
ಮುಂಬೈ(ಜು.03): ಮಹಾರಾಷ್ಟ್ರ ವಿಧಾನಸಭೆಯಲ್ಲಿ ಭಾನುವಾರ ಸ್ಪೀಕರ್ ಆಯ್ಕೆ ನಡೆದಿದೆ. ಎನ್‌ಡಿಎ ಅಭ್ಯರ್ಥಿ ಹಾಗೂ ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಅವರು ಬಂಪರ್ ವೋಟ್‌ನಿಂದ ಗೆಲುವು ಸಾಧಿಸಿದ್ದಾರೆ. ಅವರು ಮಹಾರಾಷ್ಟ್ರ ವಿಧಾನಸಭೆಯ ಹೊಸ ಸ್ಪೀಕರ್ ಆಗಲಿದ್ದಾರೆ. ರಾಹುಲ್ ಎದುರು ಎಂವಿಎ ಶಿವಸೇನೆ ಶಾಸಕ ರಾಜನ್ ಸಾಲ್ವಿ ಅವರನ್ನು ನಾಮಕರಣ ಮಾಡಿದ್ದರು. ಆದರೆ, ಎಂವಿಎಯ ಈ ಬಾಜಿ ಯಶಸ್ವಿಯಾಗದೇ ಮೈತ್ರಿಕೂಟದ ಅಭ್ಯರ್ಥಿ ಸೋಲನುಭವಿಸಬೇಕಾಯಿತು.
ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್ ರಾಹುಲ್ ನಾರ್ವೇಕರ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಅವರು ಮಹಾ ವಿಕಾಸ್ ಅಘಾಡಿಯ ರಾಜನ್ ಸಾಲ್ವಿ ವಿರುದ್ಧ ಸ್ಪರ್ಧಿಸಿದ್ದರು. ರಾಹುಲ್ ನಾರ್ವೇಕರ್ ಮಹಾರಾಷ್ಟ್ರ ರಾಜಕೀಯದಲ್ಲಿ ಚಿರಪರಿಚಿತ ಮುಖ. ರಾಹುಲ್ ನಾರ್ವೇಕರ್ ವೃತ್ತಿಯಲ್ಲಿ ವಕೀಲರು. 2019ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ಮೊದಲ ಬಾರಿಗೆ ಶಾಸಕರಾಗಿದ್ದಾರೆ.
ನಾರ್ವೇಕರ್ ಮಹಾರಾಷ್ಟ್ರದ ಅತ್ಯಂತ ಕಿರಿಯ ಸ್ಪೀಕರ್: ಫಡ್ನವಿಸ್
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ರಾಹುಲ್ ನಾರ್ವೇಕರ್ ಅವರು ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲೇ ಅತ್ಯಂತ ಕಿರಿಯ ಸ್ಪೀಕರ್ ಎಂದು ಹೇಳಿದ್ದಾರೆ. ರಾಹುಲ್ ನಾರ್ವೇಕರ್ ಅವರು ವಿಧಾನಸಭೆಯ ಸ್ಪೀಕರ್ ಆಗಿರುವುದು ಗೌರವ ಮತ್ತು ಸೌಭಾಗ್ಯ ಎಂದರು. ನ್ಯಾಯ ಒದಗಿಸುವುದು ಸಭಾಧ್ಯಕ್ಷರ ಕರ್ತವ್ಯ ಎಂದರು. ಪ್ರತಿಯೊಬ್ಬರಿಗೂ ಅವರದೇ ಆದ ವಿಚಾರವಿದ್ದು ಅದನ್ನು ಕೇಳಬೇಕು ಮತ್ತು ಅವಕಾಶ ನೀಡಬೇಕು ಎಂದು ಫಡ್ನವೀಸ್ ಹೇಳಿದ್ದಾರೆ. ರಾಹುಲ್ ನಾರ್ವೇಕರ್ ಅದೇ ರೀತಿ ಮಾಡುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ.
ವಿಧಾನ ಪರಿಷತ್ತಿನ ಸ್ಪೀಕರ್ ಮತ್ತು ಹೊಸದಾಗಿ ಆಯ್ಕೆಯಾದ ವಿಧಾನಸಭಾಧ್ಯಕ್ಷರು ಸಂಬಂಧಿಕರಾಗಿರುವುದು ಕೂಡ ಕಾಕತಾಳೀಯ ಎಂದು ಫಡ್ನವೀಸ್ ಹೇಳಿದ್ದಾರೆ. ವಿಧಾನ ಪರಿಷತ್ ಸಭಾಪತಿ ರಾಮರಾಜೇ ನಾಯ್ಕ್ ನಿಂಬಾಳ್ಕರ್ ಅವರು ರಾಹುಲ್ ನಾರ್ವೇಕರ್ ಅವರ ಮಾವ. ಉಭಯ ನಾಯಕರು ಸಾಮಾನ್ಯವಾಗಿ ಯಾವುದೇ ವಿಷಯದ ಬಗ್ಗೆ ಸುಲಭವಾಗಿ ಒಪ್ಪುವುದಿಲ್ಲ ಆದರೆ ನಾರ್ವೇಕರ್ ಅವರು ತಮ್ಮ ಮಾವನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆಂದು ನನಗೆ ತಿಳಿದಿದೆ ಎಂದು ಫಡ್ನವಿಸ್ ಹೇಳಿದರು.
ರಾಹುಲ್ ತಂದೆ ಕೌನ್ಸಿಲರ್ ಆಗಿದ್ದಾರೆ
ರಾಹುಲ್ ನಾರ್ವೇಕರ್ ಅವರು ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದೊಂದಿಗೆ ಸಂಬಂಧ ಹೊಂದಿದ್ದರು. ರಾಹುಲ್ ಶಿವಸೇನೆ ಯುವ ಘಟಕದ ವಕ್ತಾರರೂ ಆಗಿದ್ದಾರೆ. ರಾಹುಲ್ ನಾರ್ವೇಕರ್ ರಾಜಕೀಯ ಕುಟುಂಬಕ್ಕೆ ಸೇರಿದವರು. ರಾಹುಲ್ ತಂದೆ ಸುರೇಶ್ ನಾರ್ವೇಕರ್ ಕೌನ್ಸಿಲರ್ ಆಗಿದ್ದಾರೆ. 2014ರಲ್ಲಿ ರಾಹುಲ್ ನಾರ್ವೇಕರ್ ಶಿವಸೇನೆಯಲ್ಲಿದ್ದರು. ಈ ವೇಳೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹಕ್ಕೊತ್ತಾಯ ಮಂಡಿಸುತ್ತಿದ್ದರೂ ಟಿಕೆಟ್ ಸಿಗಲಿಲ್ಲ.
ಶಿವಸೇನೆ ಟಿಕೆಟ್ ನಿರಾಕರಿಸಿದ ನಂತರ ರಾಹುಲ್ ನಾರ್ವೇಕರ್ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ (ಎನ್‌ಸಿಪಿ) ಸೇರಿದರು. ಮಾವಲ್ ಲೋಕಸಭಾ ಕ್ಷೇತ್ರದಿಂದ ಎನ್‌ಸಿಪಿ ರಾಹುಲ್ ನಾರ್ವೇಕರ್ ಅವರನ್ನು ಕಣಕ್ಕಿಳಿಸಿತ್ತು ಆದರೆ ರಾಹುಲ್ ಸೋಲನ್ನು ಎದುರಿಸಬೇಕಾಯಿತು. ನಂತರ ರಾಹುಲ್ ಬಿಜೆಪಿ ಸೇರಿದರು.
ಹಿಂದಿನ ಎಂವಿಎ ಸರ್ಕಾರದಲ್ಲಿ ಸ್ಪೀಕರ್ ಕುರ್ಚಿ ಖಾಲಿಯಾಗಿತ್ತು
ಹಿಂದಿನ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಕಾಂಗ್ರೆಸ್ ನಾಯಕ ನಾನಾ ಪಟೋಲೆ ರಾಜೀನಾಮೆ ನೀಡಿದ ನಂತರ, ಫೆಬ್ರವರಿ 2021 ರಿಂದ ಮಹಾರಾಷ್ಟ್ರ ಅಸೆಂಬ್ಲಿ ಸ್ಪೀಕರ್ ಹುದ್ದೆ ಖಾಲಿಯಾಗಿದೆ ಎಂದು ತಿಳಿಸೋಣ. ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾದ ನಂತರ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇಂದಿನಿಂದ ವಿಧಾನ ಸಭೆಯ ಕಲಾಪ ಆರಂಭವಾಗಿದೆ. ವಿಧಾನಸಭಾಧ್ಯಕ್ಷರ ಆಯ್ಕೆಯ ನಂತರ ಈಗ ಸೋಮವಾರ ವಿಶ್ವಾಸಮತ ಪರೀಕ್ಷೆ ನಡೆಯಲಿದೆ.
ಆರೀ ಅಂತರದ ಮತಗಳಿಂದ ಗೆಲುವು
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಓರ್ವ ಶಾಸಕ ಸಾವನ್ನಪ್ಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಸ್ತುತ ವಿಧಾನಸಭೆಯಲ್ಲಿ 287 ಸದಸ್ಯರಿದ್ದಾರೆ. ಸ್ಪೀಕರ್ ಚುನಾವಣೆಯಲ್ಲಿ ಗೆಲ್ಲಲು 144 ಮತಗಳ ಅಗತ್ಯವಿತ್ತು. ಬಿಜೆಪಿಯ ರಾಹುಲ್ ನಾರ್ವೇಕರ್ 164 ಮತಗಳನ್ನು ಪಡೆದರು. ಅಂದರೆ, ಗೆಲುವಿಗೆ ಬೇಕಾದ 144ಕ್ಕಿಂತ 20 ಮತಗಳು ಹೆಚ್ಚು. ರಾಹುಲ್ ನಾರ್ವೇಕರ್ ಅವರು ತಮ್ಮ ಎದುರಾಳಿಯನ್ನು 47 ಮತಗಳ ಭಾರೀ ಅಂತರದಿಂದ ಸೋಲಿಸಿದರು. ಪ್ರತಿಪಕ್ಷಗಳ ಅಭ್ಯರ್ಥಿ ರಾಜನ್ ಸಾಲ್ವಿ ಅವರಿಗೆ 107 ಶಾಸಕರು ಮತ ಹಾಕಿದ್ದಾರೆ.
ಎಸ್‌ಪಿ ಮತ್ತು ಎಐಎಂಐಎಂನ ತಲಾ ಇಬ್ಬರು ಶಾಸಕರು ಮತದಾನದಲ್ಲಿ ಭಾಗವಹಿಸಲಿಲ್ಲ, ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಶಾಸಕರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದರು. ಇಬ್ಬರು ಎಂವಿಎ ಶಾಸಕರಾದ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಜೈಲಿನಲ್ಲಿದ್ದಾರೆ. ಉಪಸಭಾಪತಿ ಕೂಡ ಮತ ಚಲಾಯಿಸಲಿಲ್ಲ.
ಇವರೆಲ್ಲಾ ಮತ ಹಾಕಿಲ್ಲ
1. ನವಾಬ್ ಮಲಿಕ್, (NCP)
2. ಅನಿಲ್ ದೇಶಮುಖ್ (NCP)
3. ನೀಲೇಶ್ ಲಂಕೆ (NCP)
4. ದಿಲೀಪ್ ಮೋಹಿತೆ (NCP)
5. ದತ್ತಾತ್ರೇಯ ಭರಣೆ (NCP)
6. ಬಾಬನ್ ಶಿಂಧೆ (NCP)
7. ಅಣ್ಣಾ ಬನ್ಸೋಡೆ (NCP)
8. ಲಕ್ಷ್ಮಣ್ ಜಗತಾಪ್ (ಬಿಜೆಪಿ)
9. ಮುಕ್ತಾ ತಿಲಕ್ (ಬಿಜೆಪಿ)
10. ಪ್ರಣತಿ ಶಿಂಧೆ (ಕಾಂಗ್ರೆಸ್)
11. ಮುಫ್ತಿ ಇಸ್ಮಾಯಿಲ್ (ಎಐಎಂಐಎಂ)
12. ಶಾ ಫಾರೂಕ್ ಅನ್ವರ್ (ಎಐಎಂಐಎಂ)
13. ರಮೇಶ್ ಲಟ್ಕೆ (ಶಿವಸೇನೆ) (ಮರಣ)
14. ರಯೀಸ್ ಶೇಖ್ (SP)
15. ಅಬು ಅಜ್ಮಿ (SP)
16. ರಾಜೇಂದ್ರ ಪಾಟೀಲ್ (ಸ್ವತಂತ್ರ)
17. ಉಪ ಅಧ್ಯಕ್ಷರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ.
ಶಾಸಕ ರಮೇಶ ಲಟ್ಕೆ ಅವರು ನಿಧನರಾಗಿದ್ದು, ಇದರಿಂದಾಗಿ ವಿಧಾನಸಭೆಯ ಒಂದು ಸ್ಥಾನ ಖಾಲಿಯಾಗಿದೆ ಎಂಬುವುದು ಉಲ್ಲೇಖನೀಯ.
ಉದ್ಧವ್ ಬಣಕ್ಕೆ ಮರಳಿದ ಇಬ್ಬರು ಶಾಸಕರನ್ನು ಸ್ವಾಗತಿಸಿದ ಪ್ರತಿಪಕ್ಷಗಳು
ಸಿಎಂ ಏಕನಾಥ್ ಶಿಂಧೆಗೆ ವಿಭಜನೆ ತಡೆಯಲು ಸಾಧ್ಯವಾಗಲಿಲ್ಲ. ಇಂದು ಶಾಸಕರು ವಿಧಾನಸೌಧಕ್ಕೆ ಆಗಮಿಸಿದ ಕೂಡಲೇ ಅವರ ವರ್ತನೆ ಬದಲಾಯಿತು. ಶಿವಸೇನೆಯ ಶಾಸಕರಾದ ನಿತಿನ್ ದೇಶಮುಖ್ ಮತ್ತು ಕೈಲಾಶ್ ಪಾಟೀಲ್ ಅವರು ಉದ್ಧವ್ ಪಾಳಯಕ್ಕೆ ಮರಳಿದ್ದಾರೆ. ಉದ್ಧವ್ ಶಿಬಿರಕ್ಕೆ ಮರಳಿದ ಶಾಸಕರನ್ನು ಪ್ರತಿಪಕ್ಷದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಶಾಸಕರು ಮೇಜು ಬಡಿದು ಸ್ವಾಗತಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ