
ನವದೆಹಲಿ, (ಸೆ.13) : ಬ್ರದರ್ ಆಸ್ಕರ್...! ಹೀಗಂತಲೇ ದೆಹಲಿಯ ಕಾಂಗ್ರೆಸ್ ಪಾಳಯದಲ್ಲಿ ಹೆಚ್ಚು ಚಿರಪರಿಚಿತರು. ಬಹುಶಃ ಈ ಎರಡು ಪದಗಳಿಗೆ ಆಸ್ಕರ್ ಫರ್ನಾಂಡೀಸ್ ಅವರು ಜೀವ ಹೊಯ್ದವರು ಹಾಗು ಜೀವ ತೇಯ್ದವರು ಕೂಡ. ಇಂದ್ರಪ್ರಸ್ಥದ ಜನಪತ್ ರಸ್ತೆಯಲ್ಲಿ ಗಟ್ಟಿಯಾಗಿ ನಿಂತು ಕಾಂಗ್ರೆಸ್ ಎಂಬ ಮಹಾವೃಕ್ಷದ ಕಟ್ಟೆಯ ಕಲ್ಲುಗಳು ಸಡಿಲ ಆಗದಂತೆ ನೋಡಿಕೊಂಡವರು ಈ ಆಸ್ಕರ್ ಫರ್ನಾಂಡೀಸ್.
`ಕೈ' ಪಾಳಯದಲ್ಲಿ ಅವರು ನಿಜವಾಗ್ಲೂ ಬ್ರದರ್. ಪಕ್ಷದ ಕಾರ್ಯಕರ್ತರು, ಮುಖಂಡರ ಪಾಲಿಗೆ ಅವರು `ಡೆಲ್ಲಿ ಸಹೋದರನೇ'. ಹೆಚ್ಚು ಕಡಿಮೆ ಮೂರೂವರೆ ನಾಲ್ಕು ದಶಕಗಳ ಕಾಲ ಆಸ್ಕರ್ ಅವರು ಓಡಾಡಿದ, ಪವರ್ ಫುಲ್ ಹೌಸ್ ಇರುವ ಜನಪತ್ ರಸ್ತೆಯಲ್ಲಿ ಇವತ್ತು ಸಾಗುತ್ತಿದ್ದಾಗ ಸಿಕ್ಕ ಕೆಲ ಕಾಂಗ್ರೆಸ್ ನಾಯಕರು ಹಲವು ನೆನಪುಗಳನ್ನು ಮೆಲುಕು ಹಾಕುತ್ತಿದರು.
ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ನಿಧನಕ್ಕೆ ಗಣ್ಯರ ಕಂಬನಿ
ಒಂದು ಫೋನ್ ಕಾಲ್, ಒಂದು ಲೆಟರ್
ದೆಹಲಿಯ ಅವರ ನಿವಾಸ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಪತ್ರಕರ್ತರಿಗೂ ಎಲ್ಲರಿಗೂ ಸದಾ ಓಪನ್. 365 ದಿನಗಳೂ ಓಪನ್. `ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ನಾನು ಓಡಾಡಿದ್ದೇನೆ, ಬಾವುಟ ಕಟ್ಟಿದ್ದಾನೆ, ಪಕ್ಷ ಅಧಿಕಾರದಲ್ಲಿದೆ. ನಮ್ಮನ್ನು ಗಮನಿಸುವವರೇ ಇಲ್ಲ ಅಂಥ ನೊಂದುಕೊಳ್ಳುವವರ ಪಾಲಿಗೆ ಬಿಗ್ ಬ್ರದರ್. ಪಕ್ಷದ ಕಟ್ಟಾಳು ದೇಶದ ಯಾವುದೇ ಮೂಲೆಯಲ್ಲಿ ಇರಲಿ ಅವರನ್ನು ಗುರುತಿಸಿ, ಕರೆದು ಹುದ್ದೆಗಳು ನೀಡಿ, ಜವಾಬ್ದಾರಿ ವಹಿಸುವ ಕಲೆ ಅವರಿಗೆ ಸಿದ್ದಿಸಿತ್ತು. ಹೀಗೆ ಅದೆಷ್ಟೋ ಹೊಸ ತಲೆಮಾರಿನ ನಾಯಕರನ್ನು ಬೆಳಿಸಿದ್ದಾರೆ. ಅವರ ಟ್ಯಾಲೆಂಟ್ ಗುರುತಿಸಿ ಪಕ್ಷಕ್ಕೆ ಅವರ ಸೇವೆ ಬಳಸಿಕೊಂಡಿದ್ದಾರೆ.
ಇನ್ನು ಸಮಸ್ಯೆ ಇದೆ ಅಂತ ಬಂದವರನ್ನು ಸಮಾಧಾನವಾಗಿ ಕೂರಿಸಿಕೊಂಡು ಸಂಬಂಧಪಟ್ಟವರಿಗೆ ಒಂದು ಫೋನ್ ಮಾಡಿ, ಲೆಟರ್ ಕೊಟ್ಟು ಕಳುಹಿಸುತ್ತಿದ್ದರು. ಹೀಗೆ ಲೆಟರ್ ಪಡೆದು ಹೋದ ಅದೆಷ್ಟೋ ಕಾರ್ಯಕರ್ತರ ಮನಸ್ಸಿಗೆ ಖುಷಿಯಾಗುವಂತೆ ಅವರ ಕೆಲಸ ಮಾಡಿಕೊಡುವಂತೆ ನೋಡಿಕೊಂಡಿದ್ದಾರೆ ಆಸ್ಕರ್ ಸಾಹೇಬ್ರು. ಸಾಮಾನ್ಯಕ್ಕೆ ದೆಹಲಿ ರಾಜಕೀಯ ಪಡಸಾಲೆಯಲ್ಲಿ ಕೆಲಸಗಳು ನಡೆಯುವುದು ನಡುರಾತ್ರಿಯಲ್ಲೇ. ಮಧ್ಯರಾತ್ರಿ ಹೋದರೂ ಕೂಡ ಆಸ್ಕರ್ ಫರ್ನಾಂಡೀಸ್ ಕಾರ್ಯಕರ್ತರಿಗೆ, ಮುಖಂಡರಿಗೆ ಸಿಗ್ತಾ ಇದ್ರು. ಇನ್ನು ಹೈಕಮಾಂಡ್ ನಾಯಕರಿಗೂ-ಕೈ ಪಾಳದ ಪ್ರಮುಖ ನಾಯಕರಿಗೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು ಈ ಡೆಲ್ಲಿ ಆಸ್ಕರ್ ಸಾಹೇಬ್ರು. ಅದು ಎಐಸಿಸಿ ಕಚೇರಿ ಇರಲಿ ಅಥವಾ ಮನೆಯ ಕಚೇರಿ ಇರಲಿ ಯಾವಾಗಲೂ ಜನರಿಂದ ಗಿಜುಗುಡುತ್ತಿತ್ತು.
ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ನಿಧನ!
ಗಾಂಧಿ ಕುಟುಂಬಕ್ಕೆ ಆಪ್ತ
ಆಸ್ಕರ್ ಫರ್ನಾಂಡೀಸ್ ಅವರು ಹೇಳಿದ ಮಾತಿಗೆ, ಮುಂದಿಡುವ ಕಾಗದಗಳಿಗೆ ಕಣ್ಣು ಮುಚ್ಚಿಕೊಂಡು ಸಹಿ ಹಾಕ್ತಿತ್ತು ಕಾಂಗ್ರೆಸ್ ಹೈಕಮಾಂಡ್. ಅದರಲ್ಲೂ ಸೋನಿಯಾ ಗಾಂಧಿಯವರ ಜಮಾನದಲ್ಲಿ ಆಸ್ಕರ್ ಅವರ ಹೇಳಿದ ಮಾತಿಗೆ ಮರು ಮಾತನಾಡುತ್ತಿರಲಿಲ್ಲ ಸೋನಿಯಾ ಗಾಂಧಿ. ಇದಕ್ಕೆ ಕಾರಣ ಅವರಲಿದ್ದ ಪಕ್ಷದ ನಿಷ್ಠೆ ಹಾಗು ಗಾಂಧಿ ಕುಟುಂಬ ಇವರ ಮೇಲೆ ಇಟ್ಟಿದ್ದ ನಂಬಿಕೆ. ಈ ಎರಡನ್ನೂ ಜೀವನದ ಕೊನೆಯ ತನಕ ಉಳಿಸಿಕೊಂಡು, ಕಾಪಾಡಿಕೊಂಡು ಬಂದಿದ್ದರು ಆಸ್ಕರ್ ಸಾಹೇಬ್ರು. ಇಷ್ಟೆಲ್ಲಕ್ಕೂ ಕಾರಣ ಅವರು ಅಧಿಕಾರ, ಕುರ್ಚಿ ಅಂಥ ಹಿಂದೆ ಬೀಳದೆ ಹೈಕಮಾಂಡ್ ಕೊಟ್ಟ ಜವಾಬ್ದಾರಿಯನ್ನು ಪಕ್ಕಾ ನಿಭಾಯಿಸಿಕೊಂಡು ಬರುತ್ತಿದ್ದರು. ಅದರಲ್ಲೂ ಕರ್ನಾಟಕ ಕಾಂಗ್ರೆಸ್‌ಗೆ ಸಂಬAಧಪಟ್ಟ ತೀರ್ಮಾನಗಳಿಗೆ ಇವರೇ ಅಂತಿಮ ಷರಾ ಬರೆಯುತ್ತಿದ್ದರು.
ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರ ಜೊತೆ ಕೆಲಸ ಮಾಡಿದ ಅನುಭವ ಇದ್ದ ಆಸ್ಕರ್ ಅವರನ್ನು, ಪಕ್ಷದ ಕೆಲಸಗಳು ನಿಭಾಯಿಸಲು ಸೋನಿಯಾ ಗಾಂಧಿಯವರು ಪೂರ್ತಿಯಾಗಿ ಬಳಸಿಕೊಂಡರು. ಸೋನಿಯಾ ಗಾಂಧಿ ಕಿಚನ್ ಕ್ಯಾಬಿನೆಟ್ ಪ್ರಮುಖ ಸದಸ್ಯ ಅಂದರೂ ಕೂಡ ತಪ್ಪಾಗಲಾರದು. ಯಾವುದೇ ತೀರ್ಮಾನ ಇರಲಿ ಅದರ ಸರಿ-ತಪ್ಪುಗಳು ನೇರವಾಗಿ ಸೋನಿಯಾ ಗಾಂಧಿಯವರಿಗೆ ಹೇಳ್ತಾ ಇದ್ದ ಕಾರಣಕ್ಕೆ ಆಸ್ಕರ್ ಫರ್ನಾಂಡೀಸ್ ಮೇಡಂಗೆ ಬಹಳ ಇಷ್ಟವಾಗಿದ್ರು ಎನ್ನುತ್ತೆ ಕೈ ಪಾಳಯ. ಜೊತೆಗೆ ಸೀದಾಸಾದಾ ಉಡುಗೆ, ಸರಳ ವ್ಯಕ್ತಿತ್ವ, ಮಿತಿ ಆಹಾರ ಇವೆಲ್ಲಾ ಕ್ಯಾಪಿಟಲ್ ಡೆಲ್ಲಿಯಲ್ಲಿ ಅವರ ಏಳಿಗೆಗೆ ಕಾರಣವಾದವು.
ಜ್ಯೋತಿಷ್ಯದ ಮೇಲೆ ಸಿಕ್ಕಾಪಟ್ಟೆ ನಂಬಿಕೆ
ಆಸ್ಕರ್ ಅವರ ದೌರ್ಬಲ್ಯವೋ ಅಥವಾ ನಂಬಿಕೆಯೋ ಗೊತ್ತಿಲ್ಲ ಅವರಿಗೆ ಜ್ಯೋತಿಷ್ಯವನ್ನು ಅವರು ಸಿಕ್ಕಾಪಟ್ಟೆ ನಂಬ್ತಾ ಇದ್ರು. ಅವರ ಆಪ್ತರಿಗೆ ನಂಬಲು ಹೇಳ್ತಾ ಇದ್ರು. ಅವರ ಮನೆಗೆ ಬರುತ್ತಿದ್ದ ಧಾರ್ಮಿಕ ಮುಖಂಡರು, ಸಾಧು-ಸಂತರು, ಸ್ವಾಮೀಜಿಗಳು ಬರುವುದನ್ನು ನೋಡುತ್ತಿದ್ದ ಕಾರ್ಯಕರ್ತರಿಗೆ ಇವರ ನಡೆಯ ಬಗ್ಗೆ ಆಶ್ಚರ್ಯವೋ ಆಶ್ಚರ್ಯ. ಅದೇ ರೀತಿ ಯಕ್ಷಗಾನದಲ್ಲೂ ಎತ್ತಿದ ಕೈ. ದೆಹಲಿ ಕನ್ನಡ ಸಂಘದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಸಂಧಾನ ಪ್ರಸಂಗದಲ್ಲಿ ಮಾಜಿ ಸಿಎಂ ವೀರಪ್ಪಮೊಯ್ಲಿ ಅವರ ಜೊತೆ ಸೇರಿ ಆಸ್ಕರ್ ಫರ್ನಾಂಡೀಸ್ ಅವರು ವೇಶ ಹಾಕಿದ್ದರು. ಅದ್ಯಾರೋ ವೈದ್ಯರು ಪರ್ಕಿನ್‌ಸನ್ ಕಾಯಿಲೆ ನಿಮಗೆ ಕಾಡಬಹುದು. ಇದು ಬರದಂತೆ ತಡೆಯಲು ಭರತನಾಟ್ಯ ಕಲಿತರೇ ಒಳಿತು ಎಂದಿದ್ದರಂತೆ. ಆಗ ಅದರ ಬಗ್ಗೆಯೂ ಆಸಕ್ತಿ ತೋರಿದ್ದರಂತೆ ಆಸ್ಕರ್ ಸಾಹೇಬ್ರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ