ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ, ಕೇರಳವನ್ನು ಮಿನಿ ಪಾಕಿಸ್ತಾನಕ್ಕೆ ಹೋಲಿಸಿ ವಿವಾದ ಸೃಷ್ಟಿಸಿದ್ದಾರೆ.
ಮುಂಬೈ: ‘ಕೇರಳವು ಮಿನಿ ಪಾಕಿಸ್ತಾನ ಇದ್ದಂತೆ. ಆದ್ದರಿಂದಲೇ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಅಲ್ಲಿ ಗೆದ್ದದ್ದು’ ಎಂದು ಹೇಳುವ ಮೂಲಕ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಹೊಸ ವಿವಾದ ಸೃಷ್ಟಿಸಿದ್ದಾರೆ. ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಣೆ, ‘ಕೇವಲ ಉಗ್ರಗಾಮಿಗಳಷ್ಟೇ ಪ್ರಿಯಾಂಕಾರ ಪರ ಮತ ಚಲಾಯಿಸಿದ್ದಾರೆ. ಹೀಗಾಗಿ ಅವರನ್ನು ಸಂದರನ್ನಾಗಿಸಲು ಸಾಧ್ಯವಾಗಿದೆ’ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಗೆ ಮಹಾರಾಷ್ಟ್ರ ವಿಪಕ್ಷಗಳು ಕಿಡಿಕಾರಿವೆ.
ವಿವಾದದ ಬಳಿಕ ಸ್ಪಷ್ಟನೆ:
ಕೇರಳವನ್ನು ಪಾಕಿಸ್ತಾನಕ್ಕೆ ಹೋಲಿಸಿದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ರಾಣೆ, ‘ನಾನು ಹೇಳಿದ್ದು ಕೇರಳವು ಪಾಕ್ ಇದ್ದಂತೆ ಎಂದಲ್ಲ. ಅಲ್ಲಿನ ಕೆಲವು ವಿದ್ಯಮಾನಗಳು ಪಾಕಿಸ್ತಾನದಂತೆ ನಡೆಯುತ್ತಿವೆ’ ಎಂದಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಕೇರಳವು ಭಾರತದ ಭಾಗವೇ ಆಗಿದೆ. ಆದರೆ ಇಲ್ಲಿ ಹಿಂದೂಗಳ ಸಂಖ್ಯೆ ಕುಸಿತ ಆತಂಕಕಾರಿ. ಹಿಂದೂಗಳನ್ನು ಇಸ್ಲಾಂ ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರಿಸುವುದು ಸಾಮಾನ್ಯವಾಗಿದೆ. ಹೀಗಾಗಿ ಕೇರಳದ ಸ್ಥಿತಿಯನ್ನು ಪಾಕ್‌ನೊಂದಿಗೆ ಹೋಲಿಸಿದೆ. ಅಲ್ಲಿಯೂ ಹಿಂದೂಗಳನ್ನು ಹೀಗೆಯೇ ನಡೆಸಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು. ರಾಣೆ ಭಾಷಣಕ್ಕೂ ಮುನ್ನ, ಅವರು ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡದಂತೆ ನೋಡಿಕೊಳ್ಳಲು ಮಹಾರಾಷ್ಟ್ರ ಪೊಲೀಸರು ಕಾರ್ಯಕ್ರಮದ ಆಯೋಜಕರಿಗೆ ಸೂಚಿಸಿದ್ದರು ಎಂದೂ ತಿಳಿದು ಬಂದಿದೆ.