
ನವದೆಹಲಿ(ಮಾ.17): ಕರ್ನಾಟಕದ ‘ಮರಾಠಿ ಭಾಷಿಕ’ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇದರಿಂದಾಗಿ ಈ ಆಗ್ರಹ ಮಾಡುತ್ತ ಗಡಿ ವಿಚಾರವನ್ನು ಪದೇ ಪದೇ ಕೆದಕುತ್ತಿರುವ ಶಿವಸೇನೆಗೆ ಭಾರೀ ಮುಖಭಂಗವಾದಂತಾಗಿದೆ.
ಲೋಕಸಭೆಯಲ್ಲಿ ಮಂಗಳವಾರ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್, ‘ಕಾಲಕಾಲಕ್ಕೆ ಅನೇಕ ಸಂಘಟನೆಗಳು ಹಾಗೂ ವ್ಯಕ್ತಿಗಳಿಂದ, ‘ಕರ್ನಾಟಕದ ಗಡಿ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಮಾಡಿ’ ಎಂಬ ಮನವಿಗಳು ಬರುತ್ತಲೇ ಇವೆ. ಆದರೆ ಸರ್ಕಾರದ ಮುಂದೆ ಈ ಕುರಿತು ಯಾವುದೇ ಪ್ರಸ್ತಾವ ಇಲ್ಲ’ ಎಂದು ಸ್ಪಷ್ಟಪಡಿಸಿದರು.
‘ಮಹಾರಾಷ್ಟ್ರ-ಕರ್ನಾಟಕ ಗಡಿಯ ಉಭಯ ಪ್ರದೇಶಗಳಲ್ಲಿ ಮರಾಠಿ ಭಾಷಿಕರ ಸಂಖ್ಯೆ 55,98,325 ಎಂದು 2011ರ ಜನಗಣತಿ ಹೇಳುತ್ತದೆ. ದುಧನಿ, ಇಚಲಕರಂಜಿ, ಕಾಗಲ್, ಕಮಲನಗರ, ನಿಪ್ಪಾಣಿ, ಸದಲಗಾ, ಸಂಕೇಶ್ವರದಲ್ಲಿ ಇವರು ಇದ್ದಾರೆ’ ಎಂದು ರಾಯ್ ಹೇಳಿದರು.
ಕಳೆದ ತಿಂಗಳು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ಮರಾಠಿ ಭಾಷಿಕ ಕರ್ನಾಟಕದ ಪ್ರದೇಶಗಳನ್ನು ಕೇಂದ್ರಾಡಳಿತ ಮಾಡಿ ಎಂದು ಆಗ್ರಹಿಸಿದ್ದರು. ಸೋಮವಾರ ಲೋಕಸಭೆಯಲ್ಲಿ ಶಿವಸೇನೆ ಸಂಸದರು ಇದೇ ಆಗ್ರಹ ಮಾಡಿದ್ದರು.
ಸಾಮ್ನಾದಲ್ಲಿ ಮತ್ತೆ ಕ್ಯಾತೆ:
ಈ ನಡುವೆ ಶಿವಸೇನೆ ಮುಖವಾಣಿ ‘ಸಾಮ್ನಾ’ ಕೂಡ ಇದೇ ತಗಾದೆ ಮುಂದುವರಿಸಿದೆ. ‘ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು’ ಎಂದು ಅದು ಆಗ್ರಹಿಸಿದೆ. ‘ಬೆಳಗಾವಿಯಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ನಡೆದಿದೆ. ಪೊಲೀಸರೂ ಇದಕ್ಕೆ ಕೈಜೋಡಿಸಿದ್ದಾರೆ. ಮರಾಠಿಗರ ಅಂಗಡಿಗಳ ಮೇಲೆ ಕನ್ನಡಪರ ಸಂಘಟನೆಗಳು ದಾಳಿ ನಡೆಸಿದ್ದೇ ಅಲ್ಲದೆ, ಮರಾಠಿ ಸಾಮಾಜಿಕ ಮಾಧ್ಯಮಗಳ ಬಳಕೆದಾರರ ಮೇಲೆ ದಾಳಿ ನಡೆಸಲಾಗಿದೆ’ ಎಂದು ಪತ್ರಿಕೆಯ ಮಂಗಳವಾರದ ಸಂಪಾದಕೀಯ ಆರೋಪಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ