ಕೆಟ್ಟ ಪರಿಸ್ಥಿತಿಗೆ ಸಿದ್ಧರಾಗಿ: ಮಹಾರಾಷ್ಟ್ರಕ್ಕೆ ಕೇಂದ್ರದ ಕಟು ಶಬ್ದಗಳ ಪತ್ರ!

By Kannadaprabha NewsFirst Published Mar 17, 2021, 8:50 AM IST
Highlights

ಕೆಟ್ಟ ಪರಿಸ್ಥಿತಿಗೆ ಸಿದ್ಧರಾಗಿ: ಮಹಾರಾಷ್ಟ್ರಕ್ಕೆ ಕೇಂದ್ರ| ಕೋವಿಡ್‌ 2ನೇ ಅಲೆಯ ಆರಂಭದಲ್ಲಿ ಮಹಾರಾಷ್ಟ್ರ| ಉದ್ಧವ್‌ ಸರ್ಕಾರಕ್ಕೆ ಕೇಂದ್ರದಿಂದ 2 ಕಟು ಶಬ್ದಗಳ ಪತ್ರ

ನವದೆಹಲಿ(ಮಾ.17): ಮಹಾರಾಷ್ಟ್ರ ಕೊರೋನಾ 2ನೇ ಅಲೆಯ ಆರಂಭದಲ್ಲಿದ್ದು, ಮುಂದಿನ ದಿನಗಳಲ್ಲಿ ಕೆಟ್ಟಪರಿಸ್ಥಿತಿ ಎದುರಿಸಲು ಈಗಿನಿಂದಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಈ ಕುರಿತು ಉದ್ಧವ್‌ ಠಾಕ್ರೆ ಸರ್ಕಾರಕ್ಕೆ ಕಟು ಪದಗಳ ಎರಡು ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌, ಮಹಾರಾಷ್ಟ್ರದಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಯಾವ ಕ್ರಮಗಳೂ ಸಾಲುತ್ತಿಲ್ಲ ಎಂದು ತರಾಟೆ ತೆಗೆದುಕೊಂಡಿದ್ದಾರೆ.

‘ಮಹಾರಾಷ್ಟ್ರ ಕೊರೋನಾದ 2ನೇ ಅಲೆಯ ಆರಂಭದಲ್ಲಿದೆ. ಸೋಂಕು ಪತ್ತೆ, ಪರೀಕ್ಷೆ, ಐಸೋಲೇಶನ್‌, ಕ್ವಾರಂಟೈನ್‌ ಹಾಗೂ ಸಂಪರ್ಕಿತರ ಪತ್ತೆಗೆ ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ. ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರು ಕೂಡ ಕೊರೋನಾ ನಿಯಮಗಳನ್ನು ಪಾಲಿಸುತ್ತಿಲ್ಲ. ಕೇಂದ್ರ ಸರ್ಕಾರ ಕಳಿಸಿದ ತಂಡವು ಮಹಾರಾಷ್ಟ್ರದಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳು ಯಾತಕ್ಕೂ ಸಾಲದು ಎಂದು ವರದಿ ನೀಡಿದೆ. ಹೀಗಾಗಿ ಕೂಡಲೇ ಲೋಪಗಳನ್ನು ತಿದ್ದಿಕೊಂಡು ಲಸಿಕೆ ಅಭಿಯಾನವನ್ನು ಚುರುಕುಗೊಳಿಸಬೇಕು’ ಎಂದು ಪತ್ರದಲ್ಲಿ ಸೂಚಿಸಿದ್ದಾರೆ.

ದೇಶದಲ್ಲಿರುವ ಸಕ್ರಿಯ ಕೊರೋನಾ ಪ್ರಕರಣಗಳ ಪೈಕಿ ಮಹಾರಾಷ್ಟ್ರದಲ್ಲೇ ಶೇ.56ರಷ್ಟುಪ್ರಕರಣಗಳಿವೆ. ದೇಶದಲ್ಲಿ ಕೊರೋನಾ ಅತಿಹೆಚ್ಚು ಹರಡುತ್ತಿರುವ 10 ಜಿಲ್ಲೆಗಳ ಪೈಕಿ 8 ಜಿಲ್ಲೆಗಳು ಮಹಾರಾಷ್ಟ್ರದಲ್ಲಿವೆ. ಈ ಹಿನ್ನೆಲೆಯಲ್ಲಿ ಮಾ.7-11ರ ನಡುವೆ ಕೇಂದ್ರ ತಂಡ ಮಹಾರಾಷ್ಟ್ರಕ್ಕೆ ತೆರಳಿ ಪರಿಶೀಲನೆ ನಡೆಸಿತ್ತು. ಅದರ ವರದಿ ಆಧರಿಸಿ ಆರೋಗ್ಯ ಇಲಾಖೆ ಮಹಾರಾಷ್ಟ್ರ ಸರ್ಕಾರಕ್ಕೆ ಎರಡು ಪತ್ರ ಬರೆದು ತರಾಟೆ ತೆಗೆದುಕೊಂಡಿದೆ.

click me!