
ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತದೆ. ಇದಕ್ಕಾಗಿ ಮಕ್ಕಳು ಮನೆಯಿಂದ ತಟ್ಟೆ ತೆಗೆದುಕೊಂಡು ಹೋಗುತ್ತಾರೆ. ಮಧ್ಯಾಹ್ನದ ಬಿಸಿಯೂಟಕ್ಕಾಗಿ ಸರ್ಕಾರ ಕೋಟ್ಯಾಂತರ ರೂ ಖರ್ಚು ಮಾಡುತ್ತದೆ. ಆದರೆ ಇಲ್ಲೊಂದು ಕಡೆ ಮಧ್ಯ ಪ್ರದೇಶದ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಒಣ ಅವಲಕ್ಕಿ ನೀಡುವಂತೆ ರದ್ದಿ ಪೇಪರ್ ಮೇಲೆ ನೀಡಿದಂತಹ ಘಟನೆ ನಡೆದಿದ್ದು, ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಮಕ್ಕಳನ್ನು ಅಪೌಷ್ಠಿಕತೆ ಮುಕ್ತ ಮಾಡಬೇಕು ಅವರ ಹಸಿವನ್ನು ಮುಕ್ತ ಮಾಡಬೇಕು ಎಂಬ ಉದ್ದೇಶದಿಂದ ದೇಶದೆಲ್ಲೆಡೆ ಸರ್ಕಾರಗಳು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ಪೂರೈಕೆ ಹಾಲು ಮೊಟ್ಟೆ ಮುಂತಾದ ಪೌಷ್ಠಿಕ ಆಹಾರವನ್ನು ಇದು ಒಳಗೊಂಡಿದೆ. ಆದರೆ ಊಟ ತಿನ್ನುವುದಕ್ಕೆ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳೇ ತಟ್ಟೆ ತೆಗೆದುಕೊಂಡು ಹೋಗುತ್ತಾರೆ. ತಟ್ಟೆ ಇಲ್ಲದವರು ಊಟದ ಡಬ್ಬಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಇಲ್ಲಿ ಇದು ಮಕ್ಕಳ ಪೋಷಕರ ನಿರ್ಲಕ್ಷ್ಯವೋ ಶಿಕ್ಷಕರ ಹಾಗೂ ಶಾಲಾ ಸಿಬ್ಬಂದಿ ವರ್ಗದವರ ನಿರ್ಲಕ್ಷ್ಯವೋ ಗೊತ್ತಿಲ್ಲ. ಶಾಲೆಯ ಮಕ್ಕಳಿಗೆ ಇಲ್ಲಿ ಹಳೇ ನ್ಯೂಸ್ ಪೇಪರ್ ಮೇಲೆ ಆಹಾರವನ್ನು ಬಡಿಸಲಾಗಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದ್ದು, ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಯಾಯ ಪ್ರದೇಶಕ್ಕೆ ತಕ್ಕಂತೆ ಬಿಸಿಯೂಟ ಯೋಜನೆಯಡಿ ಆಹಾರವನ್ನು ನೀಡಲಾಗುತ್ತದೆ. ಇದು ಮಧ್ಯಪ್ರದೇಶವಾಗಿರುವುದರಿಂದ ಇಲ್ಲಿನ ಪ್ರಮುಖ ಆಹಾರ ಚಪಾತಿ(ರೋಟಿ) ಆಗಿರುವುದರಿಂದ ಮಕ್ಕಳಿಗೆ ಇಲ್ಲಿ ರೋಟಿ ಮತ್ತು ಸಾರನ್ನು ನೀಡಲಾಗಿದೆ. ವೀಡಿಯೋದಲ್ಲಿ ಕಾಣುವಂತೆ ಮಕ್ಕಳು ಒಂದು ಕೈನಲ್ಲಿ ರೋಟಿ ಹಿಡಿದುಕೊಂಡು ಮತ್ತೊಂದು ಕೈನಿಂದ ನೆಲದ ಮೇಲೆ ಹಾಸಿದ ಪೇಪರ್ ಮೇಲೆ ಸುರಿದ ಸಾರಿಗೆ ಮುಟ್ಟಿಸಿ ತಿನ್ನುತ್ತಿದ್ದಾರೆ. ಕೆಲ ಮಕ್ಕಳ ಕೈಯಲ್ಲಿ ಸಣ್ಣದಾದ ಪೇಪರ್ ಬೌಲ್‌ಗಳು ಇರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಆದರೆ ಮಕ್ಕಳನ್ನು ಕೂರಿಸಿರುವ ಸ್ಥಳವೂ ಕೂಡ ತುಂಬಾ ಕೆಟ್ಟದಾಗಿದು ಅಲ್ಲೇ ಸಮೀಪದಲ್ಲೇ ಕಸ ಕಡ್ಡಿ ಪೇಪರ್ ತುಂಡುಗಳು ಬಿದ್ದಿರುವುದನ್ನು ಕಾಣಬಹುದಾಗಿದೆ. ಮಕ್ಕಳು ಇಲ್ಲಿ ಕೊಕ್ಕರೆ ಕಾಲಿನಲ್ಲಿ ಗೋಡೆ ಪಕ್ಕ ಸಾಲಾಗಿ ಕುಳಿತು ಆಹಾರವನ್ನು ಸೇವಿಸುವುದನ್ನು ಕಾಣಬಹುದಾಗಿದೆ. ಪೇಪರ್ ಮೇಲೆ ಸಾರನ್ನು ಬಡಿಸಿರುವುದರಿಂದ ಅದು ಮೆತ್ತಗಾಗಿ ನೆಲಕ್ಕೆ ಅಂಟಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಆಗಷ್ಟೇ ಮಳೆ ಬಂದು ಹೋದಂತೆ ಕಾಣುತ್ತಿದ್ದು, ಅಲ್ಲಿನ ನೆಲವೂ ಒದ್ದೆಯಾಗಿದೆ. ಮಕ್ಕಳು ಊಟಕ್ಕೆ ಕುಳಿತ ಸರಿ ಮುಂಭಾಗದಲ್ಲೇ ನೀರಿನ ಜೊತೆ ಕೊಚ್ಚೆ ಇರುವುದನ್ನು ಕಾಣಬಹುದು.
ಅಂದಹಾಗೆ ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ವಿಜಯಪುರ ಬ್ಲಾಕ್‌ನ ಹುಲ್ಪುರ್ ಗ್ರಾಮದ ಶಾಲೆಯಲ್ಲಿ. ಈ ವೀಡಿಯೋ ವೈರಲ್ ಆದ ನಂತರ ಶಿಯೋಪುರ್ ಜಿಲ್ಲಾ ಕಲೆಕ್ಟರ್ ಅರ್ಪಿತ್ ವರ್ಮಾ ಅವರು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಅವರಿಂದ ತಕ್ಷಣದ ತನಿಖೆಗೆ ಆದೇಶಿಸಿದ್ದಾರೆ. ತನಿಖೆ ನಡೆಸಿದಾಗ ಈ ರೀತಿ ಮಾಡಿರುವುದು ನಿಜ ಎಂದು ಸಾಬೀತಾಗಿದ್ದು, ಅಲ್ಲಿನ ಬಿಸಿಯೂಟ ಸಿಬ್ಬಂದಿಯನ್ನು ವಜಾ ಮಾಡಿ ಶಾಲೆಯ ಪ್ರಾಂಶುಪಾಲರಿಗೆ ನೊಟೀಸ್ ನೀಡಲಾಗಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಪೌಷ್ಟಿಕ ಮತ್ತು ಆರೋಗ್ಯಕರ ಊಟವನ್ನು ಒದಗಿಸುವ ಗುರಿಯನ್ನು ಹೊಂದಿರುವ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ (ಪಿಎಂ ಪೋಷಣ್) ಯೋಜನೆಯ ಅನುಷ್ಠಾನದಲ್ಲಿ ಹೇಗೆ ಶಾಲೆಗಳು ವಿಫಲವಾಗಿವೆ ಎಂಬುದನ್ನು ಈ ಘಟನೆ ತೋರಿಸಿದೆ. ಮಧ್ಯಪ್ರದೇಶದ 88,299 ಶಾಲೆಗಳ ಪೈಕಿ 87,567 ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಪೂರೈಕೆ ಮಾಡಲಾಗುತ್ತದೆ. ಆದರೆ 732 ಶಾಲೆಗಳಲ್ಲಿ ಇನ್ನು ಬಿಸಿಯೂಟ ಪೂರೈಕೆ ಇಲ್ಲ ಎಂಬುದು ಸರ್ಕಾರಿ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಆಡಳಿತಾರೂಢ ಬಿಜೆಪಿ 2023 ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಮಧ್ಯಾಹ್ನದ ಊಟದ ಗುಣಮಟ್ಟವನ್ನು ಹೆಚ್ಚಿಸುವ ಭರವಸೆ ನೀಡಿತ್ತು. ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಶಾಲಾ ಶಿಕ್ಷಣ ಇಲಾಖೆಗಳು ಮಕ್ಕಳಿಗೆ ಸಮತೋಲಿತ ಪೋಷಣೆ ಮತ್ತು ಪೌಷ್ಟಿಕ ಆಹಾರದ ಜೊತೆಗೆ ಟೆಟ್ರಾ-ಪ್ಯಾಕ್ಡ್ ಹಾಲನ್ನು ನೀಡುವ ಪ್ರಸ್ತಾಪವನ್ನು ಚರ್ಚಿಸಿದ್ದವು.
ಇದನ್ನೂ ಓದಿ: ಒತ್ತಾಯ ಮಾಡಿ ಶಾಲೆಗೆ ಕಳುಹಿಸಿದ ಪೋಷಕರಿಗೆ ಉಸಿರಿರುವವರೆಗೂ ಕೊರಗುವಂತೆ ಮಾಡಿದ ಮಗಳು
ಇದನ್ನೂ ಓದಿ: ಹೊಸ ಸೇಫ್ಟಿಪಿನ್ ಬಿಡುಗಡೆ ಮಾಡಿದ ಪ್ರಾಡಾ: ಇದರ ಬೆಲೆಗೆ ಟಿವಿ ಫ್ರಿಡ್ಜ್ ಎಲ್ಲಾ ಬರುತ್ತೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ