ಇಂದೋರ್(ಮೇ.05): 1 ಮಾವಿನ ಹಣ್ಣು ಸಾಮಾನ್ಯವಾಗಿ 100-300 ಗ್ರಾಂ ತೂಕ ಇರುವುದು ಸಹಜ. ಆದರೆ ಮಧ್ಯಪ್ರದೇಶ ಕಥ್ಥಿವಾಡಾ ಪ್ರದೇಶದಲ್ಲಿ ಬೆಳೆಯಾಗುವ ವಿಶೇಷ ತಳಿಯ ಮಾವಿನ ಹಣ್ಣಿನ ಗರಿಷ್ಠ ತೂಕ 4 ಕೆಜಿಯವರೆಗೂ ಇರುತ್ತದೆ. ಅತ್ಯಂತ ಸಿಹಿಯಾಗಿರುವ ಈ ಮಾವಿನ ಹಣ್ಣಿನ ದರವೂ ಬಲು ದುಬಾರಿ. ಒಂದು ಹಣ್ಣಿನ ಬೆಲೆ 1000-2000 ರು.ವರೆಗೂ ತಲುಪುತ್ತದೆಯಂತೆ.
ಹೌದು. ಅಷ್ಘಾನಿಸ್ತಾನದ ಮೂಲದ ನೂರ್‌ಜಹಾನ್ ಎಂಬ ಈ ತಳಿಯ ಮಾವಿನ ಹಣ್ಣು 1 ಅಡಿ ಉದ್ದ ಮತ್ತು 4 ಕೆಜಿ ತೂಕವಿರುತ್ತದೆ. ಇದರ ಮರದಲ್ಲಿ ಹೂವು ಬಿಡುವಿಕೆಯು ಜನವರಿಯಿಂದ ಫೆಬ್ರುವರಿ ತಿಂಗಳಿನಲ್ಲಿ ಆರಂಭವಾಗುತ್ತದೆ. ಜೂನ್ ಮೊದಲನೇ ವಾರದವರೆಗೆ ಹಣ್ಣು ಬಲಿತು ಮಾರುಕಟ್ಟೆಗೆ ಬರಲು ಸಿದ್ಧವಾಗುತ್ತದೆ.
‘ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಮರಗಳಲ್ಲಿ ಕಾಯಿಯಾಗುವ ಮೊದಲೇ ಹೂವುಗಳು ಉದುರಿ ಹೋಗಿದ್ದು, ಸುಮಾರು 3 ಮರಗಳಲ್ಲೇ ಒಟ್ಟು 250 ಮಾವಿನ ಹಣ್ಣುಗಳಿವೆ. ಈ ವರ್ಷ ಪ್ರತಿ ಹಣ್ಣನ್ನು 1000 ರಿಂದ 2000 ರು ವರೆಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಕಳೆದ ವರ್ಷ ಪ್ರತಿ ಹಣ್ಣು 500 ರಿಂದ 1500 ರು. ವರೆಗೂ ಮಾರಾಟವಾಗಿತ್ತು. ಜೂನ್ ತಿಂಗಳಿನಲ್ಲಿ ಹಣ್ಣುಗಳನ್ನು ಮಾರುಕಟ್ಟೆಗೆ ಕಳುಹಿಸಲಾಗುವುದು. ಈ ವಿಶೇಷ ಮಾದರಿಯ ಹಣ್ಣನ್ನು ಸವಿಯಲು ಮಾವು ಪ್ರಿಯರು ಒಂದು ತಿಂಗಳ ಮುಂಚೆಯೇ ಹಣ್ಣಿಗಾಗಿ ಬುಕ್ಕಿಂಗ್ ಆರಂಭಿಸಿದ್ದಾರೆ’ ಇಂದೋರ್‌ನ ಮಾವು ಬೆಳೆಗಾರ ಶಿವರಾಜ್ ಸಿಂಗ್ ಜಾಧವ್ ಹೇಳಿದ್ದಾರೆ.
ಮಾವಿನ ಬೆಳೆಯ ವಿಸ್ತರಣೆ, ಸಂಸ್ಕರಣೆಗೆ ಹೆಚ್ಚಿನ ಒತ್ತು
ಕೇಂದ್ರ ಸರ್ಕಾರದ ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಜಿಲ್ಲೆಗೆ ಮಾವಿನ ಬೆಳೆಯನ್ನು ಗುರುತಿಸಲಾಗಿದ್ದು ಮಾವಿನ ಬೆಳೆಯ ವಿಸ್ತರಣೆ, ಸಂಸ್ಕರಣೆ, ಕೊಯ್ಲೋತ್ತರ ನಿರ್ವಹಣೆ, ಶೇಖರಣೆ ಮತ್ತು ಮಾರಾಟಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತದೆ ಎಂದು ಹನುಮನಮಟ್ಟಿಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಅಶೋಕ ಪಿ. ಹೇಳಿದರು.
ತಾಲೂಕಿನ ಹನುಮನಮಟ್ಟಿಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಾನಗಲ್ಲ ತಾಲೂಕಿನ ಹುಡ ಗ್ರಾಮದ ಪ್ರಗತಿಪರ ರೈತ ಫಕ್ಕೀರಪ್ಪ ರಾವಳ ಇವರ ಮಾವಿನ ತೋಟದಲ್ಲಿ ಮಾವಿನ ಬೆಳೆಯ ಸಮಗ್ರ ನಿರ್ವಹಣೆ ಕುರಿತು ಏರ್ಪಡಿಸಲಾಗಿದ್ದ ರೈತ ಕ್ಷೇತ್ರ ಪಾಠಶಾಲೆಯ ಕ್ಷೇತ್ರೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ 25 ರೈತರು ಮಾವಿನ ಬೆಳೆಯಲ್ಲಿ ಅಂತರ ಬೆಳೆ, ಮಣ್ಣು ಪರೀಕ್ಷೆ ಆಧಾರಿತ ಪೋಷಕಾಂಶಗಳ ನಿರ್ವಹಣೆ, ಲಘುಪೋಷಕಾಂಶಗಳ ನಿರ್ವಹಣೆಗೆ ಮಾವು ಸ್ಪೇಷಲ್ ಬಳಕೆ, ಮುಖ್ಯ ರೋಗ ಮತ್ತು ಕೀಟಗಳ ಸಮಗ್ರ ನಿರ್ವಹಣೆ, ಕೊಯ್ಲು ಮತ್ತು ಮಾರಾಟದ ಕುರಿತು ಸಾಕಷ್ಟುಮಾಹಿತಿಯನ್ನು ಪಡೆದುಕೊಂಡು ಅದನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದಾರೆ. ಇತರೆ ಮಾವಿನ ಬೆಳೆಗಾರರು ಈ ರೈತರನ್ನು ಅನುಸರಿಸುವುದರಿಂದ ಹೆಚ್ಚಿನ ಇಳುವರಿ ಮತ್ತು ಆದಾಯವನ್ನು ಪಡೆಯಬಹುದು ಎಂದರು.
ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ್ ಎಚ್.ಎಂ. ಮಾತನಾಡಿ, ರೈತರು ಮಾಗಿದ ಮಾವಿನ ಕಾಯಿಗಳನ್ನು ಉದ್ದವಾದ ತೊಟ್ಟು ಬಿಟ್ಟು ಕೊಯ್ಲು ಮಾಡಬೇಕು. ಈ ರೀತಿ ಮಾಡುವುದರಿಂದ ಕಾಯಿಗಳಿಂದ ಒಸರುವ ರಸ ಹಣ್ಣಿಗೆ ತಾಗಿ ಗಾಯಗಳಾಗುವುದನ್ನು ತಡೆಯಬಹುದು. ಒಂದು ಉದ್ದವಾದ ಕೋಲಿನ ಕೊಕ್ಕೆ ತುದಿಗೆ ಕಬ್ಬಿಣದ ರಿಂಗನ್ನು ಅಳವಡಿಸಿ ಚೀಲವನ್ನು ಕಟ್ಟಿರುವ ಸಾಧನವನ್ನು ಉಪಯೋಗಿಸಿ ಕೋಯ್ಲು ಮಾಡಿದರೆ ಮಾವಿನ ಕಾಯಿಗಳಿಗಾಗುವ ಹಾನಿಯನ್ನು ತಡೆಗಟ್ಟಬಹುದು. ಕೊಯ್ಲು ಮಾಡಿದ ಕಾಯಿಗಳನ್ನು ನೆರಳಿನಲ್ಲಿ ಶೇಖರಿಸಿ ಇಡಬೇಕು. ನಂತರ ಪ್ಲಾಸ್ಟಿಕ್ ಟ್ರೇಗಳನ್ನು ಬಳಸಿ ಸಾಗಾಣಿಕೆ ಮಾಡಬೇಕು. ಕಾಯಿಗಳನ್ನು ಹಣ್ಣು ಮಾಡಲು ಇಥ್ರೆಲ್ ದ್ರಾವಣವನ್ನು ಬಳಸಬೇಕು. ನಿಷೇದಿಸಲ್ಪಟ್ಟಕ್ಯಾಲ್ಸಿಯಂ ಕಾರ್ಬಡೈನ್‌ಗಳನ್ನು ಹಣ್ಣನ್ನು ಮಾಗಿಸಲು ಬಳಸಬಾರದು. ಹಣ್ಣುಗಳನ್ನು ಪ್ಯಾಕಿಂಗ್ ಮಾಡಲು ಸಿ.ಎಫ್.ಬಿ ಪೆಟ್ಟಿಗೆಗಳನ್ನು ಬಳಸಬೇಕು ಎಂದರು.
ಕೇಂದ್ರದ ಪಶುವಿಜ್ಞಾನಿ ಡಾ. ಮಹೇಶ ಕಡಗಿ, ಪ್ರಗತಿಪರ ರೈತ ಫಕ್ಕೀರಪ್ಪ ರಾವಳ ಮಾತನಾಡಿದರು. ಗ್ರಾಮದ ಕುಮಾರೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಮಾವು ಬೆಳೆಯ ರೈತರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ