ಹಿಂದೂ ದೇವರಲ್ಲಿ ನಂಬಿಕೆ ಇದ್ದರೆ ಅನ್ಯ ಧರ್ಮದ ವ್ಯಕ್ತಿ ಕೂಡ ದೇವಸ್ಥಾನ ಪ್ರವೇಶಿಸಬಹುದು!

By Santosh NaikFirst Published Jul 9, 2022, 3:08 PM IST
Highlights

ತಿರುವಟ್ಟಾರ್‌ನಲ್ಲಿರುವ ಅರುಲ್ಮಿಘು ಆದಿಕೇಶವ ಪೆರುಮಾಳ್ ತಿರುಕೋವಿಲ್‌ನ ಕುಂಭಾಬಿಷೇಕ ಉತ್ಸವದಲ್ಲಿ ಹಿಂದೂಯೇತರರು ಭಾಗವಹಿಸಲು ಅನುಮತಿ ನೀಡದಂತೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದ ವಿಚಾರದಲ್ಲಿ ಮದ್ರಾಸ್‌ ಹೈ ಕೋರ್ಟ್‌ ಈ ತೀರ್ಪು ನೀಡಿದೆ.

ಚೆನ್ನೈ (ಜುಲೈ 9): ಮದ್ರಾಸ್ ಹೈಕೋರ್ಟ್ (Madras High Court) ಇತ್ತೀಚಿನ ತೀರ್ಪಿನಲ್ಲಿ (Order), ಯಾವುದೇ ಇತರ ಧರ್ಮದ ವ್ಯಕ್ತಿಯು ಹಿಂದೂ ಧರ್ಮದ ನಿರ್ದಿಷ್ಟ ದೇವತೆಯಲ್ಲಿ ( Hindu deity) ನಂಬಿಕೆಯನ್ನು ಹೊಂದಿದ್ದರೆ ಮತ್ತು ಆ ಕಾರಣಕ್ಕಾಗಿ ದೇವಸ್ಥಾನವನ್ನು (Temple) ಭೇಟಿ ಮಾಡಲು ಬಯಸಿದರೆ, ಆ ದೇವಾಲಯವನ್ನು ಪ್ರವೇಶಿಸುವುದನ್ನು ತಡೆಯಲು ಅಥವಾ ನಿಷೇಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ. 

ಆ ಮೂಲಕ ಬೇರೆ ಧರ್ಮದ ವ್ಯಕ್ತಿಗಳು ಹಿಂದೂ ಧರ್ಮದ ದೇವಾಲಯಗಳಿಗೆ ಪ್ರವೇಶಿಸಲು ಅನುಮತಿ ನೀಡಬಾರದು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು  ವಜಾ ಮಾಡಿದೆ. ನ್ಯಾಯಮೂರ್ತಿ ಪಿಎನ್ ಪ್ರಕಾಶ್ ಮತ್ತು ನ್ಯಾಯಮೂರ್ತಿ ಆರ್ ಹೇಮಲತಾ ಅವರಿದ್ದ ವಿಭಾಗೀಯ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯ ವಿಷಯದಲ್ಲಿ ಈ ನಿರ್ಧಾರವನ್ನು ನೀಡಿದೆ. ತಿರುವತ್ತರ್‌ನ ಅರುಲ್ಮಿಘು ಆದಿಕೇಶವ ಪೆರುಮಾಳ್ ತಿರುಕೋವಿಲ್‌ನಲ್ಲಿ (Arulmighu Adikesava Perumal Thirukovil ) ನಡೆಯುವ ಕುಂಭಾಬಿಷೇಕ ಉತ್ಸವದಲ್ಲಿ ಹಿಂದೂಯೇತರರು ಭಾಗವಹಿಸದಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು.

ಕುಂಭಾಬಿಷೇಕ ಉತ್ಸವಕ್ಕೆ ಕ್ರಿಶ್ಚಿಯನ್‌ ಆಗಿರುವ ಮಂತ್ರಿಗೆ ಆಹ್ವಾನ ನೀಡಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿ ಸಿ.ಸೋಮನ್‌ ಎನ್ನುವ ವ್ಯಕ್ತಿ ಮದ್ರಾಸ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಮಂತ್ರಣ ಪತ್ರಿಕೆಯಲ್ಲಿ ಕ್ರಿಶ್ಚಿಯನ್‌ ಆಗಿರುವ ಮಂತ್ರಿಯ ಹೆಸರನ್ನು ಹಾಕಿದ್ದಕ್ಕಾಗಿ ಈ ಅರ್ಜಿಯನ್ನು ದಾಖಲಿಸಲಾಗಿದೆ.

ಉದಾಹರಣೆಗಳನ್ನು ನೀಡಿರುವ ಕೋರ್ಟ್,  ಜನ್ಮತಃ ಕ್ರಿಶ್ಚಿಯನ್ನರಾದ ಡಾ ಕೆಜೆ ಯೇಸುದಾಸ್ ಅವರು ಹಾಡಿರುವ ಭಕ್ತಿಗೀತೆಗಳನ್ನು ವಿವಿಧ ಹಿಂದೂ ದೇವಾಲಯಗಳಲ್ಲಿ ನುಡಿಸಲಾಗುತ್ತದೆ ಎಂದು ನ್ಯಾಯಾಲಯವು ಗಮನಿಸಿದೆ. ನಾಗೌರ್ ದರ್ಗಾ ಮತ್ತು ವೇಲಂಕಣಿ ಚರ್ಚ್‌ಗಳಿಗೆ ಸಹ ಹೆಚ್ಚಿನ ಸಂಖ್ಯೆಯ ಹಿಂದೂ ಆರಾಧಕರು ಯಾವುದೇ ಆಕ್ಷೇಪಣೆಯಿಲ್ಲದೆ ನಿಯಮಿತವಾಗಿ ಭೇಟಿ ನೀಡುತ್ತಾರೆ ಎಂದಿದೆ.

ಇದನ್ನೂ ಓದಿ: Madras High Court: ಪ್ರಕೃತಿ ಮಾತೆಗೂ ಜೀವಂತ ವ್ಯಕ್ತಿ ಸ್ಥಾನ ನೀಡಿದ ಮದ್ರಾಸ್‌ ಕೋರ್ಟ್‌

ಇಂತಹ ದೊಡ್ಡ ಧಾರ್ಮಿಕ ಉತ್ಸವಗಳು ನಡೆದಾಗ ಅಧಿಕಾರಿಗಳು ಪ್ರತಿಯೊಬ್ಬ ವ್ಯಕ್ತಿಯ ಧಾರ್ಮಿಕ ಗುರುತನ್ನು ಪರಿಶೀಲಿಸಿ ನಂತರ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡುವುದು ಅಸಾಧ್ಯ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: Hijab Controversy: ದೇಶ ಮುಖ್ಯವೋ, ಧರ್ಮ ಮುಖ್ಯವೋ: ಮದ್ರಾಸ್‌ ಹೈಕೋರ್ಟ್‌

ನಮ್ಮ ಅಭಿಪ್ರಾಯದಲ್ಲಿ, ಕುಂಭಾಭಿಷೇಕದಂಥ ಸಾರ್ವಜನಿಕ ಉತ್ಸವವನ್ನು ದೇವಸ್ಥಾನದಲ್ಲಿ ಆಚರಿಸಿದಾಗ, ದೇವಾಲಯದ ಪ್ರವೇಶವನ್ನು ಅನುಮತಿಸುವ ಸಲುವಾಗಿ ಪ್ರತಿಯೊಬ್ಬ ಭಕ್ತರ ಧಾರ್ಮಿಕ ಗುರುತನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಅಸಾಧ್ಯವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಇದಲ್ಲದೆ, ಇನ್ನೊಂದು ಧರ್ಮಕ್ಕೆ ಸೇರಿದ ವ್ಯಕ್ತಿಯು ನಿರ್ದಿಷ್ಟ ಹಿಂದೂ ದೇವತೆಯನ್ನು ನಂಬಿದರೆ, ಅವನನ್ನು ತಡೆಯಲಾಗುವುದಿಲ್ಲ ಅಥವಾ ದೇವಾಲಯದ ಪ್ರವೇಶವನ್ನು ನಿರ್ಬಂಧಿಸಲಾಗುವುದಿಲ್ಲ.

click me!