ಸಂಸ್ಕೃತ ಮಾತ್ರ ದೇವಭಾಷೆಯಲ್ಲ, ತಮಿಳು ಮಂತ್ರವೂ ಪಠಣವಾಗಬೇಕು: ಮದ್ರಾಸ್ ಹೈಕೋರ್ಟ್‌!

By Suvarna NewsFirst Published Sep 14, 2021, 8:09 AM IST
Highlights

* ದೇವಭಾಷೆ ಸಂಸ್ಕೃತವಲ್ಲ ಮಾತ್ರವಲ್ಲ, ತಮಿಳು ಕೂಡಾ: ಮದ್ರಾಸ್‌ ಹೈಕೋರ್ಟ್‌

* ದೇಶಾದ್ಯಂತ ದೇಗುಲಗಳಲ್ಲಿ ತಮಿಳು ಮಂತ್ರ ಪಠಣ ಆಗಬೇಕು

* ಸಂಸ್ಕೃತ ಮಾತ್ರ ದೇವಭಾಷೆ ಎಂದು ಬಿಂಬಿಸಲಾಗಿದೆಯಷ್ಟೇ

* ಶಿವನ ಡಮರು ಭೂಮಿಗೆ ಬಿದ್ದಾಗ ಹುಟ್ಟಿದ್ದೇ ತಮಿಳು

* ಸಂಸ್ಕೃತದ ಅಸ್ತತ್ವದ ವರ್ಷ ಊಹೆಯಷ್ಟೇ

* ತಮಿಳು ಅಸ್ತಿತ್ವಕ್ಕೆ ವೈಜ್ಞಾನಿಕ ಆಧಾರವಿದೆ

ಚೆನ್ನೈ(se.೧೪): ‘ದೇವರ ಭಾಷೆ ಎಂದರೆ ಕೇವಲ ಸಂಸ್ಕೃತವಲ್ಲ. ತಮಿಳು ಸೇರಿದಂತೆ ಮಾತನಾಡುವ ಎಲ್ಲಾ ಭಾಷೆಗಳು ಕೂಡಾ ದೇವರ ಭಾಷೆ’ ಎಂದು ಹೇಳಿರುವ ಮದ್ರಾಸ್‌ ಹೈಕೋರ್ಟ್‌, ದೇಶದ ಎಲ್ಲ ದೇವಾಲಯಗಳಲ್ಲಿ ತಮಿಳು ಭಾಷೆಯಲ್ಲಿ ಮಂತ್ರಗಳನ್ನು ಹೇಳಬೇಕೆಂದು ಆದೇಶಿಸಿದೆ.

ಈವರೆಗೆ ಕೇವಲ ಸಂಸ್ಕೃತ ಮಾತ್ರ ದೇವ ಭಾಷೆ ಎಂದು ಬಿಂಬಿಸಲಾಗಿದೆಯಷ್ಟೇ. ತಮಿಳು ಸಂತರಾದ ಅಳ್ವರ್‌, ಅರುಣಗಿರಿನಾಥರು ಹಾಗೂ ನಯನ್ಮಾರ ಅವರಂಥವರು ತಮಿಳು ಮಂತ್ರಗಳನ್ನು ಬರೆದಿದ್ದು, ಅವನ್ನು ದೇವಾಲಯಗಳಲ್ಲಿ ಪಠಿಸಬೇಕು ಎಂದು ನ್ಯಾ| ಕಿರುಬಾಕರನ್‌ ಹಾಗೂ ನ್ಯಾ| ಬಿ. ಪುಗಳೇಂದಿ ಅವರಿದ್ದ ಪೀಠ ಇತ್ತೀಚೆಗೆ ಹೇಳಿದೆ. ಈ ತೀರ್ಪು ನೀಡಿದ ಬಳಿಕ ನ್ಯಾ| ಕಿರುಬಾಕರನ್‌ ನಿವೃತ್ತರಾಗಿದ್ದಾರೆ.

ತಮಿಳು ಮಂತ್ರಗಳನ್ನು ತಮಿಳುನಾಡು ಮುಜರಾಯಿ ಇಲಾಖೆ ದೇಗುಲಗಳಲ್ಲಿ ಪಠಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿ ನ್ಯಾಯಪೀಠ ಈ ಆದೇಶ ನೀಡಿದೆ.

‘ಬೇರೆ ಬೇರೆ ದೇಶಗಳಲ್ಲಿ ಆಯಾ ಪ್ರದೇಶಕ್ಕೆ ತಕ್ಕಂತೆ ಸಂಸ್ಕೃತಿ ಹಾಗು ಧರ್ಮ ಬದಲಾಗುತ್ತವೆ. ಸ್ಥಳೀಯ ಭಾಷೆ ಕೂಡ ಬೇರೆ ಬೇರೆ ಇರುತ್ತಿದ್ದು, ಆ ಭಾಷೆಗಳಲ್ಲೇ ಪೂಜಾ ವಿಧಿ ವಿಧಾನಗಳು ನಡೆಯುತ್ತವೆ. ಆದರೆ ಭಾರತದಲ್ಲಿ ಮಾತ್ರ ಹಾಗಿಲ್ಲ. ಸಂಸ್ಕೃತ ಮಾತ್ರ ದೇವ ಭಾಷೆ. ಮಿಕ್ಕ ಭಾಷೆಗಳು ಅದಕ್ಕೆ ಸಮಾನವಲ್ಲ ಎಂದು ಬಿಂಬಿಸಲಾಗಿದೆ. ಸಂಸ್ಕೃತ ಪುರಾತನ ಭಾಷೆ ಹೌದೆಂದು ನಾವೂ ಒಪ್ಪುತ್ತೇವೆ. ಆದರೆ ಇಲ್ಲಿ ಹುಟ್ಟು ಹಾಕಿರುವ ನಂಬಿಕೆಯಿಂದ, ‘ದೇವರು ಕೇವಲ ಸಂಸ್ಕೃತದಲ್ಲಿ ಮಾತ್ರ ಪ್ರಾರ್ಥಿಸಿದರೆ ಪ್ರಾರ್ಥನೆ ಕೇಳುತ್ತಾನೆ’ ಎಂಬ ನಂಬಿಕೆಯನ್ನು ಭಕ್ತರಲ್ಲಿ ಸೃಷ್ಟಿಸಲಾಗಿದೆ’ ಎಂದು ಪೀಠ ಆಕ್ಷೇಪಿಸಿತು.

‘ತಮಿಳು ಕೇವಲ ವಿಶ್ವದ ಪುರಾತನ ಭಾಷೆ ಮಾತ್ರವಲ್ಲ. ಅದು ‘ದೇವರ ಭಾಷೆ’. ಈಶ್ವರನ ಡಮರು ಆತ ತಾಂಡವ ನೃತ್ಯ ಮಾಡುವಾಗ ಭೂಮಿಗೆ ಬಿದ್ದಿತ್ತಂತೆ. ಆಗ ತಮಿಳು ಹುಟ್ಟಿಕೊಂಡಿತಂತೆ ಎಂದು ಒಂದು ನಂಬಿಕೆ ಇದೆ. ಇನ್ನೊಂದು ನಂಬಿಕೆ ಪ್ರಕಾರ ಮುರುಗ (ಷಣ್ಮುಖ/ಸುಬ್ರಹ್ಮಣ್ಯ/ಸ್ಕಂದ) ದೇವರು ಸಂಸ್ಕೃತದ ಸೃಷ್ಟಿಕರ್ತ’ ಎಂದು ಪೀಠ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು.

‘ಈಶ್ವರನು ಮೊದಲ ತಮಿಳು ಶಿಕ್ಷಣ ಸಭೆ (ತಮಿಳ್‌ ಸಂಗಂ) ನಡೆಸಿದ ಎಂಬ ಪ್ರತೀತಿ ಇದೆ. ತಮಿಳು ಕವಿಗಳ ಪಾಂಡಿತ್ಯ ಅಳೆಯಲು ಆತ ಉತ್ಸವ ಕೂಡ ನಡೆಸಿದ್ದನಂತೆ. ಇದರಿಂದಾಗಿ ತಮಿಳು ಭಾಷೆಯು ದೇವರಿಗೆ ಸಂಪರ್ಕದಲ್ಲಿದ್ದ ಭಾಷೆ ಎಂದು ಸಾಬೀತಾಗುತ್ತದೆ. ಹೀಗಾಗಿ ಅದು ದೇವ ಭಾಷೆ ಎಂದು ಎನ್ನಿಸಿಕೊಳ್ಳುತ್ತದೆ’ ಎಂದಿತು.

ಪ್ರತಿ ಭಾಷೆಯೂ ದೇವ ಭಾಷೆ. ಮನುಷ್ಯನಿಗೆ ಭಾಷೆ ಸೃಷ್ಟಿಸಲು ಆಗದು. ಶತಮಾನಗಳಿಂದ ಭಾಷೆಗಳು ಅಸ್ತಿತ್ವದಲ್ಲಿದ್ದು ಒಂದು ಪೀಳಿಗೆಯಿಂದ ಇನ್ನೊಂದಕ್ಕೆ ಹಸ್ತಾಂತರ ಆಗುತ್ತಿವೆ. ಇದ್ದ ಭಾಷೆ ಸುಧಾರಣೆ ಆಗಬಹುದು. ಆದರೆ ಹೊಸ ಭಾಷೆ ಸೃಷ್ಟಿಸಲು ಸಾಧ್ಯವೇ ಎಂದು ಕೋರ್ಟ್‌ ಪ್ರಶ್ನಿಸಿತು.

‘ತಮಿಳು ಮಂತ್ರಗಳನ್ನು ತಮಿಳುನಾಡಿನ ದೇಗುಲಗಳಲ್ಲಿ ಹೇಳದೇ ಇನ್ನೆಲ್ಲಿ ಹೇಳಬೇಕು?’ ಎಂದು ಕೇಳಿದ ಪೀಠ, ‘ತಮಿಳು ಸಾಧು ಸಂತರು ದೇವರನ್ನು ಹೊಗಳಿ ಅನೇಕ ಮಂತ್ರಸಾಹಿತ್ಯ ರಚಿಸಿದ್ದಾರೆ. ಶಿವ, ಮುರುಗ, ತಿರುಮಾಳ್‌ ದೇವರಿಗೆ ಈ ಭಾಷೆ ಅರ್ಥ ಆಗದೇ ಹೋದರೆ, ಈ ದೇವರನ್ನು ಹೊಗಳಿ ಮೇರು ಸಾಧುಸಂತರೇಕೆ ತಮಿಳು ಮಂತ್ರ ಬರೆಯುತ್ತಿದ್ದರು? ಹೀಗಾಗಿ ದೇವರಿಗೆ ಒಂದೇ ಭಾಷೆ ಬರುತ್ತದೆ ಎಂಬ ವಾದದಲ್ಲಿ ಅರ್ಥವಿಲ್ಲ’ ಎಂದಿತು.

‘ಸಂಸ್ಕೃತ ಕ್ರಿ.ಪೂ. 1ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂತು ಎಂಬ ನಂಬಿಕೆ ಇದೆ. ಆದರೆ ಅದಕ್ಕೆ ವೈಜ್ಞಾನಿಕ ಆಧಾರವಿಲ್ಲ. ಆದರೆ ತಮಿಳು ಅಸ್ತಿತ್ವಕ್ಕೆ ಬಂದ ವೈಜ್ಞಾನಿಕ ಆಧಾರವಿದೆ. ಹಾಗಾಗಿ ಒಂದು ಭಾಷೆ ಮಾತ್ರ ದೇವಭಾಷೆ. ಇನ್ನೊಂದು ಭಾಷೆ ದೇವ ಭಾಷೆಯಲ್ಲ ಎನ್ನಲಾಗದು’ ಎಂದು ಅಭಿಪ್ರಾಯಪಟ್ಟಿತು.

click me!