ರಾಹುಲ್ ಗಾಂಧಿಯ 4 ಸಂತತಿ ಬಂದ್ರೂ ಮುಸ್ಲಿಮರಿಗೆ ಮೀಸಲಾತಿ ಸಿಗದು: ಅಮಿತ್ ಶಾ

By Kannadaprabha News  |  First Published Nov 14, 2024, 7:54 AM IST

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಸ್ಲಿಮರಿಗೆ ಮೀಸಲಾತಿ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ. ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಇರುವ ಮೀಸಲಾತಿಯನ್ನು ಕಡಿತಗೊಳಿಸದೆ ಮುಸ್ಲಿಮರಿಗೆ ಮೀಸಲು ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.


ಮುಂಬೈ: ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ನಾಲ್ಕನೆ ಸಂತತಿ ಬಂದರೂ ಎಸ್ಸಿ, ಎಸ್ಟಿ ಹಾಗೂ ಒಬಿಸಿಗಳಿಗೆ ಸಿಗುತ್ತಿರುವ ಮೀಸಲಾತಿ ಮುಸ್ಲಿಮರಿಗೆ ಸಿಗುವುದಿಲ್ಲ. ಇದನ್ನು ರಾಹುಲ್‌ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುಡುಗಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಸ್ಲಿಮರಿಗೆ ಮೀಸಲಾತಿ ನೀಡಬೇಕು ಎಂದಾದಲ್ಲಿ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಸಮುದಾಯಗಳಿಗೆ ಸಿಗುತ್ತಿರುವ ಮೀಸಲಾತಿಯನ್ನು ಕಡಿತಗೊಳಿಸಬೇಕು. ರಾಹುಲ್‌ ಬಾಬಾ ನೀವು ಮಾತ್ರ ಅಲ್ಲ, ನಿಮ್ಮ ನಾಲ್ಕು ತಲೆಮಾರು ಬಂದರೂ ಎಸ್ಸಿ, ಎಸ್ಟಿ, ಒಬಿಸಿಗಳ ಮೀಸಲಾತಿಯನ್ನು ಕಡಿತಗೊಳಿಸಿ ಮುಸ್ಲಿಮರಿಗೆ ನೀಡಲು ಆಗದು ಎಂದು ಹೇಳಿದರು. ಇದೇ ವೇಳೆ, ಇಂದಿರಾ ಗಾಂಧಿ ಅವರು ಸ್ವರ್ಗದಿಂದ ವಾಪಸ್‌ ಬಂದರೂ ಕಾಶ್ಮೀರಕ್ಕೆ 370ನೇ ವಿಧಿಯನ್ನು ಮತ್ತೆ ಕೊಡಲು ಆಗದು ಎಂದು ಛೇಡಿಸಿದರು.

Latest Videos

ಕೇಂದ್ರ ಗೃಹ ಸಚಿವನಾಗಿದ್ದ ಅವಧಿಯಲ್ಲಿ ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿನ ಲಾಲ್‌ ಚೌಕ್‌ಗೆ ಭೇಟಿ ನೀಡಲು ಭಯವಾಗಿತ್ತು ಎಂಬ ಕಾಂಗ್ರೆಸ್‌ ನಾಯಕ ಸುಶೀಲ್‌ ಕುಮಾರ್ ಶಿಂಧೆ ಹೇಳಿಕೆಗೆ ತಿರುಗೇಟು ನೀಡಿದ ಅಮಿತ್‌ ಶಾ, ಶಿಂಧೆ ಅವರೇ ಈಗ ನಿಮ್ಮ ಮೊಮ್ಮಕ್ಕಳ ಜತೆಗೆ ಕಾಶ್ಮೀರಕ್ಕೆ ಹೋಗಿ, ಯಾರೂ ನಿಮಗೆ ತೊಂದರೆ ಮಾಡುವುದಿಲ್ಲ. ಸೋನಿಯಾ- ಮನಮೋಹನಸಿಂಗ್ ಅವರ 10 ವರ್ಷಗಳ ಆಳ್ವಿಕೆಯಲ್ಲಿ ಭಯೋತ್ಪಾದಕರು ಪಾಕಿಸ್ತಾನದಿಂದ ಸುಲಭವಾಗಿ ಬಂದು ಬಾಂಬ್‌ ಸ್ಫೋಟ ಮಾಡಿ ವಾಪಸ್ ಹೋಗುತ್ತಿದ್ದರು ಎಂದು ಹೇಳಿದರು.

ಮತ್ತೆ ಕರ್ನಾಟಕ ವಕ್ಫ್‌ ವಿಷಯ ಪ್ರಸ್ತಾಪಿಸಿದ ಶಾ
ಮಹಾರಾಷ್ಟ್ರ ಚುನಾವಣೆ ವೇಳೆ ಮತ್ತೊಮ್ಮೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕರ್ನಾಟಕ ವಕ್ಫ್‌ ವಿವಾದವನ್ನು ಪ್ರಸ್ತಾಪಿಸಿದರು. ವಕ್ಫ್‌ ಕಾನೂನಿನಿಂದ ದೇಶದ ಜನರು ಬಾಧಿತರಾಗಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲಿನ ವಕ್ಫ್‌ ಮಂಡಳಿ ಇಡೀ ಗ್ರಾಮವನ್ನೇ ವಕ್ಫ್‌ ಎಂದು ತೀರ್ಮಾನ ಕೈಗೊಂಡಿದೆ. 400 ವರ್ಷ ಹಳೆಯ ದೇಗುಲ, ರೈತರ ಹೊಲ ಹಾಗೂ ಜನರ ಜಮೀನು ಕೂಡ ಅಲ್ಲಿ ವಕ್ಫ್‌ ಆಸ್ತಿಯಾಗಿವೆ. ಹೀಗಾಗಿ ನಾವು ವಕ್ಫ್‌ ಕಾಯ್ದೆಗೇ ತಿದ್ದುಪಡಿ ತರಲು ಮಸೂದೆ ರೂಪಿಸಿದ್ದೇವೆ. ಆದರೆ ಕಾಂಗ್ರೆಸ್‌ನ ರಾಹುಲ್‌ ಗಾಂಧಿ, ಎನ್‌ಸಿಪಿಯ ಶರದ್‌ ಪವಾರ್‌ ವಿರೋಧಿಸುತ್ತಿದ್ದಾರೆ. ರಾಹುಲ್‌ ಗಾಂಧಿ ಅವರೇ ಕೇಳಿಸಿಕೊಳ್ಳಿ, ಮೋದಿ ಅವರು ಖಂಡಿತವಾಗಿಯೂ ವಕ್ಫ್‌ ಕಾಯ್ದೆ ಜಾರಿಗೆ ತರುತ್ತಾರೆ ಎಂದು ಅಬ್ಬರಿಸಿದರು.

ಇದನ್ನೂ ಓದಿ: ಅಬಕಾರಿಯಲ್ಲಿ ಭ್ರಷ್ಟಾಚಾರ ಆಗಿಲ್ಲ ಅಂದ್ರೆ ಮೋದಿ ಪ್ರಧಾನಿ ಹುದ್ದೆ ಬಿಡ್ತಾರಾ?: ಮೋದಿಗೆ ಸಿದ್ದು ಮತ್ತೆ ಸವಾಲ್‌!

ಎಸ್‌ಸಿ, ಎಸ್ಟಿ, ಒಬಿಸಿ ಮೀಸಲು ರದ್ದತಿಗೆ ರಾಹುಲ್ ಪಿತೂರಿ: ಮೋದಿ
ಎಸ್‌ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲು ರದ್ದುಪಡಿಸಿ, ಅವರನ್ನು ದುರ್ಬಲಗೊಳಿಸಲು ಕಾಂಗ್ರೆಸ್‌ನ ಶೆಹಜಾದಾ (ರಾಹುಲ್‌ ಗಾಂಧಿ)ಪಿತೂರಿ ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ.

ಜಾರ್ಖಂಡ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಪ್ರಧಾನಿ, ‘ಎಸ್‌ಸಿ, ಎಸ್ಟಿ, ಒಬಿಸಿ ಮೀಸಲು ತೆಗೆಯಲು ಯಾರೇ ಪಿತೂರಿ ನಡೆಸಿದರೂ ಅಂತಹ ಪ್ರಯತ್ನವನ್ನು ವಿಫಲಗೊಳಿಸುತ್ತೇವೆ. ಕಾಂಗ್ರೆಸ್‌ ಅಪಾಯಕಾರಿ ಉದ್ದೇಶವನ್ನು ಹೊಂದಿದೆ. ಕಾಂಗ್ರೆಸ್‌ನ ಶೆಹಜಾದಾ, ಎಸ್‌ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ತೆಗೆಯಲು ಪಿತೂರಿ ನಡೆಸುತ್ತಿದ್ದಾರೆ. ಯುವರಾಜನ ತಂದೆ ಮೀಸಲಾತಿಯು ಗುಲಾಮಗಿರಿ, ಜೀತದಾಳು ಎಂದು ಘೋಷಿಸಿದ್ದರು. ಬಳಿಕ ಅವರು ಚುನಾವಣೆಯಲ್ಲಿ ಸೋತಿದ್ದರು. ಅವರ ತಂದೆ ಮೀಸಲಾತಿ ತೆಗೆದುಹಾಕುವ ಬಗ್ಗೆ ಜಾಹೀರಾತು ಪ್ರಕಟಿಸಿದ್ದರು. ನಾವು ಅಂತಹ ಯಾವುದೇ ಪಿತೂರಿಗಳಿದ್ದರೂ ಅದನ್ನು ವಿಫಲಗೊಳಿಸುತ್ತೇವೆ’ ಎಂದರು.

ಇದನ್ನೂ ಓದಿ: 

click me!