್ದಾರೆ. ಶ್ರೀನಿವಾಸ್ ರಾವ್ ಹೇಳಿಕೆಗೆ ಬಾರಿ ವಿರೋಧ ವ್ಯಕ್ತವಾಗಿದೆ.

ತೆಲಂಗಾಣ ಆರೋಗ್ಯ ನಿರ್ದೇಶಕನ ಮಾತಿಗೆ ಅಚ್ಚರಿ ವ್ಯಕ್ತಪಡಿಸಿರುವ ಬಿಜೆಪಿ ನಾಯಕ  ಕೃಷ್ಣ ಸಾಗರ್ ರಾವ್, ಆರೋಗ್ಯ ನಿರ್ದೇಶಕ ಈ ರೀತಿಯ ಅಸಂಬದ್ಧ ಹೇಳಿಕೆ ನೀಡಿರುವುದು ದುರಂತ. ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಆರೋಗ್ಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ರಿಶ್ಚಿಯನ್ ಪಾದ್ರಿಯಾಗಿ ಮುಂದುವರಿಯಿರಿ ಎಂದು  ಕೃಷ್ಣ ಸಾಗರ್ ರಾವ್ ತಿರುಗೇಟು ನೀಡಿದ್ದಾರೆ.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರಿಗೆ ಇನ್ಮುಂದೆ ಕಡ್ಡಾಯ ಸ್ಕ್ರೀನಿಂಗ್; ಜೀನೋಮ್‌ ಸೀಕ್ವೆನ್ಸಿಂಗ್‌ಗೆ ಕ್ರಮ

ಚೀನಾದಲ್ಲಿ ಭೀಕರ ಕೋವಿಡ್ ಅಲೆಗೆ ಭಾರತದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ದೇಶದಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಲು ಸೂಚಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ತಪಾಸಣೆಗೆ ಒಳಗಾಗಬೇಕು. ಇನ್ನು ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕೇಂದ್ರ ಆರೋಗ್ಯ ಸಚಿವಾಲಯ ಮನವಿ ಮಾಡಿದೆ. ಕೋವಿಡ್‌ಗೆ ಸಂಬಂಧಿಸಿದಂತೆ ಕಳೆದ ಜೂನ್‌ನಲ್ಲಿ ಹೊರಡಿಸಲಾದ ನಿಯಮಗಳಾದ ಶೀಘ್ರ ಸೋಂಕು ಪತ್ತೆ ಹಚ್ಚುವಿಕೆ, ಐಸೋಲೇಶನ್‌, ಪರೀಕ್ಷೆ ಮತ್ತು ಪಾಸಿಟಿವ್‌ ಕೇಸುಗಳ ನಿರ್ವಹಣೆ ಮುಂತಾದವುಗಳನ್ನು ಹೊಸ ರೂಪಾಂತರಿ ಕಾಣಿಸಿಕೊಂಡರೆ ಪಾಲಿಸಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಚೀನಾದಲ್ಲಿ ವೃದ್ಧರು ಲಸಿಕೆ ಹಾಕಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅನೇಕ ಕಡೆ 3ನೇ ಡೋಸ್‌ ಲಸಿಕಾಕರಣವೇ ಆರಂಭವಾಗಿಲ್ಲ. ಅಲ್ಲದೆ, ಚೀನಾ ಲಸಿಕೆಗೆ ವಿಶ್ವ ಮನ್ನಣೆ ಕೂಡ ಇಲ್ಲ. ಇನ್ನು ಕೋವಿಡ್‌ ಶೂನ್ಯ ಸಹಿಷ್ಣುತೆ ಕಾರಣ ವಿಧಿಸಲಾದ ನಿರ್ಬಂಧದಿಂದ ಅನೇಕ ಚೀನೀಯರು 2 ವರ್ಷದಿಂದ ಮನೆ ಹೊರಗೇ ಬಂದಿರಲಿಲ್ಲ. ಅಂಥವರಿಗೆ ಹೊರಗಿನ ವಾತಾವರಣದಲ್ಲಿನ ಪ್ರತಿಕಾಯ ಶಕ್ತಿ ಇಲ್ಲ. ಈಗ ಲಾಕ್‌ಡೌನ್‌ ತೆರವು ಕಾರಣ ಅವರು ಹೊರಬರುತ್ತಿದ್ದು, ಅವರಿಗೆ ಬೇಗ ಕೋವಿಡ್‌ ತಗಲುತ್ತಿದೆ. ಹೀಗಾಗಿ ಚೀನಾದಲ್ಲಿ ಕೋವಿಡ್‌ ಹೆಚ್ಚಳ ಆಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

click me!